ಹೈಕಮಾಂಡ್ ಮಿತ್ರ ಭಂಡಾರಿ ಕಾಂಗ್ರೆಸ್ ಹುರಿಯಾಳು
ಟಿ ವಿಶೇಷ ವರದಿ
ಶಿವಮೊಗ್ಗ: ಬಹುವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ಹೊರುತ್ತಿದ್ದ ಮಂಜುನಾಥ ಭಂಡಾರಿ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹುರಿಯಾಳು. ಬಹುದಿನಗಳ ಚರ್ಚೆಯ ನಂತರ ಪಕ್ಷದ ಹೈಕಮಾಂಡ್ ಅಳೆದು ತೂಗಿ ಭಂಡಾರಿ ಅವರಿಗೆ ಟಿಕೆಟ್ ನೀಡಿದೆ.
ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ವರೆಗೆ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಕಾಲದಲ್ಲಿಯೇ ಕೆಲಸ ಮಾಡಿದವರು ಮಂಜುನಾಥ ಭಂಡಾರಿ. ಕೆಪಿಸಿಸಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಇವರು ಹಾಲಿ ಎಐಸಿಸಿ ಸದಸ್ಯರಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಹೈಕಮಾಂಡ್ ಗೆ ಹತ್ತಿರದಲ್ಲಿಯೇ ಇರುವ ಭಂಡಾರಿ ಅವರನ್ನು ಕಂಡರೆ ಜಿಲ್ಲಾ ಮುಖಂಡರಿಗೂ ಸಹ ಭಯಮಿಶ್ರಿತ ಗೌರವ.
ಜಿಲ್ಲೆಗೆ ಪಕ್ಷದ ರಾಜ್ಯಮಟ್ಟದ ಹಾಗೂ ರಾಷ್ಟ್ರ ಮಟ್ಟದ ಮುಖಂಡರು ಆಗಮಿಸಿದಾಗ ಕಡ್ಡಾಯವಾಗಿ ಕಾಣಿಸಿಕೊಳ್ಳುತ್ತಿದ್ದ ಮಂಜುನಾಥ ಭಂಡಾರಿ ಅವರು ಪ್ರಚಾರವೆಂಬ ಬೆಳಕಿಗೆ ಬಂದಿದ್ದು ಕಡಿಮೆಯೇ. ಪಕ್ಷದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಪಕ್ಷದ ಹಲವು ಯವ ನಾಯಕರು ಇವರ ಮಾರ್ಗದರ್ಶನದಲ್ಲಿಯೇ ಬೆಳೆದು ಮುಂದೆ ಬಂದರು.
ಉದ್ಯಮ, ಶಿಕ್ಷಣ: ಅಮೆರಿಕಾದ ಐಸೆನ್ ಹೋವರ್ ಫೆಲೋಶಿಪ್ ಪಡೆದಿರುವ ಮಂಜುನಾಥ ಭಂಡಾರಿ ಅವರನ್ನು ಸಾರ್ವಜನಿಕರು ಗುರುತಿಸುವುದು ನಗರದ ಗಾಂಧಿ ನಗರ ಬಡಾವಣೆಯಲ್ಲಿರುವ ಭಂಡಾರಿ ಗ್ಯಾಸ್ ಏಜೆನ್ಸಿ ಮೂಲಕವೇ. ಜಿಲ್ಲೆಯ ಮೊಟ್ಟಮೊದಲ ಗ್ಯಾಸ್ ವಿತರಣಾ ಸಂಸ್ಥೆ ಇದು. ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಇವರು ಹೊಂದಿದ್ದಾರೆ.
ಭಂಡಾರಿ ಪ್ರತಿಷ್ಠಾನ ಸ್ಥಾಪಿಸಿರುವ ಇವರು ಎಚ್ಐವಿ ಏಡ್ಸ್ ಜಾಗೃತಿಗಾಗಿ ಹಲವು ಕಾರ್ಯಾಗಾರಗಳನ್ನೂ ಸಹ ಆಯೋಜಿಸಿದ್ದಾರೆ. ನಾಯಕತ್ವ ಹಾಗೂ ಕೌಶಲ್ಯ ಅಭಿವೃದ್ಧಿ ಶಿಬಿರಗಳನ್ನೂ ಸಹ ವಿವಿಧೆಡೆ ರೂಪಿಸಿದ್ದಾರೆ. ಆಪ್ಟ್ರಾ ಎಂಬ ಸಾಫ್ಟ್ ವೇರ್ ಕಂಪನಿಯ ಮಾಲೀಕರೂ ಹೌದು.
ಹೈಕಮಾಂಡ್ ಕೃಪೆ: ಪಕ್ಷದ ಟಿಕೆಟ್ಗಾಗಿ ಹಲವು ತಿಂಗಳಿಂದ ಗಂಭೀರ ಪ್ರಯತ್ನ ಆರಂಭಿಸಿದ್ದ ಮಂಜುನಾಥ ಭಂಡಾರಿ ಅವರಿಗೆ ಉನ್ನತ ಮಟ್ಟದ ಸಂಪರ್ಕ ನೆರವಾಗಿದೆ. ಪೈಪೋಟಿಯ ನಡುವೆಯೂ ಅವರು ಕಾಂಗ್ರೆಸ್ ಉಮೇದುವಾರರಾಗಿ ಕಣಕ್ಕಿಳಿಯಲಿದ್ದಾರೆ. ಹಲವು ಜಾತಿ ಲೆಕ್ಕಾಚಾರವನ್ನೂ ಹಿಂದಿಕ್ಕಿದ್ದಾರೆ. ಹೈಕಮಾಂಡ್ ವಿಶ್ವಾಸವನ್ನು ಗಳಿಸಿದ ಅವರಿಗೆ ಈಗ ಮತದಾರರ ವಿಶ್ವಾಸ ಗಳಿಸುವ ಸವಾಲು ಮುಂದಿದೆ.
ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಯುವಕರಿಗೆ ಆಧುನಿಕ ಮಾಹಿತಿ ತಂರ್ತ್ರಜನದ ಕಾರ್ಯಾಗಾರ ಮತ್ತು ತರಬೇತಿ ನೀಡುವುದು ಹಾಗೂ ಐಡಿ ಉದ್ಯಮದ ಹೂಡಿಕೆ ಮತ್ತು ಬಂಡವಾಳವನ್ನು ಜಿಲ್ಲೆಗೆ ತರುವ ಪ್ರಯತ್ನ ಮಾಡುವುದು ನನ್ನ ಕನಸುಗಳಲ್ಲೊಂದು- ಎಂದು ಅವರು ತಮ್ಮ ಪರಿಚಯ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಪಕ್ಷ ಸಂಘಟನೆಯ ಹಲವು ಜವಾಬ್ದಾರಿ ಹೊತ್ತಿದ್ದ ಮಂಜುನಾಥ ಭಂಡಾರಿ ಅವರು ಈಗ ಚುನಾವಣಾ ರಾಜಕಾರಣಕ್ಕೆ ಕಾಲಿಡುತ್ತಿರುವುದು ಇದೇ ಮೊದಲು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

