ಬೀದಿಯಲ್ಲಿ ಕೂಗಾಟ, ನಂತರ ಮನೆ ಜಗಳವೆಂದರು
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ. 23
ಅಲ್ಪಸಂಖ್ಯಾತರನ್ನು ಪಕ್ಷ ಪರಿಗಣಿಸುತ್ತಿಲ್ಲ, ಪಕ್ಷದ ಅಲ್ಪಸಂಖ್ಯಾತರ ಘಟಕವನ್ನೂ ನಿರ್ಲಕ್ಷಿಸಲಾಗುತ್ತಿದೆ ಎಂದು ಭಾನುವಾರ ಬೆಳಿಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಅವರ ಸಮ್ಮುಖದಲ್ಲೇ ನಡೆದ ಪ್ರತಿಭಟನೆಯನ್ನು ತಹಬದಿಗೆ ತರುವ ಪ್ರಯತ್ನವನ್ನು ಪಕ್ಷದ ವಿವಿಧ ಮುಖಂಡರು ಮಾಡಿದರಾದರೂ ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾವಣೆ ಹಂತಕ್ಕೂ ಮುಟ್ಟಿತು. ವೈಯಕ್ತಿಕ ನಿಂದನೆಗೂ ಕಾರಣವಾಯಿತು.
ಅಧ್ಯಕ್ಷರ ಮಾತಿಗೆ ಕಿಡಿ: ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದಾಗ, ಅಲ್ಪಸಂಖ್ಯಾತರ ಘಟಕದ ಮುಖಂಡರು ಯಾವ ಪಕ್ಷದ ಜೊತೆ ಕೈಜೋಡಿಸಿದ್ದೀರಿ ಎಂಬುದು ನನಗೂ ಗೊತ್ತಿದೆ ಎಂಬ ಕಾಂಗ್ರೆಸ್ ಅಧ್ಯಕ್ಷರ ಮಾತು ಕಿಚ್ಚಿಗೆ ತುಪ್ಪಸುರಿದಂತಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪಕ್ಷ ಹಾಕಿರುವ ಅಭ್ಯರ್ಥಿಯನ್ನೂ ಬದಲಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಿಸಿ ಎಂದು ಪಟ್ಟುಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ನಗರಪಾಲಿಕೆ ಸದಸ್ಯ ಕಾಶಿ ವಿಶ್ವನಾಥ್, ಮುಖಂಡರಾದ ಎನ್.ರಮೇಶ್, ರುದ್ರೇಶ್ ಮತ್ತಿತರರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರಲ್ಲದೇ, ಕುಳಿತು ಮಾತನಾಡೋಣ, ಇದು ನಮ್ಮನೆ ಎಂದು ಪ್ರತಿಭಟನಾ ನಿರತರನ್ನು ಕಚೇರಿಯೊಳಗೆ ಕರೆದೊಯ್ದು ಸಭೆ ನಡೆಸಿದರು.
ಅಡ್ಡು ಅಸಮಾಧಾನ: ಸಭೆಯಲ್ಲಿ ಸಹ ಅಲ್ಪಸಂಖ್ಯಾತರ ಘಟಕದ ಮುಖಂಡ ಸೈಯದ್ ವಹಿದ್ ಅಡ್ಡು ಅವರು ತಮ್ಮ ಅಸಮಾಧಾನ ಹೊರಹಾಕಿದರು. ತಮ್ಮ ಘಟಕ ಹಾಗೂ ತಮ್ಮ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ಇದನ್ನು ಸಹಿಸಲು ಸಾದ್ಯವೇ ಇಲ್ಲ ಎಂದು ತಗಾದೆ ತೆಗೆದರು. ಈ ಸಂದರ್ಭದಲ್ಲಿ ಮುಖಂಡರೆಲ್ಲಾ ಕೂಡಿಕೊಂಡು ಇಂತಹ ಪರಿಸ್ಥಿತಿ ಮುಂದೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೈಯದ್ ವಹಿದ್ ಅಡ್ಡು, ಅಲ್ಪಸಂಖ್ಯಾತರ ವಿಭಾಗ ಪದಾಧಿಕಾರಿಗಳು ಕಾಂಗ್ರೆಸ್ ಕಚೇರಿಗೆ ಬಂದು ನಮಗೆ ಇರುವ ಅಸಮಾಧಾನ ವ್ಯಕ್ತಪಡಿಸಿದೆವು. ಪಕ್ಷಕ್ಕೆ ಅಲ್ಪಸಂಖ್ಯಾತರು ಬೆನ್ನೆಲುಬು ಇದ್ದಂತೆ. ಅವರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದೆವು. ನಂತರ ಚರ್ಚೆ ಮಾಡಿ ನಮ್ಮ ಮನವಿಯನ್ನು ಅವರು ಒಪ್ಪಿದರು. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

