ಸ್ಟಿಕ್ಕರ್ ತೆರವಿಗೆ ಬಜರಂಗದಳ ಆಗ್ರಹ
ಶಿವಮೊಗ್ಗ: ರಸ್ತೆ ಮಾರ್ಗಸೂಚಿ ಫಲಕಗಳ ಮೇಲೆ ಅಂಟಿಸಿರುವ ಸ್ಟಿಕ್ಕರ್ಗಳನ್ನು ತೆರವುಗೊಳಿಸುವಂತೆ ಬಜರಂಗದಳವು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಒತ್ತಾಯಿಸಿದೆ. ಶಿವಮೊಗ್ಗ ನಗರದಿಂದ ಹೊಳೆಹೊನ್ನೂರಿಗೆ ಹೋಗುವ ಮಾರ್ಗದಲ್ಲಿ ರಸ್ತೆ ನಿಯಮ ತೋರಿಸುವ ಫಲಕಗಳಿಗೆ ಕಿಡಿಗೇಡಿಗಳು ಇಂಗ್ಲಿಷ್ನಲ್ಲಿ ಜೀಸಸ್ ಎಂದಿರುವ ಸ್ಟಿಕರ್ಗಳನ್ನು ಅಂಟಿಸಿದ್ದಾರೆ. ಇದನ್ನು ತೆರವುಗೊಳಿಸುವಂತೆ ಸಂಘಟನೆಯ ಸದಸ್ಯರು ಮನವಿ ಸಲ್ಲಿಸಿ ಆಗ್ರಹಿಸಿದರು. ಒಂದು ಧರ್ಮದ ಪ್ರಚಾರ ಮಾಡಲು ಸರ್ಕಾರಿ ಸ್ವತ್ತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಸಮಾಜದ ಸ್ವಾಸ್ಥ್ಯ ಕದಡುವ ಕೆಲಸವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದು, ಅವನ್ನು ಪತ್ತೆ ಹಚ್ಚಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವ ಜತೆಗೆ ಅಂಟಿಸಿರುವ ಸ್ಟಿಕರ್ಗಳನ್ನು ತೆರವುಗೊಳಿಸುವಂತೆ ಸಂಘಟನೆಯ ದೀನದಯಾಳು, ಸದಾನಂದ, ಚಂದ್ರಶೇಖರ್, ಮಾಲತೇಶ್, ಜಗದೀಶ್ ಮತ್ತಿತರರು ಆಗ್ರಹಿಸಿದ್ದಾರೆ.
ಒಬ್ಬರು ಪರೀಕ್ಷೆ ಬರೆಯಲು 24 ಮಂದಿ ಕಾವಲು
ಆಯನೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಗುರುವಾರ ಆಯನೂರಿನ ಪರೀಕ್ಷಾ ಕೇಂದ್ರದಲ್ಲಿ ಒಬ್ಬರೇ ಅಭ್ಯರ್ಥಿ ಹಿಂದಿ ಪರೀಕ್ಷೆಗೆ ಹಾಜರಾದ ಪ್ರಸಂಗ ನಡೆದಿದೆ.
ಕುಂಸಿ, ಹಾರ್ನಹಳ್ಳಿ ಹಾಗೂ ಆಯನೂರು ವ್ಯಾಪ್ತಿಯ ಏಕೈಕ ಪರೀಕ್ಷಾ ಕೇಂದ್ರ ಆಯನೂರಿನಲ್ಲಿದ್ದು, ಒಬ್ಬರೇ ಮಹಿಳೆ ಪರೀಕ್ಷೆ ಬರೆದರು. ವಾಸ್ತವವಾಗಿ ಈ ಕೇಂದ್ರದಲ್ಲಿ ಇವರೊಬ್ಬರೇ ಪರೀಕ್ಷೆ ತೆಗೆದುಕೊಂಡಿದ್ದರು. ಅಲ್ಲದೇ ಇವರು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದರು.
