ಶಿವಮೊಗ್ಗ

ಎಸ್ಸಿ, ಎಸ್ಟಿ ಯೋಜನೆಯಲ್ಲಿ ಗೋಲ್‌ಮಾಲ್

Published On :

ವಿಶೇಷ ವರದಿ
ಶಿವಮೊಗ್ಗ: ಹರಿಜನ ಗಿರಿಜನ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ನಡೆದಿರುವ ಗೋಲ್‌ಮಾಲ್ ತನಿಖೆ ಮಾಡುವಂತೆ ಮುಖ್ಯಮಂತ್ರಿ ಕಚೇರಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
2011-12ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳಡಿ ಭದ್ರಾವತಿ ತಾಲೂಕಿಗೆ ಮಂಜುರಾದ ಅಂದಾಜು 40 ಕೋಟಿ ರುಪಾಯಿ ಯೋಜನೆಯಲ್ಲಿ ಈ ಅವ್ಯವಹಾರ ನಡೆದಿರುವ ಬಗ್ಗೆ ಸಿಎಂ ಕಚೇರಿಗೆ ದೂರು ಸಲ್ಲಿಕೆಯಾಗಿತ್ತು. ಇದೀಗ ಸಿಎಂ ಕಚೇರಿ ಆದೇಶದಂತೆ ಜಿಲ್ಲಾಧಿಕಾರಿಯವರು ತುರ್ತಾಗಿ ತನಿಖೆ ನಡೆಸಿ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ಎಸ್ಟಿ ಎಸ್ಟಿ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣದ ಯೋಜನೆ ಇದಾಗಿದೆ. ಭದ್ರಾವತಿ ತಾಲೂಕಿನ ಎಸ್ಸಿ ಎಸ್ಟಿ ಕಾಲೋಜನಿಗಳಲ್ಲಿ ಯೋಜನೆಗೆ ಮಂಜೂರಾದ ಹಣ ಬಳಸಿಕೊಂಡು ವ್ಯವಸ್ಥಿತವಾಗಿ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣವಾಗಬೇಕಾಗಿತ್ತು. ಆದರೆ, ಹಾಗಾಗಲೇ ಇಲ್ಲ. ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ನಿಗದಿತ ರೀತಿಯಲ್ಲಿ ಕೆಲಸ ನಡೆದಿಲ್ಲ. ಅಲ್ಲಲ್ಲಿ ರಸ್ತೆಗಳು ಕಿತ್ತುಹೋಗಿದ್ದು, ಚರಂಡಿ ಕಾಮಗಾರಿ ಸಹ ಪೇಲವವಾಗಿದೆ ಎಂಬುದು ದೂರುದಾರ ಕರ್ನಾಟಕ ನವ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ವಿವರಣೆ.
ಕಳಪೆ ಕಾಮಗಾರಿ: ಯೋಜನೆ ಪ್ರಸ್ತಾವನೆ ಸ್ವೀಕಾರವಾಗಿದ್ದು 2011-12ನೇ ಸಾಲಿನಲ್ಲಿ. ಹಣ ಬಿಡುಗಡೆಯಾಗಿ ಕಾಮಗಾರಿ ಆರಂಭವಾಗಿದ್ದು 2012-13ನೇ ಸಾಲಿನಲ್ಲಿ. ಕಾಮಗಾರಿ ಆರಂಭದಲ್ಲೇ ಕಾಮಗಾರಿ ಕಳಪೆತನದ ಬಗ್ಗೆ ಮಾತುಗಳು ಕೇಳಿಬಂದಿತ್ತು.
ರಸ್ತೆ ನಿರ್ಮಾಣಕ್ಕೆ ಮುನ್ನ ಗ್ರಾವೆಲಲ್ಬಳಸಿಯೇ ಇಲ್ಲ. ಹಾಲಿ ಇರುವ ಮಣ್ಣನ್ನೇ ಕೆದರಿ ಜಲ್ಲಿ ಹಾಕಿ ಕಾಂಕ್ರಿಟ್ ಹಾಕಲಾಗಿದೆ. ಇದು ಪ್ರತ್ಯಕ್ಷ ದರ್ಶಿಗಳು ನೀಡಿರುವ ವಿವರಣೆ. ಅದೇ ರೀತಿ ಚರಂಡಿ ಕಾಮಗಾರಿ ವೇಳೆ ಎಲ್ಲೂ ಸಹ ಪ್ಲಿಂತ್ ಬಳಸದೇ ಹಾಗೆಯೇ ಕಬ್ಬಿಣ ಕಟ್ಟಿ ಕಾಂಕ್ರಿಟ್ ಹಾಕಿ ಕಾಟಾಚಾರಕ್ಕೆ ಕಾಮಗಾರಿ ಮುಗಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಮರಳು, ಸಿಮೆಂಟನ್ನು ನಿಗದಿತ ಪ್ರಮಾಣದಲ್ಲಿ ಬಳಸಿಲ್ಲ. ಹೀಗಾಗಿ ಕಾಮಗಾರಿ ನಡೆದಿರುವ ಕಡೆಗಳಲ್ಲೆಲ್ಲಾ ನೈಜ ಬಣ್ಣ ಬಯಲಾಗುತ್ತಿದೆ ಎಂದು ಶಿವಕುಮಾರ್ಕ್‌ನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಮುಚ್ಚಿಹಾಕಲು ಪ್ರಯತ್ನ:
