ಶಿವಮೊಗ್ಗ

ಕಾಮದಹನ: ಬಣ್ಣ ಎರಚಿ ಹೋಳಿ ಸಂಭ್ರಮ

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.16
ಹೋಳಿ ಹುಣ್ಣಿಮೆಯ ಪ್ರಯುಕ್ತ ಭಾನುವಾರ ಪಟ್ಟಣದೆಲ್ಲೆಡೆ ಯುವಕರ ಜತೆ ಮಕ್ಕಳಿಂದ ಪರಸ್ಪರ ಬಣ್ಣ ಎರಚುವ ರಂಗಿನಾಟ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗಿನಿಂದಲೇ ಹೆಚ್ಚು ಉತ್ಸಾಹದಿಂದ ನೂರಾರು ಯುವಕರು ಪರಸ್ವರ ಬಣ್ಣ ಎರಚುವ ರಂಗಿನಾಟದಲ್ಲಿ ಬಹು ಸಕ್ರಿಯವಾಗಿ ಪಾಲ್ಗೊಂಡಿದ್ದು, ಪಟ್ಟಣದ ಶ್ರೀಕಾಶಿ ವಿಶ್ವೇಶ್ವರ ದೇವಸ್ಥಾನದ ಮುಂಭಾಗ ಪ್ರತಿಷ್ಟಾಪಿಸಲಾಗಿದ್ದ ಕಾಮನ ಪ್ರತಿಮೆಯನ್ನು ಬೆಳಗಿನ ಜಾವ ದಹಿಸಲಾಯಿತು. ಶನಿವಾರ ಪಟ್ಟಣದ ವಿವಿಧ ವರ್ತಕರು ಸ್ಥಳೀಯರಿಂದ ಮಕ್ಕಳು ಸಂಗ್ರಹಿಸಿದ ದೇಣಿಗೆಯಲ್ಲಿ ಕಾಮ ದಹನ ಸಮಿತಿ ವತಿಯಿಂದ ಬಣ್ಣ ವಿತರಿಸಿ ಹೋಳಿ ಹಬ್ಬವನ್ನು ಸಾಂಪ್ರದಾಯಿಕ ಪದ್ಧತಿಯನ್ವಯ ಆಚರಿಸಲಾಯಿತು.
ಗಿಡಮೂಲಿಕೆಯ ಬಣ್ಣ:  ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಹೋಳಿ ಹುಣ್ಣಿಮೆಯು ಅತ್ಯಂತ ವಿಶೇಷವಾದ ಸಂದರ್ಭವಾಗಿದೆ. ಪರಶಿವನ ಅವಕೃಪೆಗೆ ಒಳಗಾದ ಮನ್ಮಥನನ್ನು ಕೇವಲ ಕಣ್ಣಿನ ನೋಟದಿಂದ ಸುಟ್ಟು ಬೂದಿ ಮಾಡಿದ್ದಾಗಿ ಪುರಾಣದಲ್ಲಿ  ಹೇಳಲಾಗಿದೆ. ಇದರೊಂದಿಗೆ ವೈಜ್ಞಾನಿಕವಾಗಿ ಹೋಳಿ ಹುಣ್ಣಿಮೆ ಚಳಿಗಾಲ ಕಳೆದು ಬೇಸಿಗೆಯ ಆರಂಭಕ್ಕೆ ಮುನ್ನುಡಿಯಾಗಿದೆ.
ಈ ಸಂದರ್ಭ ವಾತಾವರಣಕ್ಕೆ ಮನುಷ್ಯನ ದೇಹ ಹೊಂದಿಕೊಂಡು ಚರ್ಮಕ್ಕೆ ಹೊಸ ರೀತಿಯ ಹೊಳಪು ನೀಡಲು ಅನಾದಿ ಕಾಲದಲ್ಲಿ ಗಂಧ, ಅರಿಶಿಣ, ತುಳಸಿ ಮತ್ತಿತರ ಸ್ಥಳೀಯ ನೈಸರ್ಗಿಕ ಸಹಜ ಗಿಡಮೂಲಿಕೆ ಬಳಸಿ ತಯಾರಿಸಿದ ಬಣ್ಣವನ್ನು ಪರಸ್ಪರ ಎರಚಿ ಸಂಭ್ರಮಿಸಿ ದೇಹದ ಕಾಂತಿ, ಹೊಳಪು ಹೆಚ್ಚಿಸಿಕೊಂಡು ಧಾರ್ಮಿಕ ಪದ್ಧತಿ ಪರಿಪಾಲಿಸುತ್ತಿದ್ದರು ಎಂದು ಸ್ಥಳೀಯ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಎಸ್.ಎಂ. ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ಸಾರ್ಥಕವಾಗಲಿ:  ಇತ್ತೀಚಿನ ದಿನದಲ್ಲಿ ಹೋಳಿ ಹಬ್ಬದಲ್ಲಿ ರಾಸಾಯನಿಕ ಮಿಶ್ರಿತ ಬಣ್ಣದ ಜತೆಗೆ ಹಾನಿಕಾರಕ ವಸ್ತುಗಳನ್ನು ಪ್ರಯೋಗಿಸಿ ಸಾಮಾನ್ಯ ಜನತೆಯಲ್ಲಿ ಭಯ ಉಂಟು ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇದರಿಂದಾಗಿ ಕೆಲ ವರ್ಗದ ಜನತೆ ಓಕುಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಪರಿಸ್ಥಿತಿ ಹಿಂದೂಗಳ ಧಾರ್ಮಿಕ ಪದ್ಧತಿ ನಾಶಪಡಿಸುವ ತಂತ್ರವಾಗಿದೆ ಎಂದು ದೂರಿದ್ದಾರೆ. ಕಳೆದೆರಡು ವರ್ಷದಿಂದ ಬಣ್ಣದ ಪುಡಿಯ ಎರಚುವಿಕೆಯಿಂದಾಗಿ ಜನತೆ ಓಕುಳಿಯಲ್ಲಿ ಹೆಚ್ಚು ಸಂತಸದಿಂದ ಪಾಲ್ಗೊಳ್ಳುತ್ತಿದ್ದು, ಸಂತಸಕರವಾಗಿದೆ. ಇದರೊಂದಿಗೆ ಹಬ್ಬದ ವಿಶೇಷತೆ ಅರ್ಥೈಸಿಕೊಂಡಲ್ಲಿ ಓಕುಳಿಯಾಟ ಸಾರ್ಥಕವಾಗಲಿದೆ ಎಂದು ತಿಳಿಸಿದ್ದಾರೆ.
