ಗೀತಾಗೆ ಶಿವಾಭಿಮಾನೋತ್ಸಾಹ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.24
ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಭಾರಿ ಮೆರವಣಿಗೆಯೊಂದಿಗೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಒಟ್ಟು ನಾಲ್ಕು ಪ್ರತಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರ ಪತಿ ಶಿವರಾಜ್ಕುಮಾರ್, ಸಹೋದರ, ಸೊರಬ ಶಾಸಕ ಮಧು ಬಂಗಾರಪ್ಪ, ಶಾಸಕ ಜಮೀರ್ ಅಹ್ಮದ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಹಾಗೂ ಕಾನೂನು ಸಲಹೆಗಾರ ಗೋವಿಂದಪ್ಪ ಇದ್ದರು.
ಬೆಳಗ್ಗೆ ನಗರದ ವಿವಿಧ ಮಸೀದಿ, ಚರ್ಚ್ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದ ಗೀತಾ ಶಿವರಾಜ್ಕುಮಾರ್ ಅವರು ರಾಮಣ್ಣ ಶ್ರೇಷ್ಠಿ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಯತ್ತ ಸಾಗಿದರು.
ಶಾಸಕರಾದ ಎಂ.ಜೆ. ಅಪ್ಪಾಜಿಗೌಡ, ಶಾರದಾ ಪೂರ್ಯಾನಾಯ್ಕ್, ಮಾಜಿ ಶಾಸಕ ಮಹಿಮಾ ಪಟೇಲ್, ಚಿತ್ರನಟ ವಿನೋದ್ ಪ್ರಭಾಕರ್, ಒರಟ ಖ್ಯಾತಿಯ ಪ್ರಶಂತ್, ಬೆಳ್ಳಿ ಚಿತ್ರತಂಡ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಸಾಥ್ ನೀಡಿದ್ದರು.
ಮೆರವಣಿಗೆಯಲ್ಲಿ ಜೆಡಿಎಸ್ ಬಾವುಟದೊಂದಿಗೆ ಅಭ್ಯರ್ಥಿಗೆ ಬೆಂಬಲ ನೀಡಿರುವ ಎಸ್ಡಿಪಿಐ ಪಕ್ಷದ ಬಾವುಟಗಳೂ ಕಾಣುತ್ತಿದ್ದವು. ಅಭಿಮಾನಿಗಳು ಶಿವರಾಜಕುಮಾರ್ ಅವರ ಚಿತ್ರಗಳ ಹೆಸರುಗಳನ್ನು ಕೂಗಿ ಹುರಿದುಂಬಿಸುತ್ತಿದ್ದರು.
ತಪ್ಪಿ ನಡೆದಲ್ಲಿ ಹೇಳಿ: ಮೆರವಣಿಗೆಯು ಮಹಾವೀರ ವೃತ್ತಕ್ಕೆ ಆಗಮಿಸಿದಾಗ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಿವರಾಜ್ಕುಮಾರ್, ಜಿಲ್ಲೆಯ ಜನರ ಸೇವೆ ಮಾಡುವ ಬಂಗಾರಪ್ಪ ಅವರ ಆಶಯವನ್ನು ಗೀತಾ ಅವರನ್ನು ಗೆಲ್ಲಿಸುವ ಮೂಲಕ ಪೂರೈಸಿ ಎಂದು ಕೋರಿದರು. ಅವರ ತಪ್ಪಿ ನಡೆದಲ್ಲಿ ನನಗೆ ಹೇಳಿ. ನಾನು ಸರಿ ಮಾಡುತ್ತೇನೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು.
ಮುಖಂಡ ಜಮೀರ್ ಅಹ್ಮದ್ ಮಾತನಾಡಿದರು. ಶಿವರಾಜಕುಮಾರ್ ಅವರು ಹೋದಲೆಲ್ಲಾ ಅವರ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಿದ್ದು, ಪತ್ನಿಯನ್ನು ಬೆಂಬಲಿಸುವಂತೆ ಕೋರುತ್ತಿದ್ದರು. ಎಲ್ಲೆಡೆ ನೂಕುನುಗ್ಗಲು ಇದ್ದು, ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಜೆಡಿಎಸ್ಗೆ ಎಸ್ಡಿಪಿಐ ಬೆಂಬಲ
ಶಿವಮೊಗ್ಗ: ಜೆಡಿಎಸ್ದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಅವರಿಗೆ ಬೆಂಬಲಿಸುವುದಾಗಿ ಘೋಷಿಸಿದೆ. ನಗರದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹಾಗೂ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಬಷೀರ್ ಅಹ್ಮದ್ ಈ ವಿಷಯ ತಿಳಿಸಿದರು.
