ಶಿವಮೊಗ್ಗ

ಬಿಜೆಪಿ ಅವಲೋಕನ ಸಭೆಯಲ್ಲಿ ರಣೋತ್ಸಾಹ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.30
ಚುನಾವಣೆಗೆ ಕಳೆದ ಒಂದು ತಿಂಗಳಿನಿಂದ ನಡೆದ ಪೂರ್ವಭಾವಿ ಸಿದ್ಧತೆಯ ಅವಲೋಕನ ಹಾಗೂ ಮುಂಬರುವ ಮತದಾನದ ದಿನವರೆಗಿನ ಕಾರ್ಯಯೋಜನೆ ಕುರಿತಂತೆ ಮಹತ್ವದ ಸಭೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆಯಿತು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದಿದ್ದ ಪಕ್ಷದ ಪ್ರಮುಖ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ಪಕ್ಷದ ನಾಯಕರು ಮಾರ್ಗದರ್ಶನ ಮಾಡಿ ರಣೋತ್ಸಾಹ ತುಂಬಿದರು.
ಮಾರ್ಗದರ್ಶನ:  ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಸಭೆಯಲ್ಲಿ ರಾಜಕೀಯ, ಸಂಘಟನಾ ಚಟುವಟಿಕೆ ಕುರಿತಂತೆ ಪಕ್ಷದ ಹಿರಿಯ ಮುಖಂಡರು ಪ್ರಮುಖ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದರು. ಚುನಾವಣೆ ಚಟುವಟಿಕೆಯ ಆರಂಭವಾದಾಗಿನಿಂದ ನಡೆದಿರುವ ಚಟುವಟಿಕೆ, ಅಡೆತಡೆಗಳು, ಅವಕಾಶಗಳ ಕುರಿತು ಕಾರ್ಯಕರ್ತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಮುಂದಿನ 18 ದಿನಗಳಲ್ಲಿ ಮಾಡಬೇಕಾದ ಚಟುವಟಿಕೆಗಳ ಕುರಿತು ಪಕ್ಷದ ನಾಯಕರು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮ:  ಸಭೆಯಲ್ಲಿ ಮುಂದಿನ ಚಟುವಟಿಕೆ ಕುರಿತು ಮಾತನಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ಎಂ.ಬಿ. ಭಾನುಪ್ರಕಾಶ್, ಎಂ.ಬಿ. ಭಾನುಪ್ರಕಾಶ್, ಮೂರು ಹಂತದ ಕಾರ್ಯಯೋಜನೆ ವಿವರಿಸಿದರು.
ಚುನಾವಣೆ ಸಂದರ್ಭದಲ್ಲಿ ವೇಳಾಪಟ್ಟಿಹಾಕಿಕೊಂಡು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿದರೆ ಯಶಸ್ಸು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ. ಕಾರ್ಯಕರ್ತರು ಅದರಂತೆ ನಡೆಯಬೇಕೆಂದರು.
ಏ.1 ರಿಂದ 7 ರವರೆಗೆ ಪಕ್ಷದ ಪ್ರಚಾರ ದೃಷ್ಟಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಏ.6 ರಂದು ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ. ಈ ದಿನಗಳಂದು ಬಿಜೆಪಿ ಕಾರ್ಯಕರ್ತರು ತಮ್ಮ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಬೇಕು. ಈ ಸಂಬಂಧ ಧ್ವಜ ಹಾರಾಟಕ್ಕೆ ಅವಕಾಶ ಕೋರಿ ಜಿಲ್ಲಾಧಿಕಾರಿ ಅವರಿಗೂ ಅರ್ಜಿ ಕೊಡಲಾಗಿದೆ. ಪ್ರತಿ ಬೂತ್ ಮಟ್ಟದಲ್ಲೂ ಕಾರ್ಯಕ್ರಮ ನಡೆಯಲಿದ್ದು, ಒಟ್ಟಾರೆ ಸಾವಿರಾರು ಸಂಖ್ಯೆಯಲ್ಲಿ ಇಡೀ ಜಿಲ್ಲೆಯಲ್ಲಿ ಧ್ವಜಹಾರಾಟ ನಡೆಯಬೇಕು. ಏ.3 ರಿಂದ 10 ರವರೆಗೆ ಜಿಲ್ಲೆಯ ಎಲ್ಲಾ ಶಕ್ತಿ ಕೇಂದ್ರದ ಮಟ್ಟದಲ್ಲಿ ಮಹಿಳಾ ಸಭೆಗಳನ್ನು ನಡೆಯುತ್ತವೆ. 5-6 ಪಂಚಾಯಿತಿ ಮಟ್ಟದ ಈ ಸಭೆಯಲ್ಲಿ ತಾರಾ ಮೌಲ್ಯದ ಪ್ರಮುಖರು ಪಾಲ್ಗೊಳ್ಳುವರು.
ಅಭಿಯಾನ:  ಇದೇ ಸಂದರ್ಭದಲ್ಲಿ ಸಂಘಟನೆ ಕುರಿತು ಮಾರ್ಗದರ್ಶನ ಮಾಡಲಾಗುತ್ತದೆ. ಏ.8 ರಿಂದ 14 ರವರೆಗೆ ಕಾರ್ಯಕರ್ತರು ಪ್ರತಿ ಮನೆ ಮುಟ್ಟಿ ಬಿಜೆಪಿ ಪ್ರಣಾಳಿಕೆ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳ ಕರಪತ್ರ ಹಂಚಲಿದ್ದಾರೆ. ಏ.13 ರಂದು ಮಹಾ ಸಂಪರ್ಕ ಅಭಿಯಾನ ಇಡೀ ಕ್ಷೇತ್ರಾದ್ಯಂತ ನಡೆಯುವುದು. ಅಂದು ಬೆಳಗ್ಗೆಯಿಂದ 12 ಗಂಟೆವರೆಗೆ ಪಕ್ಷದ ಮುಖಂಡರು ತಮ್ಮ ವಾರ್ಡ್‌ನಲ್ಲಿ ಕಾರ್ಯಕರ್ತರ ಜೊತೆ ಸೇರಿ ಸಂಪರ್ಕ ಅಭಿಯಾನ ನಡೆಸಬೇಕು ಎಂದು ಎಂದು ಭಾನುಪ್ರಕಾಶ್ ಸೂಚಿಸಿದರು.
ಯಾವುದೇ ಕಾರಣಕ್ಕೂ ಅಂದು ಮಧ್ಯಾಹ್ನದವರೆಗೆ ವಾಹನ ಬಳಸದೇ ಪ್ರಚಾರದಲ್ಲಿ ತೊಡಗುವಂತೆ ಸಲಹೆ ನೀಡಿದರು. ಏ.15 ರಿಂದ 17 ರವರೆಗೆ ಅಂತಿಮ ಹಂತದ ತಯಾರಿಗಳು ನಡೆಯುತ್ತದೆ. ಈ ಮಧ್ಯೆಯೇ ವಿಜಯದ ಕಡೆಗೆ ನಡಿಗೆ ಎಂಬ ಕಾರ್ಯಕ್ರಮ ನಡೆಸುವ ಕುರಿತು ರೂಪುರೇಷೆ ನಡೆಸಲಾಗುತ್ತಿದೆ ಎಂದರು.
ಸೊರಬ ತಾಲೂಕು ಸೇರಿದಂತೆ ರಿಪ್ಪನ್‌ಪೇಟೆ, ಗಾಜನೂರು ಸೇರಿ ವಿವಿಧ ಕಡೆಗಳಲ್ಲಿ 2ನೇ ಹಂತದ ಪ್ರಚಾರದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಚಾರ ನಡೆಸಲಿದ್ದಾರೆ. ಇಲ್ಲಿ ಕಾರ್ಯಕರ್ತರು ಸಭೆ, ಸಾರ್ವಜನಿಕ ಸಭೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂ ರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಮಾತುಗಳನ್ನಾಡಿ ಅನೇಕ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಆರಗ ಜ್ಞಾನೇಂದ್ರ, ಎಸ್.ದತ್ತಾತ್ರಿ, ಕೆ.ಜಿ. ಕುಮಾರಸ್ವಾಮಿ, ಗಿರೀಶ್ ಪಟೇಲ್ ಸೇರಿದಂತೆ ಅನೇಕರು ಹಾಜರಿದ್ದರು.


