ಶಿವಮೊಗ್ಗ

ನಾಟಕ ಹುಟ್ಟಿಗೆ ವ್ಯಕ್ತಿ, ಸಮಾಜದ ಸಂಘರ್ಷವೇ ಕಾರಣ

Published On :

ಶಿವಮೊಗ್ಗ: ವ್ಯಕ್ತಿ ಹಾಗೂ ಸಮಾಜದ ನಡುವೆ ನಡೆಯುವ ಸಂಘರ್ಷವನ್ನು ಅನುಸಂಧಾನ ಮಾಡುವುದಕ್ಕಾಗಿ ನಾಟಕ ಹುಟ್ಟಿಕೊಂಡಿತು. ಸಮಾಜದಲ್ಲಿ ನಡೆಯುತ್ತಿದ್ದ ಸಂಘರ್ಷಗಳನ್ನು ನಾಟಕಕಾರರು ರಂಗಪ್ರಯೋಗಗಳ ಮೂಲಕ ಕಟ್ಟಿಕೊಟ್ಟರು. ಆ ನಂತರ ಸಂಘರ್ಷಗಳು ನಾಟಕ ಸಾಹಿತ್ಯದ ಜೀವಾಳವಾದವು ಎಂದು ಖ್ಯಾತ ವಿಮರ್ಶಕ ಪ್ರೊ. ಟಿ.ಪಿ. ಅಶೋಕ್ ಹೇಳಿದರು.
ಇಲ್ಲಿನ ಕರ್ನಾಟಕ ಸಂಘ ಭವನದಲ್ಲಿ ಭಾನುವಾರ ಕರ್ನಾಟಕ ಸಂಘ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ನಾಟಕ ಅಧ್ಯಯನ ಶಿಬಿರ ಉದ್ಘಾಟಿಸಿದ ಅವರು, ನಾಟಕ ಕಲೆ ವಿಭಿನ್ನ ಕಾಲಘಟ್ಟದಲ್ಲಿ ಹಲವು ಪ್ರಕಾರಗಳಲ್ಲಿ ಮೂಡಿ ಬರುತ್ತಿದೆ. ಆರಂಭ ಕಾಲದಲ್ಲಿ ಪೌರಾಣಿಕ ಹಿನ್ನೆಲೆಯಲ್ಲಿ ನಾಟಕಗಳ ರಚನೆ ನಡೆಯುತ್ತಿತ್ತು. ಮಹಾಕಾವ್ಯ ಮತ್ತು ಭಾವಗೀತೆಗಳು ಇದರಲ್ಲಿ ಪ್ರಧಾನವಾಗಿತ್ತು. ನಂತರ ವ್ಯಕ್ತಿ ಮತ್ತು ಸಮಾಜದ ಅನುಸಂಧಾನ ಪ್ರಕ್ರಿಯೆ ನಡೆಯಿತು. ನಾಟಕ ಹಲವು ಕಲೆಗಳ ಸಮ್ಮಿಶ್ರಣವಾಗಿದ್ದು, ಸಾಹಿತ್ಯದ ಪ್ರಮುಖ ಅಂಗವಾಗಿದೆ. ನಾಟಕ ಕಲೆಯ ವ್ಯಾಪ್ತಿ ಅತ್ಯಂತ ವಿಸ್ತಾರವಾಗಿದೆ ಎಂದರು.
ಉತ್ಕೃಷ್ಟ ಅನುಭವ: ಪ್ರಸ್ತುತ ಸಂದರ್ಭದ ನಾಟಕಗಳು ಆಧುನಿಕತೆಗೆ ಒಳಗಾಗಿ ಕುತೂಹಲದಿಂದ ಕೂಡಿದ್ದು, ಅವುಗಳು ಉತ್ಕೃಷ್ಟವಾದ ಅನುಭವ ನೀಡುತ್ತಿವೆ ಎಂದ ಅವರು, ಕಾಲ ಬದಲಾದಂತೆ ನಾಟಕದಲ್ಲಿಯೂ ಕೆಲ ಬದಲಾವಣೆಗಳಾಗಿ ಆಧುನಿಕ ಕನ್ನಡದ ಕವಲುಗಳಾಗಿ ರೂಪುಗೊಂಡವು ಎಂದು ಹೇಳಿದರು.
