ಕಬ್ಬು ಬೆಳೆಗಾರರ ಬಾಕಿ ಹಣ ಶೀಘ್ರ ಪಾವತಿ
ಭದ್ರಾವತಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದ ಉದ್ದಗಲಕ್ಕೆ ಎಲ್ಲಾ ಜಾತಿ, ಧರ್ಮ ಮತ್ತು ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುತ್ತಿರುವ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸದರು.
ಮಂಗಳವಾರ ಹುತ್ತಾ ಕಾಲೋನಿಯಿಂದ ಸೀಗೆಬಾಗಿವರೆಗೆ ಪಕ್ಷದ ವತಿಯಿಂದ ಏರ್ಪಡಿಸಿದ್ದ ಭಾರತ್ ನಿರ್ಮಾಣ್ ಪಾದಯಾತ್ರೆಯ ನಂತರ ಸೀಗೆಬಾಗಿಯಲ್ಲಿ ನಡೆದ ಕಾರ್ಯಕರ್ತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಕೈಗಾರಿಕಾ ನಗರವಾದ ಭದ್ರಾವತಿ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಮೇಲೆ ಅವಲಂಬಿತವಾಗಿದ್ದು, ಈ ಎರಡೂ ಕಾರ್ಖಾನೆಗಳ ಉಳಿವಿಗಾಗಿ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಶೀಘ್ರವೇ ಹಣ ಬಿಡುಗಡೆ: ಎಂಪಿಎಂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ವಿಐಎಸ್ಎಲ್ ಕಾರ್ಖಾನೆಗೆ ಅವಶ್ಯವಿರುವ ಗಣಿ ಮಂಜೂರಾತಿಗೆ ಬಳ್ಳಾರಿ ಜಿಲ್ಲೆಯ ಈಶಾನ್ಯ ವಲಯದಲ್ಲಿರುವ 140 ಹೆಕ್ಟೇರ್ ಕಬ್ಬಿಣ ಅದಿರಿನ ಪ್ರದೇಶ ಹಾಗೂ ರಮಣದುರ್ಗ ವಲಯದಲ್ಲಿರವ 240 ಹೆಕ್ಟೇರ್ ಅದಿರಿನ ಪ್ರದೇಶವನ್ನು ಅಕ್ಟೋಬರ್ 2013ರಲ್ಲೇ ಠರಾವು ಹೊರಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆಂದರು.
ಕೋಮುವಾದಿ ಪಕ್ಷ: ಬಿಜೆಪಿ ಶೇ. 100ರಷ್ಟು ಕೋಮುವಾದಿ ಪಕ್ಷವಾಗಿದ್ದು, ದೇಶದಲ್ಲಿ ನಡೆಯುವ ಕೋಮು ಪ್ರಚೋದನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅದು ಕಾರಣವಾಗಿದೆ ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದರು.
ಕಳೆದ ಒಂದು ತಿಂಗಳಿನಿಂದ ಮೋದಿ ಅಲೆ ದೇಶದಲ್ಲಿ ತಗ್ಗಿದೆ. ಅವರಿಗೆ ಮದುವೆಯಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಅವರು ಅದರ ಬಗ್ಗೆ ಚಕಾರವೆತ್ತದಿರುವುದು ಅವರ ಆದರ್ಶ ವ್ಯಕ್ತಿತ್ವ ಸಾರುತ್ತದೆ ಎಂದು ಮೂದಲಿಸಿದ ಕಿಮ್ಮನೆ ರತ್ನಾಕರ್, ಮೋದಿ ಬಾಯಲ್ಲಿ ಭ್ರಷ್ಟಾಚಾರ ನಿಂದನೆ ಭೂತದ ಬಾಯಲ್ಲಿ ಭಗವದ್ಗೀತೆ ಉಚ್ಚಾರವಾದಂತೆ ಎಂದು ಕುಹಕವಾಡಿದರು.
ಬದಲಾವಣೆ ಸಾಧ್ಯವಿಲ್ಲ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ಮನೆ ಮನೆಗೆ ಕಾರ್ಯಕ್ರಮ ರೂಪಿಸಿದ ಕಾಂಗ್ರೆಸ್ ಜನರ ಮನದಲ್ಲಿ ಅಚ್ಚಳಿಯದೆ ನಿಂತಿದೆ. 2004ರಲ್ಲಿ ಇಂಡಿಯಾ ಶೈನಿಂಗ್ ಎಂಬ ಘೋಷಣೆಯೊಂದಿಗೆ ಎನ್ಡಿಎ ಅಧಿಕಾರಕ್ಕೆ ಬರುವ ಯತ್ನ ನಡೆಸಿತು. ಮಾಧ್ಯಮಗಳ ಮೂಲಕ ಆಡಂಬರ ಮಾಡುವುದರಿಂದ ಬದಲಾವಣೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರದಲ್ಲಿ ಬಗರ್ಹುಕುಂ ಸಾಗುವಳಿದಾರರು, ಬಡವರು, ದಲಿತರು, ರಸ್ತೆ ಕಾಮಗಾರಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಇವುಗಳ ಕೆಲಸವನ್ನು ಇನ್ನೂ ಮಾಡಬೇಕಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಸಹಜ ಎಂದು ಟೀಕಿಸಿದರು.
ಎಐಸಿಸಿ ಸದಸ್ಯೆ ಬಲ್ಕಿಶ್ ಬಾನು, ಶಿವಮೊಗ್ಗ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಕರಿಯಣ್ಣ, ವಾಹಿದ್ ಅಡ್ಡು ಮೊದಲಾದವರು ಮಾತನಾಡಿದರು. ಪಕ್ಷದ ವೀಕ್ಷಕರಾದ ರಮೇಶ್, ರಾಮೇಗೌಡ, ಮುಖಂಡರಾದ ಮಹಮದ್ ಸನಾವುಲ್ಲಾ, ಸಿ.ಎಂ. ಸಾದಿಕ್, ಸಿ.ಎಂ. ಖಾದರ್, ಮಂಜಪ್ಪಗೌಡ, ಜಹೀರ್ಜಾನ್, ಜಿ.ಎಂ. ರಾಮಚಂದ್ರ, ದೇವಿಕ, ಕಾವೇರಮ್ಮ ಮೊದಲಾದವರು ಇದ್ದರು. ಟಿ.ವಿ. ಗೋವಿಂದಸ್ವಾಮಿ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