ಬಷೀರ್ ಅಹ್ಮದ್, ಕಾಂಗ್ರೆಸ್ ಭ್ರಷ್ಟಾಚಾರ, ಬಿಜೆಪಿ ವರ್ತನೆಗೆ ನಮ್ಮ ವಿರೋಧವಿದೆ. ಹಾಗಾಗಿ ಯುಪಿಎ ಮತ್ತು ಎನ್ಡಿಎ ಹೊರತುಪಡಿಸಿದ ತೃತೀಯ ರಂಗಕ್ಕೆ ನಮ್ಮ ಬೆಂಬಲವಿದೆ. ರಾಜ್ಯದಲ್ಲಿ ಜೆಡಿಎಸ್ ಮೂರು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಟ್ಟಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ರೇಖಾ ಚಂದ್ರಶೇಖರ್, ಮಹೇಶ್, ಪಾಲಾಕ್ಷಿ, ನಾಗರಾಜ ಕಂಕಾರಿ, ಕೇಬಲ್ ಬಾಬು, ಮುಖಂಡರಾದ ಜಿ.ಡಿ. ಮಂಜುನಾಥ್ ಸೇರಿ ಹಲವರು ಗೋಷ್ಠಿಯಲ್ಲಿದ್ದರು.
ಬರಿಗಾಲಲ್ಲಿ ನಡೆದ ಶಿವಣ್ಣ
ಬೆಳಗಿನಿಂದಲೂ ಪತ್ನಿ ಗೀತಾ ಅವರಿಗೆ ಜತೆಯಾಗಿದ್ದ ಶಿವರಾಜ್ಕುಮಾರ್ ಅವರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡಾಗಲೂ ಕಾಲಿಗೆ ಚಪ್ಪಲಿ ಹಾಕಿರಲಿಲ್ಲ.
ಮೊದಲಿಗೆ ಬಾಲರಾಜ ಅರಸ್ ರಸ್ತೆಯಲ್ಲಿರುವ ಮಸೀದಿ, ನಂತರ ಸೇಕ್ರೆಡ್ ಹಾರ್ಟ್ ಚರ್ಚ್, ಮಾರಿಕಾಂಬ ದೇಗುಲ, ಕೊನೆಯಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಮೆರವಣಿಗೆಯಲ್ಲೂ ಪಾಲ್ಗೊಂಡರು. ಈ ಸಂದರ್ಭದಲ್ಲಿ ಎಲ್ಲೋ ಚಪ್ಪಲಿ ಕಳೆದುಕೊಂಡ ಶಿವರಾಜ್ಕುಮಾರ್ ಅವರು ಪರದಾಡುವಂತಾಯಿತು. ಕಾದ ಬಿಸಿಲಿನಲ್ಲಿ ಮಹಾವೀರ ವೃತ್ತದಿಂದ ಡಿಸಿ ಕಚೇರಿ ವರೆಗೆ ನಡೆಯಲು ಕಷ್ಟಪಟ್ಟರು.
ದಾರಿಯುದ್ದಕ್ಕೂ ಇಬ್ಬರೂ ಕಾರ್ಯಕರ್ತರು, ಅಭಿಮಾನಿಗಳತ್ತ ಕೈಬೀಸುತ್ತಾ ಸಾಗಿರದರು. ಶಿವರಾಜಕುಮಾರ್ ಅವರು ಹತ್ತಿರ ಬಂದ ಅಭಿಮಾನಿಗಳ ಕೈಕುಲುಕಿ ಮತ ನೀಡುವಂತೆ ಮನವಿ ಮಾಡಿದರು.
ಗೀತಾ ಪ್ರಚಾರ ಇಂದು
ಶಿವಮೊಗ್ಗ: ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಅವರು ಮಾ. 25ರಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬೆಳಗಿನಿಂದ ಸಂಜೆವರೆಗೆ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 8.30ಕ್ಕೆ ಕೊಮ್ಮನಾಳು, 9.30ಕ್ಕೆ ಹೊಳಲೂರು, 10.30ಕ್ಕೆ ಬುಳ್ಳಾಪುರ, ಮಧ್ಯಾಹ್ನ 12.30ಕ್ಕೆ ಹೊಳೆ ಹನಸವಾಡಿ, 2.20ಕ್ಕೆ ಹೊಳೆಬೆನವಳ್ಳಿ, 3 ಗಂಟೆಗೆ ಪಿಳ್ಳಂಗೆರೆ, 3.30ಕ್ಕೆ ಕೂಡ್ಲಿ, ಸಂಜೆ 4.30ಕ್ಕೆ ಬಿ. ಬೀರನಹಳ್ಳಿ, 5 ಗಂಟೆಗೆ ಹಸೂಡಿ, 6 ಗಂಟೆಗೆ ನಿಧಿಗೆ ಹಾಗೂ 7.30ಕ್ಕೆ ಮಲಗೊಪ್ಪ ಗ್ರಾಮದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

