ರು. 100 ಕೋಟಿ ಯೋಜನೆಗೆ ಹಸಿರು ನಿಶಾನೆ
ಶಿವಮೊಗ್ಗ: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಒಂದು ಸುತ್ತಿನಲ್ಲಿ ಅಭಿವೃದ್ಧಿ ಕಂಡಿದ್ದ ಶಿವಮೊಗ್ಗ ನಗರ ಇದೀಗ ಎರಡನೇ ಸುತ್ತಿನಲ್ಲಿ ಅಭಿವೃದ್ಧಿಕಾರ್ಯಕ್ಕೆ ಸಜ್ಜುಗೊಂಡಿದೆ.
ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಲ್ಪಟ್ಟ ಹಿನ್ನೆಲೆಯಲ್ಲಿ ಸರ್ಕಾರ ಮುಂಗಡ ಪತ್ರದಲ್ಲಿ ಘೋಷಿಸಲಾಗಿದ್ದ 100 ಕೋಟಿ ರುಪಾಯಿ ಅನುದಾನದ ಅಡಿಯಲ್ಲಿ ಅಭಿವೃದ್ಧಿಕಾರ್ಯ ನಡೆಯಲಿದ್ದು, ಕ್ರಿಯಾಯೋಜನೆಗೂ ಸಹ ಸರ್ಕಾರ ಅನುಮೋದನೆ ನೀಡಿದೆ.
ರು. 100 ಕೋಟಿ ಅನುದಾನ: ಶಿವಮೊಗ್ಗ ನಗರ ಸಭೆಯನ್ನು ನಗರ ಪಾಲಿಕೆಯನ್ನಾಗಿ ಉನ್ನತೀಕರಿಸಿದ ನಂತರ ಇಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಗಳಿಗಾಗಿ ಸರ್ಕಾರ 100 ಕೋಟಿ ರುಪಾಯಿ ಒದಗಿಸಿತ್ತು. ಅದರ ವಿನಿಯೋಗಕ್ಕೆ ನಗರ ಪಾಲಿಕೆಯಿಂದ ಕ್ರಿಯಾ ಯೋಜನೆಯನ್ನೂ ಸಿದ್ಧಪಡಿಸಲಾಗಿತ್ತು. ಈ ಕ್ರಿಯಾ ಯೋಜನೆಯಲ್ಲಿ ನಗರದ ವಿವಿಧ ಪ್ರಮುಖ ವೃತ್ತಗಳ ಅಭಿವೃದ್ಧಿ ಸಿಗ್ನಲ್ ಲೈಟ್ ಅಳವಡಿಕೆ, ಮುಖ್ಯ ರಸ್ತೆಗಳ ಅಭಿವೃದ್ಧಿ ಚರಂಡಿ ನಿರ್ಮಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿದಂತೆ ಪ್ರಮುಖ ಕಾಮಗಾರಿಗಳನ್ನು ಶಾಸಕ ಪ್ರಸನ್ನಕುಮಾರ್ ಸಲಹೆಯನ್ನಾಧರಿಸಿ ಸಿದ್ಧಪಡಿಸಲಾಗಿತ್ತು. ನಂತರ ವರದಿಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಇದೀಗ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಈ ವಿಷಯವನ್ನು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನಿಲ್ ಕುಮಾರ್ ಅವರು ಶಾಸಕ ಪ್ರಸನ್ನಕುಮಾರ್ ಮತ್ತು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಮಾಲೋಚನೆ ವೇಳೆ ಈ ವಿಷಯ ಪ್ರಕಟಿಸಿದರು.
ರಸ್ತೆ ಅಗಲೀಕರಣ: ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಸನ್ನಕುಮಾರ್, 3ನೇ ಹಂತದ ನಗರೋತ್ಥಾನ ಯೋಜನೆಡಿ 100 ಕೋಟಿ ಅನುದಾನದಲ್ಲಿ ದುರ್ಗಿಗುಡಿ, ಜೈಲ್ ರಸ್ತೆ ಮತ್ತು ಮಿಳಘಟ್ಟ ರಸ್ತೆ ಅಗಲೀಕರಣಕ್ಕೆ ನೀಡಬೇಕಾಗುವ ಪರಿಹಾರದ ಕುರಿತು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯಾನಗರ ಮುಖ್ಯರಸ್ತೆಯ ಅಭಿವೃದ್ಧಿಗೆ ಕೆಲವು ತಾಂತ್ರಿಕ ತೊಡಕುಗಳಿದ್ದು, ಫಲಿತಾಂಶ ಪ್ರಕಟಗೊಂಡ ಬಳಿಕ ಇದನ್ನು ನಿವಾರಿಸಿ ಕಾಮಗಾರಿ ಚುರುಕುಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು.
ಸಭೆಯಲ್ಲಿ ನಗರಪಾಲಿಕೆ ಸದಸ್ಯ ಕಾಶಿ ವಿಶ್ವನಾಥ್ ಸೇರಿದಂತೆ ನಗರಪಾಲಿಕೆ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