ಇದಕ್ಕೆ ಸಾಕ್ಷಿಯಾಗಿದ್ದು ಮಾತ್ರ ಬರೋಬ್ಬರಿ 24 ಜನ. ಒಬ್ಬ ಪ್ರಾಂಶುಪಾಲರು, ಒಬ್ಬ ಪರೀಕ್ಷೆ ಅಧೀಕ್ಷಕರು, ಒಬ್ಬ ಸಹ ಮುಖ್ಯ ಅಧೀಕ್ಷಕರು, ಇಬ್ಬರು ವಿಶೇಷ ಜಾಗೃತ ದಳ ಸಿಬ್ಬಂದಿ, ಒಬ್ಬರು ಕೊಠಡಿ ಮೇಲ್ವಿಚಾರಕರು, ಶಿವಮೊಗ್ಗದಿಂದ ಪ್ರಶ್ನೆ ಪತ್ರಿಕೆ ತಂದುಕೊಟ್ಟು, ಉತ್ತರ ಪತ್ರಿಕೆ ತೆಗೆದುಕೊಂಡು ಹೋಗಲು ನಾಲ್ವರು, 11 ಉಪನ್ಯಾಸರು ಇರಬೇಕಾದ ಸಂದರ್ಭ ಒದಗಿತ್ತು.
ದುಡಿಮೆಯಷ್ಟೇ ಉಳಿತಾಯಕ್ಕೂ ಗಮನ ನೀಡಿ: ಕಾಮತ್
ಸೊರಬ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದುಡಿಮೆಯಷ್ಟೆ ಉಳಿತಾಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ ಎಂದು ಶಿವಮೊಗ್ಗ ಮುಖ್ಯ ಅಂಚೆ ಅಧೀಕ್ಷಕ ಚಂದ್ರಕಾಂತ ಕಾಮತ್ ತಿಳಿಸಿದರು. ತಾಲ್ಲೂಕಿನ ಹಾಲಗಳಲೆಯಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡಿದ್ದ ಗ್ರಾಮೀಣ ಅಂಚೆ ಜೀವ ವಿಮೆ ಮೇಳಾ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರು ಉಳಿತಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮುಂದಿನ ಜೀವನದ ಸಂಕಷ್ಟದ ಸಮಯದಲ್ಲಿ ನೆರವಾಗುತ್ತದೆ ಎಂದರು. ಮಾರುಕಟ್ಟೆ ನಿರ್ವಾಹಕ ಶಶಿಧರ್ ಪ್ರಸ್ತಾವಿಕವಾಗಿ ಮಾತನಾಡಿ, ಅಂಚೆ ವಿಮಾ ಮೇಳದ ಜಾಲವೂ ಭಾರತದ ಎಲ್ಲಾ ಗ್ರಾಮೀಣ ಪ್ರದೇಶದ ಭಾಗಗಳಿಗೆ ವ್ಯಾಪಿಸಿದ್ದು, 13 ವಿಮಾ ಸಂಸ್ಥೆಗಳಲ್ಲಿ ಶೇಕಡ 13 ಪಾಲನ್ನು ಅಂಚೆ ಇಲಾಖೆ ಹೊಂದಿದೆ ಎಂದರು. ಅಧ್ಯಕ್ಷತೆಯನ್ನು ಎಸ್.ಓ ಶಿವಪ್ಪ ವಹಿಸಿದ್ದರು, ಬಸವನಕಟ್ಟೆ ನರೇಂದ್ರನಾಯ್ಕ, ಶಾಂತಪ್ಪ, ಮಂಜುನಾಥ, ಮಂಜಪ್ಪಗೌಡ, ಮೂರ್ತಿ, ಎಂ.ಬಿ, ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ನೂತನ ಸೌಹಾರ್ದ ಸಹಕಾರಿ ಸಂಸ್ಥೆ ಅಸ್ತಿತ್ವಕ್ಕೆ
ಸಾಗರ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಕರ್ತವ್ಯನಿರತ ಸರ್ಕಾರಿ ನೌಕರರ ಉದ್ದೇಶಿತ ಸೌಹಾರ್ದ ಸಹಕಾರಿ ಸಂಸ್ಥೆ ಎಂಬ ನೂತನ ಸಹಕಾರಿ ಸಂಸ್ಥೆ ಸ್ಥಾಪಿಸಲಾಗುತ್ತಿದ್ದು, ಸಾಗರ, ಸೊರಬ, ಶಿಕಾರಿಪುರ, ಹೊಸನಗರ, ಶಿವಮೊಗ್ಗ, ಭದ್ರಾವತಿ ತಾಲೂಕಿನ ಸರ್ಕಾರಿ ನೌಕರರು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು. ಸಹಕಾರಿ ಸಂಘದಲ್ಲಿ ಸದಸ್ಯರಾಗಬಯಸುವ ನೌಕರರು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರಬೇಕು. ಕೇಂದ್ರ ಹಾಗೂ ಅರೆಕಾಲಿಕ ಸರ್ಕಾರಿ ನೌಕರರಿಗೆ ಸದಸ್ಯತ್ವ ಪಡೆಯಲು ಅವಕಾಶ ಇರುವುದಿಲ್ಲ. ಪ್ರತಿಯೊಬ್ಬ ನೌಕರರು ಕನಿಷ್ಠ 20 ಷೇರು ಪಡೆಯಬಹುದು. ಸಾಮಾನ್ಯ ಸದಸ್ಯತ್ವ ಬಯಸುವ ನೌಕರರು ಏ. 25ರೊಳಗೆ ಸಂಪರ್ಕಿಸಬಹುದು. ಸಾಮಾನ್ಯ ಸದಸ್ಯತ್ವ ಪಡೆಯಲು ಸರ್ಕಾರಿ ನೌಕರರ ಸಂಘ, ವಿನೋಬಾ ನಗರ, ಸಾಗರ ಕಚೇರಿಯನ್ನು ಸಂಪರ್ಕಿಸಬಹುದು. ವಿವರಗಳಿಗಾಗಿ ನಾಗಭೂಷಣ್- 9481562306), ಜಿ.ಪರಮೇಶ್ವರ್-9449401554) ಸಂಪರ್ಕಿಸಬಹುದು.
ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏ.3ರಿಂದ
ಶಿವಮೊಗ್ಗ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ, ಗೋಪಾಲಗೌಡ ಬಡಾವಣೆ, ಯುವ ಸಬಲೀಕರಣ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 3ರಿಂದ 3ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು 21 ದಿನಗಳ ಕಾಲ ಹಮ್ಮಿಕೊಂಡಿದೆ. ಈ ತರಬೇತಿ ಶಿಬಿರದಲ್ಲಿ 10ರಿಂದ 17 ವರ್ಷ ವಯೋವುತಿಯೊಳಗಿನ ಬಾಲಕ, ಬಾಲಕಿಯರು ಭಾಗವಹಿಸಬಹುದಾಗಿದೆ. ಈ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಹೆಚ್ಚಿನ ತರಬೇತಿಗಾಗಿ ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ವತಿಯಿಂದ ವರ್ಷಪೂರ್ತಿ ನಡೆಯುವ ಕ್ರಿಕೆಟ್ ತರಬೇತಿಗೆ ಆಯ್ಕೆ ಮಾಡಲಾಗುವುದು. ಈ ತರಬೇತಿಯ ಸದುಪಯೋಗ ಪಡೆಸಿಕೊಳ್ಳುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ದೂ.ಸಂ.9448256122, 8951399936 ಸಂಪರ್ಕಿಸಬಹುದು.
ಇಮ್ರಾನ್ ಮಸೂದ್ ಹೇಳಿಕೆಗೆ ಬಿಜೆಪಿ ಖಂಡನೆ
ಶಿವಮೊಗ್ಗ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಕತ್ತರಿಸಿ ಹಾಕುವೆ ಎಂದು ಹೇಳಿರುವ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅವರ ಅಭ್ಯರ್ಥಿತನವನ್ನು ರದ್ದು ಮಾಡಬೇಕೆಂದು ಮತ್ತು ಅವರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಭಾರತದ ಮೇಲೆ ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಿದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ, ಬಾಬರ್ ಅಂತಹವರ ಸಂತಾನದ ಶಿಶು ಕಾಂಗ್ರೆಸ್ನ ಇಮ್ರಾನ್ ಮಸೂದ್ ವಿರುದ್ಧ ಅಖಂಡ ಭಾರತದ ಜನತೆ ತಿರುಗೇಟು ನೀಡಲಿದ್ದಾರೆ. ಭಯೋತ್ಪಾದಕರಿಗೆ ಬಿರಿಯಾನಿ ಮತ್ತು ಜಾಮೀನು ನೀಡುವ ಕಾಂಗ್ರೆಸ್ ಸರ್ಕಾರ ದೇಶಪ್ರೇಮಿಗಳನ್ನು ಹತ್ಯೆಗೈಯುವುದಾಗಿ ಹೇಳಿರುವ ಇಮ್ರಾನ್ ಮಸೂದ್ ಪರವಾಗಿ ಮೃದು ಧೋರಣೆ ತೋರಿಸುತ್ತಿರುವುದು ಕಾಂಗ್ರೆಸ್ನ ಕೋಮುವಾದಿ ಧರ್ಮಾಂದತೆಯ, ಮಾನಸಿಕತೆಯ ಸ್ಥಿತಿ ದೇಶದ್ರೋಹಿ ಕೆಲಸ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ. ಶಂಕರ್ ತಿಳಿಸಿದ್ದಾರೆ.