ಕುಮದ್ವತಿ ನದಿಯಲ್ಲಿ ಸಂಭ್ರಮ:  ಪಟ್ಟಣದಲ್ಲಿ ಬೆಳಗಿನಿಂದ ನಡೆದ ಓಕುಳಿಯಾಟದಲ್ಲಿ ಹಳಿಯೂರು ಭಾಗದ ಯುವಕರು ಬಸ್ ನಿಲ್ದಾಣದ ಬಳಿ ದೊಡ್ಡಪೇಟೆ ಮತ್ತಿತರ ಕಡೆಗಳಿಂದ ಜಮಾಯಿಸಿದ್ದ ಅಸಂಖ್ಯಾತ ಯುವಕರ ಜತೆ ಸಮ್ಮಿಳಿತಗೊಂಡು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಬೇಸಿಗೆಯ ಕಾವು ಹೆಚ್ಚಾದಂತೆ 12ರ ವೇಳೆಯಲ್ಲಿ ಹೊರವಲಯದಲ್ಲಿನ ಕುಮದ್ವತಿ ನದಿ ತೀರದಲ್ಲಿ ಯುವಕರು ಸ್ನಾನ ಮಾಡಿ ಸಂಭ್ರಮಿಸಿದರು.  ಓಕುಳಿ ಹಬ್ಬಕ್ಕೆ ಭಾನುವಾರ ಸಾಥ್ ನೀಡಿದ್ದರಿಂದ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ, ಅಂಗಡಿ ಮುಂಗಟ್ಟುಗಳು ಮುಚ್ಚಿ ಬಿಕೋ ಎನ್ನುವ ವಾತಾವರಣ ಕಂಡು ಬರುತ್ತಿತ್ತು.
ವರ್ಗ, ಜಾತಿ-ಬೇಧವಿಲ್ಲದೆ ಎಲ್ಲಾ ವರ್ಗದ ಜನತೆ ಮನಬಂದಂತೆ ಓಕುಳಿಯಲ್ಲಿ ಸಕ್ರಿಯವಾಗಿದೆ. ಇವರೊಂದಿಗೆ ಬಾಲಕ, ಬಾಲಕಿಯರು ಪರೀಕ್ಷೆ, ಎಲ್ಲವನ್ನು ಮರೆತು ಸುತ್ತಮುತ್ತಲಿನ ಸ್ಥಳದಲ್ಲಿಯೇ ಬಣ್ಣ ಎರಚುತ್ತಿದ್ದ ದೃಶ್ಯ ಸಂತಸವನ್ನು ಇಮ್ಮಡಿಗೊಳಿಸಿತ್ತು.
ಪಟ್ಟಣದ ಓಕುಳಿ ಹಬ್ಬದಲ್ಲಿ ಮಾಜಿ ಪುರಸಭಾಧ್ಯಕ್ಷ ರಮೇಶ್, ಗೋಪಿ ಚರ್ಕವರ್ತಿ, ಎಸ್.ವಿ.ಕೆ. ಮೂರ್ತಿ, ಸತೀಶ್ ಗೊಲ್ಲರ್, ಪ್ರದೀಪ್ ದೀಕ್ಷಿತ್, ಪ್ರಕಾಶ್ ಹೋತನಕಟ್ಟೆ, ಹರೀಶ್ ಜೋಯ್ಸ್, ಬಾಲಕೃಷ್ಣ ಜೋಯಿಸ್, ಉಮೇಶ್ ಭಟ್, ಗಿರೀಶ್ ಭಟ್, ಅಂಜನಾರಾವ್, ರಾಜಕೇಸರಿ, ರಾಜಕುಸುಮ ಮತ್ತಿತರರು ಕಣ್ಮರೆ ಆಗುವ ಭೀತಿಯ ಹಿಂದೂ ಧಾರ್ಮಿಕ ಹಬ್ಬದ ನೇತೃತ್ವವನ್ನು ವಹಿಸಿ ಯಶಸ್ವಿಯಾಗಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.