ರಂಗಪ್ರಯೋಗ: ಭವಿಷ್ಯದಲ್ಲಿ ನಾಟಕ ರಚನೆಗೆ ಬೇಕಾದ ಮಜಲುಗಳನ್ನು ಸಮಕಾಲೀನ ನಾಟಕದ ರೂಪಕಗಳು ಕಟ್ಟಿಕೊಡುತ್ತಿವೆ ಎಂದ ಅವರು, ಕಳೆದ ಶತಮಾನದಲ್ಲಿ ರಂಗಪ್ರಕ್ರಿಯೆಯಲ್ಲಿ ಹೊಸ ನಾಟಕಗಳನ್ನು ತೋರಿಸುವ ಕಲೆ ಪ್ರಾರಂಭವಾಯಿತು. ಉದಯೋನ್ಮುಖ ನಾಟಕಕಾರರು ಹೊಸ ರಂಗಪ್ರಯೋಗಗಳಿಗೆ ನಾಂದಿ ಹಾಡಿದರು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಡಾ. ಎಚ್.ಎಸ್. ನಾಗಭೂಷಣ ಸ್ವಾಗತಿಸಿದರು. ಉಪನ್ಯಾಸಕ ಪ್ರೊ. ಮಂಜುನಾಥ್ ನಿರೂಪಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಉಪನ್ಯಾಸ, ಚರ್ಚೆ: ಇಡೀ ದಿನ ವಿದ್ಯಾರ್ಥಿಗಳು ರಂಗಭೂಮಿಯ ಇತಿಹಾಸ, ಕನ್ನಡದ ನಾಟಕಕಾರರಾದ ಸಂಸ, ಟಿ.ಪಿ. ಕೈಲಾಸಂ, ಬೇಂದ್ರ ಸೇರಿದಂತೆ ಹಲವರ ನಾಟಕಗಳ ರಚನಾ ಮಾದರಿಯ ಬಗ್ಗೆ ಚರ್ಚೆ ನಡೆಸಿದರು.
ನಿರ್ದೇಶಕ ಕೆ.ವಿ. ಅಕ್ಷರ ಅವರು ಟಿ.ಪಿ. ಕೈಲಾಸಂ ಹಾಗೂ ಸಂಸ ಅವರ ನಾಟಕಗಳ ಭಿನ್ನ ಮಾರ್ಗಗಳನ್ನು ವಿಶ್ಲೇಷಿಸಿದರು. ಸಂಸ ಅವರು ಮೈಸೂರು ಇತಿಹಾಸದ ಬಗ್ಗೆಯೇ ನಾಟಕಗಳನ್ನು ಬರೆದರು. ಅದೇ ಕಾಲದಲ್ಲಿ ಟಿ.ಪಿ. ಕೈಲಾಸಂ ಅವರು ಶೈಕ್ಷಣಿಕ ವ್ಯವಸ್ಥೆಯ ಲೋಪಗಳ ಬಗ್ಗೆ ವಿಡಂಬನಾತ್ಮಕವಾಗಿ ಬರೆದರು. ಸಂಸ ಅವರ ನಾಟಕದಲ್ಲಿ ಸಂಸ್ಕೃತ ಹಾಗೂ ಬಂಗಾಳಿ ನಾಟಕಗಳ ಪ್ರಭಾವ ಕಾಣುತ್ತದೆ. ಆದರೆ ಕೈಲಾಸಂ ಅವರು ಹೊಸ ಭಾಷೆಯನ್ನೇ ಸೃಜಿಸಿದರು ಎಂದರು.
ನಂತರ ಸಂಸ ಅವರ ವಿಗಡ ವಿಕ್ರಮರಾಯ ನಾಯಕವನ್ನು ವಿದ್ಯಾ ಹೆಗಡೆ, ಮಂಜು ಕೊಡಗು ವಾಚನ ಮಾಡಿದರು. ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಜಿ.ಬಿ. ಜೋಷಿ ರಚಿಸಿರುವ ಕದಡಿದ ನೀರು ನಾಟಕಗಳನ್ನು ವಾಚಿಸಲಾಯಿತು.
ನೀನಾಸಂ ಕಲಾವಿದರು ಅಭಿನಯಿಸಿರುವ ಸಂಗ್ಯಾ ಬಾಳ್ಯಾ ನಾಟಕದ ಕೆಲವು ದೃಶ್ಯಗಳನ್ನು ತೆರೆಯ ಮೇಲೆ ಪ್ರದರ್ಶಿಸಿದ ನಂತರ ಈ ಬಗ್ಗೆ ಚರ್ಚೆಯೂ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.