ಶಿವಮೊಗ್ಗ

ಮಹಿಳಾ ಶಕ್ತಿ ಬೆಂಬಲಿಸಿ: ಮಧು ಮನವಿ

Published On :

ಶಿಕಾರಿಪುರ: ಜಿಲ್ಲೆಯಲ್ಲಿ ಹೊಸ ಪ್ರಬಲ ಮಹಿಳಾ ಶಕ್ತಿಯು ಉದಯವಾಗುತ್ತಿದ್ದು, ಈ ಶಕ್ತಿಯನ್ನು ಹೆಮ್ಮರವಾಗಿಸಲು ಮಹಿಳೆಯರ ಸಹಿತ ಪುರುಷರು ಶಕ್ತಿ ತುಂಬಿ ಪೋಷಿಸಬೇಕಾಗಿದೆ ಎಂದು ಶಾಸಕ ಮಧುಬಂಗಾರಪ್ಪ ತಿಳಿಸಿದರು.
ಬುಧವಾರ ತಾಲೂಕಿನ ಈಸೂರು, ಸಾಲೂರು, ಹೊಸೂರು ಮತ್ತಿತರ ಕಡೆಗಳಲ್ಲಿ ಸಹೋದರಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಜತೆ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಂದೆಯವರ ರಾಜಕೀಯ ಜೀವನವನ್ನು ಬಹು ಸಮೀಪದಿಂದ ವೀಕ್ಷಿಸಿ ಅರಿತಿರುವ ಸಹೋದರಿ ಗೀತಾ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸಿ ಬಂಗಾರಪ್ಪನವರ ತತ್ವ ಸಿದ್ದಾಂತಗಳನ್ನು ಮುಂದುವರಿಸಿ ಜನತೆಯ ಸೇವೆಗೈಯಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಏ.17ಕ್ಕೆ ಉತ್ತರ:  ಕೆಲ ದಿನದ ಹಿಂದೆ ಯಡಿಯೂರಪ್ಪ ಹಾಗೂ ರಾಘವೇಂದ್ರರನ್ನು ಹಿಗ್ಗಾಮುಗ್ಗಾ ತೆಗಳುತ್ತಿದ್ದ ಆಯನೂರು ಮಂಜುನಾಥ್‌ಗೆ ಇದೀಗ ನನ್ನ ತಲೆಯ ಕೂದಲ ಬಗ್ಗೆ ಆಸಕ್ತಿ ಹೆಚ್ಚಾಗಿದ್ದು, ಈ ಬಗ್ಗೆ ಅನಾವಶ್ಯಕವಾಗಿ ಮಾತನಾಡುವ ಅವರಿಗೆ ಏಪ್ರಿಲ್ 17 ರ ಸಂಜೆ ಸೂಕ್ತರೀತಿಯಲ್ಲಿ ಸಿಂಗರಿಸಲು ಅವಕಾಶ ಕಲ್ಪಿಸುವುದಾಗಿ ವ್ಯಂಗ್ಯವಾಡಿದರು.
ಬಂಗಾರಪ್ಪನವರ ಸಾವಿನಲ್ಲಿ ರಾಜಕೀಯ ಮಾಡುತ್ತಿರುವ ಬಗ್ಗೆ ಕ್ಷುಲ್ಲಕ ಆರೋಪದಲ್ಲಿರುವ ಆಯನೂರು ಮಂಜುನಾಥ್ ಅವರು ಬಂಗಾರಪ್ಪನವರು ರಾಜ್ಯದ ಪ್ರತಿಯೊಬ್ಬ ಮತದಾರರ ಮನದಲ್ಲಿರುವುದಾಗಿ ಅರಿತು ವರ್ತಿಸುವಂತೆ ತಿಳಿಸಿ ಮಹಾನ್ ನಾಯಕರಿಗೆ ಸಾವು ಎಂಬುದಿಲ್ಲ ಎಂದರು.
ಬಿಎಸ್‌ವೈ ರೈತ ವಿರೋಧಿ: ರೈತರ ಪರ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ಶುಂಠಿ ಬೆಳೆಗಾರರಿಗೆ ಅವಕಾಶ ನೀಡಬಾರದು ಎನ್ನುವ ಮೂಲಕ ಪರೋಕ್ಷವಾಗಿ ರೈತರು ಅರ್ಥಿಕವಾಗಿ ಸಬಲರಾದಲ್ಲಿ ನಮ್ಮನ್ನು ವಿರೋಧಿಸಲಿದ್ದಾರೆ ಎಂಬುದಾಗಿದ್ದು ತಾಲೂಕಿನ ಈಸೂರಿನ ಸಾಗುವಳಿದಾರರನ್ನು ಜೈಲಿಗೆ ಕಳುಹಿಸಿದವರು ಎಂದು ಕುಟುಕಿದರು.
ಜೆಡಿಎಸ್ ಅಭ್ಯರ್ಥಿ ಗೀತಾ ಮಾತನಾಡಿ, ತಂದೆ ಬಂಗಾರಪ್ಪನವರ ರಾಜಕೀಯ ಕಾರ್ಯವೈಖರಿ ಜನಪರ ಕಾಳಜಿಯನ್ನು ಸಮೀಪದಿಂದ ಅರ್ಥೈಸಿಕೊಂಡಿರುವ ನನಗೆ ಅವರು ನಂಬಿದ ಧ್ಯೇಯ, ತತ್ವ, ಸಿದ್ದಾಂತಗಳನ್ನು ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಗೀತಾ ಬೆಂಬಲಿಸಿ: ಶಾಸಕಿ ಶಾರದಾ ಪೂರ್ಯಾನಾರ್ಯ ಮಾತನಾಡಿ, ಎಲ್ಲಾ ವರ್ಗದ ಜನತೆಯ ಕಲ್ಯಾಣಕ್ಕಾಗಿ ಶ್ರಮಿಸಿದ ಬಂಗಾರಪ್ಪನವರ ಪರಂಪರೆಯನ್ನು ಮುಂದುವರಿಸಲು ಗೀತಾರನ್ನು ಬೆಂಬಲಿಸುವಂತೆ ಕೋರಿದರು.
ಸ್ಥಳೀಯ ಮುಖಂಡ ಎಚ್.ಟಿ. ಬಳಿಗಾರ್, ರಾಜ್ಯ ಪ್ರ.ಕಾ ಗಜೇಂದ್ರ, ಅಲ್ಪಸಂಖ್ಯಾತರ ಘಟಕದ ಅದ್ಯಕ್ಷ ಮಕ್ಬೂಲ್ ಸಾಬ್,ಪ.ಪಂ ಸದಸ್ಯೆ ರಶೀದಾಬಾನು,ತ್ರಪತಿನಾಯ್ಕ್,ಮಲ್ಲೇಶಪ್ಪ,ಗಾಯತ್ರಮ್ಮ,ಕುಸುಮ,ಪ್ರಭಾವತಿ,ಲತಾ,ಜಯಾನಾಯ್ಕ ಮತ್ತಿತರರು ಜತೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.