ಕ್ಷೇತ್ರದ ವಿವಿಧೆಡೆ ಬಿಜೆಪಿ ಎಲ್ಇಡಿ ಪ್ರಚಾರ
ಶಿವಮೊಗ್ಗ: 2014ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯು ಆಧುನಿಕ ತಂತ್ರಜ್ಞಾನದೊಂದಿಗೆ ಬೃಹತ್ ಎಲ್.ಇ.ಡಿ. ಪರದೆಯ ಮೇಲೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವ ಚಲನಶೀಲ ಚಿಂತನೆಯೊಂದಿಗೆ ಈ ದೇಶದ ಬೆಳವಣಿಗೆಗೆ, ಗೌರವಕ್ಕೆ ಉಚ್ಛ್ರಾಯ ಸ್ಥಿತಿಯನ್ನು ಕೊಡುವ ದಿಕ್ಕಿನಲ್ಲಿ ತಮ್ಮ ಆಲೋಚನೆ ಆಶಯಗಳು ಹೇಗಿರಬೇಕೆಂದು ಅದಕ್ಕಾಗಿ ತಾವು ಬಿಜೆಪಿಯನ್ನು ಬೆಂಬಲಿಸಬೇಕೆಂದು ಈ ಬೃಹತ್ ಪರದೆಯ ಮೇಲೆ ಅನಾವರಣಗೊಳಿಸಿದ್ದಾರೆ. ಇದರ ಪ್ರಚಾರವು ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಆರಂಭವಾಗಿದ್ದು, ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನಡೆಯಲಿದೆ ಎಂದು ಪಕ್ಷದ ಮಾಧ್ಯಮ ಪ್ರಮುಖ ಮಧುಸೂದನ ಹೇಳಿದ್ದಾರೆ. ಮಾರ್ಚ್ 30 ಹಾಗೂ ಏಪ್ರಿಲ್ 9ರಂದು ತೀರ್ಥಹಳ್ಳಿ, ಮಾರ್ಚ್ 31 ಹಾಗೂ ಏಪ್ರಿಲ್ 1ರಂದು ಬೈಂದೂರು, ಏ.2 ಹಾಗೂ 10ರಂದು ಹೊಸನಗರ, ಏ.3 ಹಾಗೂ 11ರಂದು ಸಾಗರ, ಏ.4 ಮತ್ತು 12ರಂದು ಸೊರಬ, ಏ.5 ಹಾಗೂ 13ರಂದು ಶಿಕಾರಿಪುರದಲ್ಲಿ ಪ್ರದರ್ಶನ ನಡೆಯಲಿದೆ.
ಮಾವಿನ ತೋಪಿಗೆ ಬೆಂಕಿ: ಲಕ್ಷಾಂತರ ಹಾನಿ
ಸೊರಬ: ತಾಲೂಕಿನ ಆನವಟ್ಟಿ ಹೋಬಳಿ ಭಾರಂಗಿ ಗ್ರಾಮದ ಚನ್ನಬಸಪ್ಪ ಗೌಡ ಎಂಬವರ ಮಾವಿನ ತೋಪಿಗೆ ಬೆಂಕಿ ಬಿದ್ದು, ಲಕ್ಷಾಂತರ ರುಪಾಯಿ ನಷ್ಟವಾಗಿದೆ. ತಾಲೂಕಿನ ಗಡಿ ಗ್ರಾಮ ಭಾರಂಗಿಯ ಸರ್ಕಾರಿ ಜಮೀನಲ್ಲಿ ಬೆಳೆದ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಾಳಿಯು ಹೆಚ್ಚಾಗಿದ್ದರಿಂದ ಪಕ್ಕದಲ್ಲಿದ್ದ 17 ಎಕರೆಯಲ್ಲಿನ ಸುಮಾರು 550- 600 ಫಲಭರಿತ ಮಾವಿನ ಗಿಡಗಳು ಬೆಂಕಿಗೆ ಆಹುತಿಯಾಗಿ ಕಂದಿಹೋಗಿವೆ. ಕಂದಾಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಭಾರಂಗಿ ಗಡಿ ಗ್ರಾಮವಾಗಿದ್ದು, ತಾಲೂಕು ಕೇಂದ್ರಕ್ಕೆ ಸುಮಾರು 45 ಕಿಮೀ ದೂರದಲ್ಲಿದೆ. ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚಾರವೂ ಇಲ್ಲ. ರಸ್ತೆಗಳೂ ಗುಂಡಿ ಬಿದ್ದಿವೆ. ಸರ್ಕಾರದ ಸವಲತ್ತುಗಳು ಸಹ ಹೆಚ್ಚಿನ ಪಾಲು ಸಿಗದೇ ಮರೀಚಿಕೆಯಾಗುತ್ತಿದೆ. ಇದರಿಂದಾಗಿ ಅವಘಡಗಳು ಸಂಭವಿಸಿದಾಗ ಅತೀವ ರೋಗದಿಂದ ಬಳಲುತ್ತಿರುವವರಿಗೆ ನಿಗದಿತ ಸಮಯಕ್ಕೆ ಸೇವೆ ಸಿಗುತ್ತಿಲ್ಲ. ಆನವಟ್ಟಿಯಲ್ಲಿನ ಅಗ್ನಿಶಾಮಕ ದಳ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಏ.1ರಿಂದ ಉಚಿತ ತರಬೇತಿ ಶಿಬಿರ
ಸಾಗರ: ಇಲ್ಲಿನ ವನಶ್ರೀ ಟ್ರಸ್ಟ್ ಹಾಗೂ ಬೆಂಗಳೂರಿನ ಕಲೆಕ್ಟ್ ಫೌಂಡೇಶನ್ ಹಾಗೂ ಶ್ರೀ ವೀರಾಂಜನೇಯ ಶೈಕ್ಷಣಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ಶ್ರೀ ಮಾರುತಿ ಗುರೂಜಿ ಅವರ ಮಾರ್ಗದರ್ಶನದಲ್ಲಿ ಉಚಿತ ತರಬೇತಿ ಹಾಗೂ ವಿಶೇಷ ಕೊಡುಗೆ ಕಾರ್ಯಕ್ರಮವನ್ನು ಬಂಗಾರಮಕ್ಕಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ. ತೇರ್ಗಡೆಯಾದ 16 ರಿಂದ 30 ವರ್ಷ ವಯಸ್ಸಿನೊಳಗಿನ ಯುವಕ ಯುವತಿಯರಿಗೆ ಏ.1 ರಿಂದ ಏ. 16ರವರೆಗೆ ಸನಿವಾಸ ತರಬೇತಿ ಶಿಬಿರ ಏರ್ಪಡಿಸಿದೆ. ಡ್ರೈವಿಂಗ್, ಕಂಪ್ಯೂಟರ್, ಮಾರುಕಟ್ಟೆ, ಜೇಮ್ಸ್ ಎಂಡ್ ಜ್ಯುವೆಲ್, ಬ್ಯಾಂಕಿಂಗ್, ಆಟೋಮೊಬೈಲಲ್ಕುರಿತು ತರಬೇತಿ ನೀಡಲಾಗುವುದು. ಏ.1ರಿಂದ ಏ. 10ರವರೆಗೆ ಹೆಣ್ಣುಮಕ್ಕಳಿಗೆ ತರಬೇತಿ ಹಾಗೂ ಏ.8 ರಿಂದ ಏ. 16ವರೆಗೆ ಗಂಡು ಮಕ್ಕಳಿಗೆ ತರಬೇತಿ ಶಿಬಿರ ಇರುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ತರಬೇತಿಯ ನಂತರ 1 ಸಾವಿರ ರೂ. ಗೌರವಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎಚ್.ಪಿ. ಮಂಜಪ್ಪ 94481 36996 ಸಂಪರ್ಕಿಸಲು ಕೋರಲಾಗಿದೆ.
ಮಕ್ಕಳನ್ನು ಶಾಲೆಗೆ ಸೇರಿಸಲು ಸಾನ್ನಿಧ್ಯ ಒತ್ತಾಯ
ಶಿವಮೊಗ್ಗ: ಗೆಜ್ಜೇನಹಳ್ಳಿಯಲ್ಲಿರುವ ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆ ಮತ್ತು ವಸತಿನಿಲಯಕ್ಕೆ ಸೇರಿಸುವಂತೆ ಒತ್ತಾಯಿಸಿ ಸಾನ್ನಿಧ್ಯ ಫೌಂಡೇಷನ್ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಅರ್ಪಿಸಿದೆ.
ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಿರುವ ಗೆಜ್ಜೇನಹಳ್ಳಿ ಗ್ರಾಮ ವ್ಯಾಪ್ತಿಯ ಜೆಲ್ಲಿ ಕ್ರಷರ್ಗಳಲ್ಲಿ ದಿನಗೂಲಿ ಕೆಲಸಕ್ಕೆಂದು ಉತ್ತರ ಕರ್ನಾಟಕದಿಂದ ಕಾರ್ಮಿಕರು ವಲಸೆ ಬಂದಿದ್ದು, ಅಲ್ಲಿ ಸುಮಾರು 50ರಿಂದ 70 ಕುಟುಂಬಗಳಿವೆ. ಈ ಕುಟುಂಬಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾದ ಸಾಕಷ್ಟು ಮಕ್ಕಳಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಸಾನ್ನಿಧ್ಯ ಸಮಾಜ ಸೇವಾ ಸಂಸ್ಥೆಯು ಕಾನೂನಿನ ಅರಿವು ನೀಡಿವ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಇಂತಹ ಶಿಕ್ಷಣ ವಂಚಿತ ಮಕ್ಕಳು 30ರಿಂದ 40ರಷ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು 6ರಿಂದ 10 ವರ್ಷ ವಯಸ್ಸಿನವರಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಶಾಲೆಗೆ ಹೋಗಲು ಉತ್ಸುಕರಾಗಿದ್ದ ಮಕ್ಕಳನ್ನೂ ಗುರುತಿಸಲಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ತಟ್ಟೆಯಲ್ಲಿ ರಂಗೋಲಿ ಬಿಡಿಸುವ ಸ್ಪರ್ಧೆ ನಾಳೆ
ಸಾಗರ: ಇಲ್ಲಿನ ಶಾರದಾಂಬಾ ದೇವಸ್ಥಾನದ ಚಾರೋಡಿ ಕೊಂಕಣಿ ಆಚಾರ್ ಸಮಾಜ ಹಾಗೂ ಶ್ರೀ ಶಾರದಾಂಬಾ ಯುವಜನ ಸಂಘ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ತಾಲೂಕು ಮಟ್ಟದ ತಟ್ಟೆಯಲ್ಲಿ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಮಾ. 31ರಂದು ಏರ್ಪಡಿಸಲಾಗಿದೆ. ಮಹಿಳೆಯರು ರಂಗೋಲಿ ತಟ್ಟೆಯನ್ನು ಮನೆಯಲ್ಲಿಯೆ ಬಿಡಿಸಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯೊಳಗೆ ದೇವಸ್ಥಾನಕ್ಕೆ ತಂದು ಕೊಡಬೇಕು. ವಿಜೇತರಿಗೆ ಪ್ರಥಮ ಬಹುಮಾನ 1,001 ರು., ದ್ವಿತೀಯ ಬಹುಮಾನ 701 ರು., ತೃತೀಯ ಬಹುಮಾನ 501 ರು. ನೀಡಲಾಗುವುದು. ಪ್ರವೇಶ ಶುಲ್ಕ 20 ರು. ನಿಗಧಿಪಡಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಮೊ. 9739607431, 9449475163, 9880390911 ಸಂಪರ್ಕಿಸಲು ಕೋರಲಾಗಿದೆ. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರಿಗೆ -ಬೆಲೆ ಹೇಳಿ - ಬಹುಮಾನ ಗೆಲ್ಲಿ- ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ಜಿ.ಎಸ್.ಅರುಣ ಆಚಾರ್ ಮತ್ತು ಶಿಷ್ಯರಿಂದ ನೃತ್ಯ ಕಾರ್ಯಕ್ರಮ ಇರುತ್ತದೆ.
