ಮಹಿಳೆಯರು ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಲಿ
ಕ.ಪ್ರ.ವಾರ್ತೆ ್ಣ ಶಂಕರಘಟ್ಟ ್ಣ ಮೇ 7
ಮಹಿಳೆಯರು ರಾಜಕೀಯ ರಂಗವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಬದುಕಿನ ಎಲ್ಲ ಸ್ತರಗಳಲ್ಲಿ ಸಮಗ್ರ ಬದಲಾವಣೆಯನ್ನು ನೆಲೆಯೂರಿಸಲು ರಾಜಕೀಯ ಪಲ್ಲಟಗಳು ಸಹಾಯಕವಾಗುತ್ತವೆ ಎಂದು ಚಿಂತಕ ಪ್ರೊ. ಕೆ. ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಪ್ರಸಾರಾಂಗ, ಮಹಿಳಾ ಸಂಪನ್ಮೂಲ ಕೇಂದ್ರ ಹಾಗೂ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಎರಡು ದಿನಗಳ ಲೇಖ-ಲೋಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸವಾಲು ನಿಭಾಯಿಸಿ: ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶ ಸಿಕ್ಕರೆ ಗೆಲವು ಖಂಡಿತ ಎಂಬ ಭರವಸೆ ಮೂಡಬೇಕಿದೆ. ಮತದಾರರಾಗಿ ಬಹುಮುಖ್ಯ ಪಾತ್ರವಹಿಸಬಹುದಾದ ಸ್ತ್ರೀಯರು ನಾಯಕತ್ವದ ಸ್ಥಾನಕ್ಕೂ ಸಮರ್ಥರೂ ಎಂಬುದನ್ನು ಸಮಾಜಕ್ಕೆ ಮನಗಾಣಿಸುವ ಅಗತ್ಯವಿದೆ. ಈ ಕಾರಣಕ್ಕಾಗಿಯೇ ರಾಜಕೀಯ ಮಹತ್ವಾಕಾಂಕ್ಷೆಗಳೊಂದಿಗೆ ಮಹಿಳಾ ವಲಯ ಬದಲಾವಣೆಯನ್ನು ನೆಲೆಗೊಳಿಸುವ ಸವಾಲನ್ನು ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿಗಳಿಗೆ ರಾಜಕೀಯದ ಗೊಡವೆ ಏಕೆ ಎಂಬ ಪ್ರಶ್ನೆಗಳೇಳುತ್ತಿವೆ. ಬರಹಗಳ ಹಿಂದೆ ಸಾಮಾಜಿಕ ಬದಲಾವಣೆಯ ತುಡಿತವಿರುತ್ತದೆ. ಆ ಸಕಾರಾತ್ಮಕ ಬದಲಾವಣೆ ಸಾಧ್ಯವಾಗುವುದು ರಾಜಕೀಯ ವ್ಯವಸ್ಥೆಯಿಂದಲೇ ಸಾಧ್ಯ. ಸಮಾಜಪರ ರಾಜಕೀಯ ವ್ಯವಸ್ಥೆಯ ಕನಸಿನೊಂದಿಗೆ ರಾಜಕೀಯ ಧೋರಣೆಗಳನ್ನು ವ್ಯಕ್ತಪಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಅವರು ಹೇಳಿದರು.
ಸಾವಿತ್ರಿಬಾಯಿ ಫುಲೆಯ ಬದುಕು ಹೋರಾಟವನ್ನು ಕೇಂದ್ರೀಕರಿಸಿಕೊಂಡ ವಿಮೋಚನೆಯ ಕನಸುಗಳು ಕೃತಿಯನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಾವಿತ್ರಿಬಾಯಿ ಫುಲೆಯವರ ಸ್ಮರಣಾರ್ಥ ಪ್ರತ್ಯೇಕ ದಿನಾಚರಣೆಯನ್ನು ಆಚರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ, ಮಹಿಳೆಯರ ಕುರಿತಾದ ತಾರತಮ್ಯದ ದೃಷ್ಟಿಕೋನಗಳನ್ನು ಹತ್ತಿಕ್ಕಿ ಮನಪರಿವರ್ತನೆಯ ಕಾರ್ಯ ಆಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಎ.ಬಾರಿ ಮಾತನಾಡಿದರು.
ಅನಿತಾ ಕುಮಾರಿ ಪ್ರಾರ್ಥಿಸಿದರು, ಪ್ರೊ. ಜಿ. ಪ್ರಶಾಂತ ನಾಯಕ ಸ್ವಾಗತಿಸಿದರು. ಪ್ರೊ. ರೇಚಲ್ ಬಾರಿ ವಂದಿಸಿದರು. ಎಚ್.ಟಿ. ನವೀನ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

