ರಾಜಕಾರಣದಿಂದ ನಿವೃತ್ತಿ ಮಾತೇ ಇಲ್ಲ
ಶಿವಮೊಗ್ಗ: ರಾಜ್ಯ ರಾಜಕಾರಣವನ್ನು ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗಲು ನಿರ್ಧರಿಸಿದ್ದು ಅವಸರದ ನಿರ್ಧಾರ ಅಲ್ಲ ಎಂದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದು, ರಾಜಕಾರಣದಿಂದ ನಿವೃತ್ತಿ ಪಡೆಯುವ ಮಾತೇ ಇಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಈ ಕ್ಷೇತ್ರದಲ್ಲಿರುತ್ತೇನೆ ಎಂದಿದ್ದಾರೆ.
ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘವು ಆಯೋಜಿಸಿದ್ದ ಸಂವಾದದಲ್ಲಿ ಅವರು, ಅಧಿಕಾರದಲ್ಲಿರಲಿ, ಇಲ್ಲದಿರಲಿ, ನನ್ನ ಸ್ವಭಾವದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರು.
ವಿರೋಧ ಪಕ್ಷದಲ್ಲಿದ್ದಾಗ ಸಹಜವಾಗಿಯೇ ಜೋರಾಗಿ ಕೂಗು ಹಾಕಬೇಕಾಗುತ್ತದೆ. ಆಡಳಿತ ಪಕ್ಷದಲ್ಲಿದ್ದಾಗ ಕೂಗುವ ಅಗತ್ಯ ಬೀಳುವುದಿಲ್ಲ. ಆಗ ನಾವು ಕೆಲಸ ಮಾಡುವ ಜಾಗದಲ್ಲಿರುತ್ತೇವೆ. ಅಲ್ಲದೆ, ಮುಂದೆಯೂ ಕೂಗುವ ಅಗತ್ಯ ಬರುವುದಿಲ್ಲ. ಏಕೆಂದರೆ ಆಡಳಿತ ಪಕ್ಷದಲ್ಲಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಅಧಿಕಾರದಲ್ಲಿದ್ದಾಗ ಬೇರೆಯವರು(ವಿರೋಧ ಪಕ್ಷದವರು) ಕೂಗು ಹಾಕುತ್ತಿದ್ದರು. ತಮ್ಮ ಕೆಲಸ ಆಗಲಿ ಎಂಬ ಆಸೆ ಅವರದ್ದಾಗಿತ್ತು. ಆದರೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೂಗುವ ಅಗತ್ಯವೇ ಇಲ್ಲ. ಏಕೆಂದರೆ ಕೂಗು ಹಾಕಿದರೆ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ಯಾರಿಗೂ ಇಲ್ಲ ಎಂದು ಲೇವಡಿ ಮಾಡಿದರು.
ಎಚ್.ಡಿ. ದೇವೇಗೌಡರಂತಹ ಹಿರಿಯ ನಾಯಕರು ಸಂಸತ್ತಿನಲ್ಲಿ ಇರುವುದು ಒಳ್ಳೆಯದು ಎಂದೂ ಅವರು ಹೇಳಿದರು.
ಪ್ರತಿಸ್ಪರ್ಧಿ ಯಾರು?: ನನ್ನ ಪ್ರತಿಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ನಾನು ಚುನಾವಣೆ ಮುಗಿಯುವವರೆಗೂ ಮಾತನಾಡುವುದಿಲ್ಲ. ಯಾರ ಬಗ್ಗೆಯೂ ವೈಯಕ್ತಿಕವಾಗಿ ಪ್ರಸ್ತಾಪ ಮಾಡುವುದಿಲ್ಲ. ಟೀಕೆ- ಟಿಪ್ಪಣಿ ಮಾಡುವುದಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಕೆಜೆಪಿ ಕಟ್ಟುವ ವೇಳೆ ತಮ್ಮ ಜತೆಗಿದ್ದು, ಈಗ ಬಿಜೆಪಿ ಸೇರದ ನಾಯಕರಾದ ಧನಂಜಯಕುಮಾರ್ ಹಾಗೂ ಎಂ.ಡಿ. ಲಕ್ಷ್ಮೀನಾರಾಯಣ್ ಅವರ ಬಗ್ಗೆಯೂ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಅವರು ಬಾರದ ಬಗ್ಗೆ ಪ್ರಶ್ನಿಸಿದಾಗ, ಅವರು ಸಂಪರ್ಕದಲ್ಲಿದ್ದಾರೆ ಎಂದಷ್ಟೇ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

