ಯಾರಿಗೆ ಒಲಿಯಲಿದೆ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
ಶಿವಮೊಗ್ಗ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಂದಿರುವ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಬಿಜೆಪಿಯನ್ನು ಪೀಕಲಾಟಕ್ಕೀಡುಮಾಡಿದೆ.
ಬಹುಮತ ಪಡೆದಿರುವ ಈ ಪಟ್ಟಣ ಪಂಚಾಯ್ತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಮುಸ್ಲಿಂ ಸದಸ್ಯರೂ ಸೇರಿ ನಾಲ್ವರು ಅರ್ಹರಿದ್ದು, ಯಾರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ರಾಜಕೀಯ ಲಾಭವಿದೆ ಎಂಬುದರ ಬಗ್ಗೆ ಗಾಢ ಚಿಂತನೆಯಲ್ಲಿ ಮುಖಂಡರು ಮುಳುಗಿದ್ದಾರೆ.
ಮಾ.14ರಂದು ಪಪಂ ಮುಖ್ಯಸ್ಥರ ಆಯ್ಕೆಗೆ ಚುನಾವಣೆ ನಡೆಯಲಿದೆ. 15 ಸದಸ್ಯ ಬಲದ ಈ ಸಮಿತಿಯಲ್ಲಿ ಬಿಜೆಪಿಯು 11 ಸದಸ್ಯರೊಂದಿಗೆ ಬಹುಮತ ಹೊಂದಿದೆ. ಕಾಂಗ್ರೆಸ್ 2, ಜೆಡಿಎಸ್ 1 ಸದಸ್ಯರ ಜತೆಗೆ ಕೆಜೆಪಿಯಿಂದ ಗೆದ್ದಿದ್ದ ಒಬ್ಬ ಸದಸ್ಯರೂ ಇದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲಾತಿ ಬಿಸಿಎಂ (ಎ), ಉಪಾಧ್ಯಕ್ಷ ಸ್ಥಾನವು ಎಸ್ ಸಿ (ಮಹಿಳೆ) ಮೀಸಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗೆದ್ದಿರುವ ರಹಮತ್ ಉಲ್ಲಾ ಅಸಾದಿ, ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ಕುಮಾರ್, ರಾಜೀವನ್ ಅರ್ಹರು. ಪಕ್ಷದ ಆಂತರಿಕ ಒಪ್ಪಂದದಂತೆ 30 ತಿಂಗಳ ಅವಧಿಯನ್ನು ಮೂವರು ತಲಾ 10 ತಿಂಗಳಂತೆ ಹಂಚಿಕೊಳ್ಳುತ್ತಾರೆ. ಆದರೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬುದು ಬಿಜೆಪಿ ಜಿಲ್ಲಾ ಮುಖಂಡರ ತಲೆಬಿಸಿ ಮಾಡಿದೆ.
ಅಸಾದಿ ಅವರು ಮೂರು ಬಾರಿ ಸದಸ್ಯರಾಗಿದ್ದು, ಒಮ್ಮೆ ಉಪಾಧ್ಯಕ್ಷರಾಗಿದ್ದರು. ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ನವೀನ್ ಕುಮಾರ್ 2ನೇ ಬಾರಿ ಆಯ್ಕೆಯಾಗಿದ್ದಾರೆ. ರಾಜೀವನ್ ಮೊದಲ ಬಾರಿ ಆಯ್ಕೆಯಾಗಿದ್ದರೂ ಪಕ್ಷದ ಹಿರಿಯ ಸದಸ್ಯ.
ಸಮಸ್ಯೆ ಏನು?: ಸದ್ಯ ಪಕ್ಷದಲ್ಲಿ ಎರಡು ವಾದಗಳಿವೆ. ಬಿಜೆಪಿಯು ತನ್ನ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳಲು ಅಸಾದಿ ಅವರ ಬದಲು ಬೇರೆಯವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ. ಹೇಗಿದ್ದರೂ ಮೂರು ಅವಕಾಶಗಳಿವೆ. ಮುಂದೆ ಅವರಿಗೆ ಅವಕಾಶ ಸಿಗಬಹುದು ಎಂಬ ವಾದವಿದೆ.
ಯಡಿಯೂರಪ್ಪ ಅವರು ಒಮ್ಮೆ ಬಿಜೆಪಿ ತೊರೆದು ಮತ್ತೆ ವಾಪಸಾದ ನಂತರ ಪಕ್ಷದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಇವರು ಬಿಜೆಪಿಯಿಂದ ಹೊರಗಿದ್ದಾಗ ಮುಸ್ಲಿಂ ಸಮುದಾಯದ ಬೆಂಬಲ ಯಡಿಯೂರಪ್ಪರಿಗಿತ್ತು. ಆದರೆ ವಾಪಸಾದಾಗ ಇವರೆಲ್ಲರೂ ಬಿಜೆಪಿಗೆ ಬರಲಿಲ್ಲ. ಹಾಗಾಗಿ ಮುಸ್ಲಿಂ ಸಮುದಾಯದ ಒಬ್ಬರನ್ನು ಅಧಿಕಾರಕ್ಕೆ ತರುವ ಏಕೈಕ ಅವಕಾಶ ತೀರ್ಥಹಳ್ಳಿಯಲ್ಲಿದ್ದು, ಇದನ್ನು ಬಳಸಿಕೊಳ್ಳಬಾರದೇಕೆ ಎಂಬ ವಾದವೂ ಇದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡೊರಬ್ಬರು ಎರಡೂ ಅಂಶಗಳ ಬಗ್ಗೆ ಚರ್ಚೆ ಸಾಗಿದೆ. ಬುಧವಾರ ಸಂಜೆಯೊಳಗೆ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ. ಮಾ.14ರ ಸಂಜೆ ವೇಳೆಗೆ ಕುತೂಹಲಕ್ಕೆ ತೆರೆ ಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

