ಶಿವಮೊಗ್ಗದಲ್ಲಿ ಇಎಸ್ಐ ಆಸ್ಪತ್ರೆ
ಶಿವಮೊಗ್ಗ: ಗುಲ್ಬರ್ಗದಲ್ಲಿ ಇರುವಂತೆ ಇಲ್ಲಿಯೂ ಸಹ ಇಎಸ್ಐ ಆಸ್ಪತ್ರೆ ಬೇಕಾಗಿದೆ. ಮುಂಬರುವ ದಿನಗಳಲ್ಲಿ ಮೋದಿ ರಾಷ್ಟ್ರದ ಚುಕ್ಕಾಣಿ ಹಿಡಿಯಲಿದ್ದು, ಆಗಬೇಕಾಗಿರುವ ಕೆಲಸಗಳ ಪಟ್ಟಿಯೊಂದಿಗೆ ಬಂದರೆ ಈಡೇರಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ನಗರದ ಆಟೋ ಕಾಂಪ್ಲೆಕ್ಸ್ನಲ್ಲಿ ಮಲ್ಲಿಕಾರ್ಜುನ ಆಗ್ರೋ, ಸ್ವಯಂಪ್ರೇರಿತ ರಕ್ತದಾನ ಸೇವಾ ಸಂಸ್ಥೆ, ಆಧಾರ್ ರಕ್ತದಾನಿಗಳ ಸೇವಾ ಸಂಸ್ಥೆ, ಶ್ರಮಜೀವಿಗಳ ಸಂಘಟನೆ ಸಂಯುಕ್ತವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ನಮೋ ಜತೆ ಚರ್ಚೆ: ಮಖ್ಯಮಂತ್ರಿ ಆಗಿದ್ದಾಗ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಿದೆ. ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಿದ್ದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಬೇಕೆಂಬ ಕನಸಿತ್ತು. ಆದರೆ ನಾನು ಅಧಿಕಾರದಿಂದ ಇಳಿದ ಮೇಲೆ ಬಂದವರ ನಿರ್ಲಕ್ಷ್ಯದಿಂದ ಆಗಲಿಲ್ಲ. ಈಗಾಗಲೇ ನಾನು ನರೇಂದ್ರ ಮೋದಿ ಅವರ ಜತೆ ಹಲವು ವಿಷಯಗಳನ್ನು ಚರ್ಚಿಸಿದ್ದೇನೆ. ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಕೈಗಾರಿಕೋದ್ಯಮಿಗಳಾದ ಎಸ್.ರುದ್ರೇಗೌಡ, ನಂಜುಂಡಶೆಟ್ಟಿ, ಎಸ್.ಎಸ್.ಜ್ಯೋತಿಪ್ರಕಾಶ್, ಸುಬ್ರಹ್ಮಣ್ಯ, ಜೆ. ಎನ್.ಎನ್. ಮೂರ್ತಿ ಮತ್ತಿತರರು ಇದ್ದರು. ಎ.ಎಂ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
'ನರೇಂದ್ರ ಮೋದಿ ಗೆಲ್ಲಿಸಿ'
ಹಾರನಹಳ್ಳಿ: ದೇಶವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಹತ್ತು ಹಲವು ಕನಸು ಹೊತ್ತುಕೊಂಡ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಹಾರನಹಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶ ಇಂದು ಅನೇಕ ಬಿಕ್ಕಟ್ಟು ಎದುರಿಸುತ್ತಿದೆ. ನೆರೆ ರಾಷ್ಟ್ರಗಳಿಂದ ಅನೇಕ ಸವಾಲು ಸ್ವೀಕರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮರ್ಥ ನಾಯಕನ ಅವಶ್ಯಕತೆ ದೇಶಕ್ಕಿದೆ ಎಂದರು.
ನನ್ನನ್ನು ಗೆಲ್ಲಿಸಿ, ನೆನೆಗುದಿಗೆ ಬಿದ್ದಿರುವ ತುಂಗಾ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ಶ್ರಮ ಹಾಕುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಕೆ.ಜಿ. ಕುಮಾರಸ್ವಾಮಿ, ಚಿದಾನಂದ ಆಚಾರ್ಯ, ರಮೇಶ್, ಶಿವಾನಾಯ್ಕ, ರಾಂ ರಾವ್ ಕೋರೆ, ಗಿರೀಶ್ ದುಮ್ಮಿ, ಹುಬ್ಬಳ್ಳಿ ನಾಗರಾಜ್ ಉಪಸ್ಥಿತರಿದ್ದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ಮಠದ್ ಅಧ್ಯಕ್ಷತೆ ವಹಿಸಿದ್ದರು.
'ಅಡಕೆ ಬೆಳೆಗಾರರ ಜೊತೆ ಚೆಲ್ಲಾಟ'
ಹಸೂಡಿ: ಕೇಂದ್ರ ಸರ್ಕಾರ ಅಡಕೆ ಬೆಳೆಗಾರರೊಂದಿಗೆ ಚೆಲ್ಲಾಟವಾಡುತ್ತಿದ್ದು, ಅಡಕೆ ನಿಷೇಧ ಸಂಬಂಧ ನ್ಯಾಯಾಲಯಕ್ಕೆ ಅಫಿಡೆವಿಟ್ ಸಲ್ಲಿಸಿದೆ ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಇಲ್ಲಿಗೆ ಸಮೀಪದ ಹಸೂಡಿ ಗ್ರಾಮದಲ್ಲಿ ಸಂಜೆ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಡಕೆ ವಿಚಾರವಾಗಿ ಈಗಾಗಲೇ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದು, ಸಂಸತ್ ಪ್ರವೇಶಿಸಿದರೆ ನನ್ನ ಮೊದಲ ಆದ್ಯತೆ ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರಲ್ಲದೇ, ಬಗರ್ ಹುಕುಂ ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿಗೂ ಪ್ರಯತ್ನಿಸುವುದಾಗಿ ಹೇಳಿದರು.
ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ಸಿಗಬೇಕಾಗಿದೆ. ಹಾಗೆಯೇ, ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರುತ್ತದೆ. ನಮೋ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದೇಶಕ್ಕೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ರೈತರ ನೆರವಿಗೆ ಧಾವಿಸುವ ಉದ್ದೇಶವಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

