ಶಿವಮೊಗ್ಗ

ಕುಡಿವ ನೀರು: ತುರ್ತು ನಿರ್ವಹಣೆಗೆ 42 ಲಕ್ಷ

Published On :

ಕ.ಪ್ರ.ವಾರ್ತೆ ಟಿ ತ್ಯಾಗರ್ತಿ ಟಿ ಏ. 6
ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದನ್ನು ಮನಗಂಡ ರಾಜ್ಯ ಸರ್ಕಾರ ಸಾಗರ ತಾಲೂಕಿಗೆ 42 ಲಕ್ಷ ಬಿಡುಗಡೆ ಮಾಡಿದ್ದು, ಒಂದು ಗ್ರಾಮ ಪಂಚಾಯಿತಿಗೆ 1 ಲಕ್ಷಕ್ಕೂ ಹೆಚ್ಚಿನ ಹಣ ಬಿಡುಗಡೆಯಾಗಿದೆ. ಈ ಹಣವನ್ನು ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಸದ್ಭಳಕೆ ಮಾಡಿಕೊಳ್ಳಬೇಕೆಂದು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ನೀಡಿದ್ದಾರೆ.
ಸಾಗರ ತಾಲೂಕಿನ ಬರೂರು, ಗೌತಮಪುರ ಮತ್ತು ತ್ಯಾಗರ್ತಿ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಭೇಟಿ ನೀಡಿ ಗ್ರಾಮೀಣ ಪ್ರದೇಶದ ಕುಂದುಕೊರತೆ ಆಲಿಸಿದ ಅವರು, ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡಿದರು.
ಬರಗಾಲದಲ್ಲಿರುವ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಬತ್ತಿ ಹೋಗಿರುವ ಬಾವಿಗಳನ್ನು ಹೂಳು ತೆಗೆಸುವುದು, ಟ್ಯಾಂಕರ್ ಮೂಲಕ ನೀರು ಸರಬರಾಜು, ಅಗತ್ಯವಿದ್ದರೆ ಹೊಸ ಬಾವಿಗಳ ನಿರ್ಮಾಣ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಪೈಪ್ಲೈನ್ ಮುಖಾಂತರ ನೀರು ಸರಬರಾಜು ಮಾಡಲು ಸಾಧ್ಯವಾದರೆ ಈ ಹಣವನ್ನು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಕಿರು ನೀರು ಸರಬರಾಜು ಇರುವ ಗ್ರಾಮಗಳಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಕಳಿಸಿದರೆ ಶೀಘ್ರವಾಗಿ ಮಂಜೂರಾತಿ ನೀಡುವ ಭರವಸೆ ನೀಡಿದರು. ತ್ಯಾಗರ್ತಿ, ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಲು ವಿದ್ಯುತ್ ವೋಲ್ಟೇಜ್ ಸಮಸ್ಯೆಯೇ ಕಾರಣ ಎಂದು ಸ್ಥಳೀಯ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದಾಗ ಕೂಡಲೇ ತ್ಯಾಗರ್ತಿಯಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದರು.
ತ್ಯಾಗರ್ತಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಸಾಜೀ ಮ್ಯಾಥ್ಯು, ತಾಪಂ ಸದಸ್ಯರಾದ ಸರೋಜಾ ಲಿಂಗರಾಜ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಬರೂರು ಗ್ರಾಮ ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷ ಸುರೇಶ್ ಕೊರ್ಲಿಕೊಪ್ಪ, ಜಿಪಂ ಸದಸ್ಯರಾದ ಸುಮಂಗಲಾ ರಾಮಕೃಷ್ಣ, ತಾಪಂ ಸದಸ್ಯ ಪ್ರಕಾಶ್ ಲಾವಿಗೇರಿ, ಬರೂರು  ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಮೆಸ್ಕಾಂ ಅಧಿಕಾರಿ ತರಾಟೆಗೆ: ವಿದ್ಯುತ್ ವೋಲ್ಟೇಜ್ ಸಮಸ್ಯೆ ಬಗ್ಗೆ ಅನಂದಪುರದಿಂದ ತ್ಯಾಗರ್ತಿಗೆ ಪ್ರತ್ಯೇಕ ವಿದ್ಯುತ್ ಲೈನ್ ಸಂಪರ್ಕಕ್ಕೆ ಟೆಂಡರ್ ಕರೆಯುವ ಬಗ್ಗೆ ದೂರವಾಣಿ ಮೂಲಕ ಸಾಗರ ಉಪ ವಿಭಾಗದ ಮೆಸ್ಕಾಂ ಎಇಇಯನ್ನು ಸಂಪರ್ಕಿಸಿದ ಕಾಗೋಡು ತಿಮ್ಮಪ್ಪ, ವಿದ್ಯುತ್ ಲೈನ್ ಸಂಪರ್ಕಕ್ಕೆ ಟೆಂಡರ್ ಕರೆಯುವ ಪ್ರಕ್ರಿಯೆ ವಿಳಂಬವಾಗಲು ಕಾರಣ ಕೇಳಿದರು.
ಅಧಿಕಾರಿಯು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನೆಪ ಹೇಳಿದಾಗ, ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗದಂತೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೂಡಲೇ ಟೆಂಡರ್ ಕರೆದು ಕಾರ್ಯ ನಿರ್ವಹಿಸಿ ಕೋಡ್ ಆಫ್ ಕಂಡೆಕ್ಟ್ ಬಗ್ಗೆ ಕಥೆ ಹೇಳಬೇಡ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.