'ಮಾಧ್ಯಮಗಳಿಂದ ಉತ್ತಮ ಕೊಡುಗೆ ಅನಿವಾರ್ಯ'
ಶಿವಮೊಗ್ಗ: ಮಾಧ್ಯಮಗಳು ಇಂದು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ಅನಿವಾರ್ಯತೆ ಇದೆ. ಮಾಧ್ಯಮಗಳು ಸಮಾಜದ ಒಂದು ಅಂಗವಾಗಿರುವುದರಿಂದ ಜನತಾಂತ್ರಿಕ ಸೂತ್ರವನ್ನು ಅಳವಡಿಸಿಕೊಳ್ಳುವುದರ ಮೂಲಕ ಜನರನ್ನು ಮುಟ್ಟಲು ಪ್ರಯತ್ನಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಯದ ಹಿರಿಯ ಪ್ರಾಧ್ಯಾಪಕಿ ಪ್ರೊ. ಉಷಾರಾಣಿ ಅಭಿಪ್ರಾಯ ಪಟ್ಟರು. ಅವರು ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ ಸಮಕಾಲಿನ ಸಮೂಹ ಮಾಧ್ಯಮದಲ್ಲಿ ಸಮಾಜ ಮತ್ತು ಸಮೂಹ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಮಾಧ್ಯಮಗಳು ಜವಾಬ್ದಾರಿಯನ್ನು ಮರೆಯುತ್ತಿವೆ. ಸುದ್ದಿಯ ಗುಣಮಟ್ಟ ಕುಸಿಯುತ್ತಿದೆ ಎಂದ ಅವರು, ಸುದ್ದಿ ಮತ್ತು ತನಿಖಾ ವರದಿಯಲ್ಲಿ ಪಾರದರ್ಶಕತೆ ಅಗತ್ಯ, ಆದರೆ ಲಾಭಗಳಿಕೆ ಮಾತ್ರ ಮಾಧ್ಯಮದ ಉದ್ದೇಶವಾಗುತ್ತಿದೆ ಎಂದರು. ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ಮುಖ್ಯಸ್ಥ ಪ್ರೊ. ಮಹೇಶ್ಚಂದ್ರ ಗುರು, ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್. ಜಯದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ರಚನೆ
ಶಿವಮೊಗ್ಗ: ಲೋಕಸಭೆ ಚುನಾವಣೆ- 2014ರ ಸ್ವೀಪ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸದಸ್ಯರ ನ್ನೊಳಗೊಂಡಂತೆ ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಸಮಿತಿ ರಚಿಸಲಾಗಿದೆ. ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಅಧ್ಯಕ್ಷರು, ಮೊ. 9449095218, ಜಿಲ್ಲಾ ವಾರ್ತಾಧಿಕಾರಿಗಳಾದ ಹಿಮಂತರಾಜು. ಜಿ., ಸದಸ್ಯ ಕಾರ್ಯದರ್ಶಿ, ಮೊ. 9449322102, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಲಕ್ಷ್ಮೀಕಾಂತಮ್ಮ, ಸದಸ್ಯರು, ಮೊ. 9886781386, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ರಾಜೇಶ್, ಸದಸ್ಯರು, ಮೊ. 9449843063, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಾಲರಾಜ್ ಎನ್., ಸದಸ್ಯರು ಮೊ. 9480843044, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್ ಎಸ್.ಆರ್. ಸದಸ್ಯರು, ಮೊ. 9964178377, ಜಿಲ್ಲಾ ರೆಡ್ಕ್ರಾಸ್ ಸಂಯೋಜಕರಾದ ಅಪ್ಪಣ್ಣ ಎಂ. ಗಸ್ತಿ, ಸದಸ್ಯರು, ಮೊ. 9449457038 ಸಂಪರ್ಕಿಸಬಹುದು.
ಜಾಹೀರಾತುಗಳಿಗೆ
ಮರುಳಾಗಬೇಡಿ: ಡಾ. ವೀಣಾ
ಭದ್ರಾವತಿ: ಇಂದಿನ ಯುವಜನತೆ ಮೊಬೈಲ್ ಮತ್ತು ಟಿವಿ ಮಾಧ್ಯಮದ ಕಡೆ ಹೆಚ್ಚು ಒಲವು ತೋರಿಸುತ್ತಿರುವುದರ ಪರಿಣಾಮ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಪಟ್ಟಣದ ಖ್ಯಾತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ವೀಣಾ ಭಟ್ ತಿಳಿಸಿದರು. ಪಟ್ಟಣದ ನ್ಯೂಟೌನ್ನಲ್ಲಿರುವ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಯುವ ರೆಡ್ಕ್ರಾಸ್ ಘಟಕ ಆಯೋಜಿಸಿದ್ದ ವಿದ್ಯಾರ್ಥಿನಿಯರ ಹದಿಹರಯದ ಸಮಸ್ಯೆಗಳ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿನಿಯರು ಆಧುನಿಯ ಜಗತ್ತಿನ ಜಾಹಿರಾತುಗಳಿಗೆ ಮರುಳಾಗದೆ ಪಾಠ-ಪ್ರವಚನಗಳತ್ತ ಗಮನವೀಯುವುರೊಂದಿಗೆ ಉತ್ತಮ ಪೌಷ್ಟಿಕ ಆಹಾರ ಸೇವನೆ ಮಾಡಿ ಸದಾ ಚಟುವಟಿಕೆಯಿಂದಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಕರೆನೀಡಿದರು. ಪ್ರಾಂಶುಪಾಲ ಎಚ್.ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ನಾಸಿರ್ ಖಾನ್ ಉಪಸ್ಥಿತರಿದ್ದರು. ರೂಪ ಸ್ವಾಗತಿಸಿದರು. ಶೃತಿ ನಿರೂಪಿಸಿದರು.