ಯುದ್ಧದಲ್ಲಿ ಎದುರಾಳಿಯನ್ನು ಎಷ್ಟೇ ದುರ್ಬಲ ಎನಿಸಿದರೂ ನಾವು ಕೊಡುವ ಕೊಡುವ ಪೆಟ್ಟಿನಲ್ಲಿ ರಾಜಿ ಇರಬಾರದು. ತಳ್ಳಾಡಿ ಗೆಲ್ಲಬಾರದು. ನಮ್ಮ ಪ್ರಯತ್ನ ಅಷ್ಟು ಬಲವಾಗಿರುವ. ಅಂತಿಮ ಪಂಚ್‌ನಲ್ಲಿ ಎದುರಾಳಿ ಚೇತರಿಸಿಕೊಳ್ಳಬಾರದು.
ಟಿ ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯ


ಕೆಟ್ಟ ಸಂದರ್ಭದಲ್ಲಿ ನಮ್ಮ ಸಂಘಟನೆ ಇಬ್ಭಾಗವಾಯಿತು, ಈಗ ಒಂದಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಪ್ರಯತ್ನ ಒಂದು ಸಂಘಟನೆಯ ಶಕ್ತಿಗೆ, ಯಾರೋ ಒಬ್ಬ ವ್ಯಕ್ತಿಗಾಗಿ ಅಲ್ಲ. ಅತಿಯಾದ ಆತ್ಮವಿಶ್ವಾಸವೂ ಬೇಡ.
ಟಿ  ಬಿ.ವೈ. ರಾಘವೇಂದ್ರ,
ಸಂಸದ


ನಮ್ಮ ನಮ್ಮ ಬೂತ್‌ಗಳಲ್ಲಿ ಎಷ್ಟು ಲೀಡ್ ಕೊಡಿಸಲು ಸಾಧ್ಯವೋ ಅಷ್ಟು ಪ್ರಯತ್ನಿಸಬೇಕು. ಆಗ ರಾಷ್ಟ್ರೀಯ ವಾದಿಗಳ ಅಪೇಕ್ಷೆಗೆ ಶಕ್ತಿ ಸಿಗುತ್ತದೆ. ಶಿವಮೊಗ್ಗದಲ್ಲಿ ನಾವು ಗೆಲ್ಲುತ್ತೇವೆ. ನಮೋ ಪ್ರಧಾನಮಂತ್ರಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತೇವೆ.
ಟಿ ಕೆ.ಎಸ್. ಈಶ್ವರಪ್ಪ,
ಮಾಜಿ ಡಿಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.