ಕರ್ನಾಟಕ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳೇ ನೇರವಾಗಿ ಶಾಮೀಲಾಗಿರುವ ಈ ಪ್ರಕರಣದಲ್ಲಿ ಗೋಲ್‌ಮಾಲ್ ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದು ಸುಳ್ಳಲ್ಲ. ಶಿವಕುಮಾರ್ ಆರಂಭದಲ್ಲಿ ನಿಗಮದ ಎಇಇ ಅವರಿಗೆ ದೂರು ನೀಡಿದ್ದಾರೆ. ನಂತರ ಏನೂ ಪ್ರಯೋಜನವಾಗದೇ ಇದ್ದಾಗ ಮೇಲಾಧಿಕಾರಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರಿಗೆ ದೂರು ಸಲ್ಲಿಸಲಾಯಿತು. ಅವರೂ ಸಹ ಏನೂ ಕ್ರಮಕೈಗೊಳ್ಳದೇ ಇದ್ದಾಗ ಸೂಪರಿಂಟೆಂಡೆಂಟ್ ಎಂಜಿನಿಯರ್ ಅವರಿಗೆ ದೂರಲಾಯಿತು. ನಂತರ ಮುಖ್ಯ ಎಂಜಿನಿಯರ್‌ಗೂ ಸಹ ದೂರಲಾಯಿತು.
ಈ ಸಂದರ್ಭದಲ್ಲಿ ಸಿಇ ನಿರ್ದೇಶನದಂತೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಅವರು ತಾಲೂಕು ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲು ಸೂಚಿಸಿ ತಿಪ್ಪೇ ಸಾರಿಸಿದರು. ತನಿಖೆ ಎಷ್ಟು ನಡೆಯಿತೋ- ನಡೆದಿಲ್ಲವೋ ಗೊತ್ತಿಲ್ಲ. ಕಾಮಗಾರಿ ಕಳಪೆಯಾಗಿಲ್ಲ ಎಂದು ವರದಿಯಂತೂ ಸಿದ್ಧವಾಯಿತು.
ಗೋಲ್‌ಮಾಲ್: ಇದೊಂದು ಸುಮಾರು 15ರಿಂದ 17 ಕೋಟಿ ರು. ಹಗರಣ ಇರಬಹುದೆಂದು ಅಂದಾಜಿಸಲಾಗಿದೆ. ಟೆಂಡರ್‌ನಲ್ಲಿರುವಂತೆ ಎಲ್ಲೂ ಸಹ ಗ್ರಾವೆಲ್ ಕ್ರಮ ಅನುಸರಿಸದೇ ಹಾಗೇ ಕಾಮಗಾರಿ ಮಾಡಿರುವುದು, ಚರಂಡಿಯಲ್ಲಿ ಪ್ಲಿಂತ್ ಹಾಕದೇ ಕಾಮಗಾರಿ ನಡೆಸಿರುವುದರಿಂದ ಸಾಕಷ್ಟು ಹಣ ಉಳಿಸಲಾಗಿದೆ. ಈ ವಿಚಾರ ಅಧಿಕಾರಿಗಳಿಗೂ ಗೊತ್ತಿದೆ ಎಂಬುದು ಶಿವಕುಮಾರ್ ಅವರ ವಾದ.
ಕಳಪೆ ಎಲ್ಲಿ ಆಗಿದೆ, ಯಾವ ಹಂತದಲ್ಲಿ ಆಗಿದೆ ದಾಖಲೆ ನೀಡುತ್ತೇ, ಅಗತ್ಯವಿದ್ದರೆ ಸ್ಥಳಕ್ಕೆ ಬನ್ನಿ ಎಂದು ತಾವು ಪ್ರತಿ ಹಂತದಲ್ಲಿ ಸಲ್ಲಿಸಿದ ದೂರನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದರೂ ಸಹ ಅಧಿಕಾರಿಗಳು ಸ್ಥಳಕ್ಕಾಗಮಿಸಲಿಲ್ಲ. ದೂರಿಗೆ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಇದೀಗ ಮುಖ್ಯಮಂತ್ರಿ ಕಚೇರಿಯಿಂದಲೇ ತನಿಖೆಗೆ ಆದೇಶವಾಗಿದ್ದು, ಅಧಿಕಾರಿಗಳ ಬಣ್ಣ ಬಯಲಾಗಲಿದೆ ಎಂದು ಅವರು ತಿಳಿಸಿದ್ದಾರೆ.
 ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಕರ್ನಾಟಕ ನಿರಾವರಿ ನಿಗಮದಿಂದ ಹರಿಜನ ಗಿರಿಜನ ಯೋಜನೆಯಡಿ  ಭದ್ರಾವತಿ ತಾಲೂಕಿನಲ್ಲಿ ನಡೆದಿರುವ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ನಿಯಮಗಳನ್ವಯ ಕ್ರಮ ಕೈಗೊಳ್ಳುವಂತೆ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಅವರಿಗೆ ಸೂಚಿಸಿದ್ದಾರೆ.



ಮುಖ್ಯಮಂತ್ರಿಗೆ ದೂರು
ಶಿವಕುಮಾರ್ ನೇರವಾಗಿ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವರಿಗೂ ದೂರು ಸಲ್ಲಿಸಿದರು. ಅಂತಿಮವಾಗಿ ಮುಖ್ಯಮಂತ್ರಿ ಸಚಿವಾಲಯವು ಶಿವಮೊಗ್ಗ ಜಿಲ್ಲಾಧಿಕಾರಿಯವರಿಗೆ ಪತ್ರ ಮುಖೇನ ಸೂಚನೆ ನೀಡಿದ್ದು, ತನಿಖೆ ನಡೆಸುವಂತೆ ಆದೇಶಿಸಿದೆ. ಅದರಂತೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು ಏಪ್ರಿಲ್ 30ರಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.