ಭಂಡಾರಿ ಪರ ಪ್ರಚಾರಕ್ಕೆ ಕಾಂಗ್ರೆಸಿಗರ ಅಡ್ಡಿ
ಭದ್ರಾವತಿ: ಭದ್ರಾವತಿಯಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷವನ್ನು ಪುನಃ ಬೆಳೆಸಿದ ತಮ್ಮನ್ನು ಮಂಜುನಾಥ ಭಂಡಾರಿ ಅವರ ಪರವಾಗಿ ಪ್ರಚಾರ ಮಾಡಲು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಅಡ್ಡಿಪಡಿಸುತ್ತ ಅಭ್ಯರ್ಥಿಯನ್ನು ಹರಕೆಯ ಕುರಿಯನ್ನಾಗಿಸುತ್ತಿದ್ದಾರೆಂದು ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಆರೋಪಿಸಿದರು. ಪಟ್ಟಣದ ವೀರಶೈವ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ತಮ್ಮ ಸ್ನೇಹಿತರ, ಅಭಿಮಾನಿಗಳ ಮತ್ತು ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕನಾಗಿ ಅನೇಕ ಅಭಿವೃದ್ಧಿ ಕೆಲಸ ಮಾಡಿ ತೋರಿಸಿ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದ್ದೇನೆಂದರು. ರಾಜ್ಯದಲ್ಲಿ ಸಂಘ ಪರಿವಾರದ ಮೂಲದಿಂದ ಬಂದಿರುವ ಕೆಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವಾಗ ತಮ್ಮಂಥ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಏಕೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲವೆಂದು ಪ್ರಶ್ನಿಸಿದ ಸಂಗಮೇಶ್ವರ, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರನ್ನು ಗೆಲ್ಲಿಸಲು ತಾವು ಮತ್ತು ತಮ್ಮ ಬೆಂಬಲಿಗರು ಸಿದ್ಧರಾಗಿರುವುದಾಗಿ ತಿಳಿಸಿದರು.
ಉದ್ಯೋಗಕ್ಕಾಗಿ ವಲಸೆ ತಡೆಗಟ್ಟುವುದೇ ಸ್ಪರ್ಧೆ ಉದ್ದೇಶ
ಸಾಗರ: ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬುವುದು ಹಾಗೂ ನೈಸರ್ಗಿಕ ಕೃಷಿ ಅಳವಡಿಕೆ ಮೂಲಕ ರೈತರ ಸ್ವಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಶ್ರಮಿಸುವುದಾಗಿ ಪಕ್ಷದ ಲೋಕಸಭಾ ಅಭ್ಯರ್ಥಿ ಕೆ.ಜಿ. ಶ್ರೀಧರ ಕಲ್ಲಹಳ್ಳ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು, ಮಲೆನಾಡು ಭಾಗದ ಯುವಕರು ಉದ್ಯೋಗ ಅರಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಯುವಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಗಟ್ಟಿ ಅವರು ವಾಸಿಸುವ ಸ್ಥಳದಲ್ಲಿಯೆ ಉದ್ಯೋಗ ಕಲ್ಪಿಸುವ ಉದ್ದೇಶ ನನ್ನ ಸ್ಪರ್ಧೆಯ ಹಿಂದೆ ಇದೆ ಎಂದರು. ಪಕ್ಷಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಜೈಲಿನಿಂದ ಬೇಲ್ ಮೇಲೆ ಹೊರಗೆ ಬಂದವರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ ರಾಜ್ಯದ ಜನರಿಗೆ ತಿಳಿದಿದೆ. ಇಂತಹವರನ್ನು ಭಾವಿ ಪ್ರಧಾನ ಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ತಮ್ಮ ಪಕ್ಕದಲ್ಲಿ ಇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

