ಸಾಗರದಲ್ಲಿ ಛಾಯಾಚಿತ್ರ ಪ್ರದರ್ಶನ, ಸಂವಾದ
ಕ.ಪ್ರ.ವಾರ್ತೆ ಸಾಗರ ಮಾ. 20
ದಿ. ಡಾ. ದೊಡ್ಡೇರಿ ವೆಂಕಟಗಿರಿರಾವ್ ಅವರ ಜನ್ಮಶತಮಾನ ಸಂಭ್ರಮಾಚರಣೆ ವರ್ಷದ ಅಂಗವಾಗಿ ಸಾಗರ ಫೋಟೋಗ್ರಾಫಿಕ್ಸ್ ಸೊಸೈಟಿ ವತಿಯಿಂದ ಹೆಗ್ಗೋಡಿನ ನೀನಾಸಂ ರಂಗಮಂದಿರದಲ್ಲಿ ಫೋಟೊ- ಮಾತು ಎಂಬ ಅಪೂರ್ವವಾದ ಛಾಯಾಚಿತ್ರ ಕಲಾದೃಶ್ಯ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಉಪಾಧ್ಯಕ್ಷ ಕೆ. ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಾ. 23ರಂದು ಸಂಜೆ 4 ರಿಂದ 6ವರೆಗೆ ನೀನಾಸಂ ರಂಗಮಂದಿರದಲ್ಲಿ ನಡೆಯುವ ಈ ಸಂವಾದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರರಾದ ಬಿ. ಶ್ರೀನಿವಾಸ್, ಎಚ್.ವಿ.ಪ್ರವೀಣ್ಕುಮಾರ್, ಎ.ಕೆ. ರಾಜು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ ಎಂದರು.
ಮಾ. 30ರಂದು ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಾಫಿ ಮತ್ತು ಇಂಡಿಯಾ ಇಂಟರ್ನ್ಯಾಷನಲ್ ಫೋಟೋಗ್ರಾಫಿ ಕೌನ್ಸಿಲ್ ವತಿಯಿಂದ ಗುಣಮಟ್ಟದ ಮುದ್ರೆಯೊಂದಿಗೆ ಆಯೋಜಿಸಿರುವ ಪ್ರಥಮ ಅಖಿಲ ಭಾರತ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಬಿಡುಗಡೆಯಾಗಲಿದೆ. ದೇಶದ ವಿವಿಧ ರಾಜ್ಯಗಳ 300ಕ್ಕೂ ಅಧಿಕ ಛಾಯಾಚಿತ್ರಗಾರರು ಕಳಿಸಿರುವ ಸುಮಾರು 3500ಕ್ಕೂ ಅಧಿಕ ಛಾಯಾಚಿತ್ರಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಛಾಯಾಚಿತ್ರಕಾರರ ಎದುರಿನಲ್ಲಿಯೆ ತೀರ್ಪು ಹೊರಬೀಳುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸೊಸೈಟಿಯ ಜಂಟಿ ಕಾರ್ಯದರ್ಶಿ ಉಲ್ಲಾಸ ಶ್ಯಾನಭಾಗ್ ಮಾತನಾಡಿ, ಮೇ 17, 18 ಹಾಗೂ 19ರಂದು ಅಖಿಲ ಭಾರತ ಸಲಾನ್ನಲ್ಲಿ ಜಯ ಗಳಿಸಿದ 29 ಛಾಯಾಚಿತ್ರಗಳೊಂದಿಗೆ ಇತರೆ ಸುಂದರ ಚಿತ್ರಗಳ 13ನೇ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತವಾದ ಚಿತ್ರಗಳ ಪ್ರದರ್ಶನ ಸಾಗರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಆರ್.ಸತೀಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಡಾ. ಡಿ.ವಿ. ರಾವ್ ಅವರ ಛಾಯಾಚಿತ್ರ ಪ್ರದರ್ಶನ, ಅವರು ಹೊರತಂದ ಛಾಯಾಚಿತ್ರ ಬಗೆಗಿನ ಪುಸ್ತಕ, ಕಾದಂಬರಿ, ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಾಗರಾಜ್, ಅರುಣ್ ಬಾಪಟ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

