ಶಿವಮೊಗ್ಗ

ಮರಳು ಸಮಸ್ಯೆ ಶೀಘ್ರ ಪರಿಹರಿಸಲು ಆಗ್ರಹ

Published On :

ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 9
ಮರಳಿನ ಸಮಸ್ಯೆ ಪರಿಹಾರಕ್ಕೆ ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಶುಕ್ರವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿತು.
ಸದ್ಯ ಮರಳು ಸಾಗಣೆಗೆ ಸಮರ್ಪಕ ಪರ್ಮಿಟ್ ನೀಡಲಾಗುತ್ತಿಲ್ಲ. ಇದರಿಂದ ಮರಳಿನ ಲಭ್ಯತೆ ಇದ್ದರೂ ಕೃತಕ ಅಭಾವ ಸೃಷ್ಟಿಯಾಗುತ್ತಿದೆ. ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸರ್ಕಾರಿ ಕಾಮಗಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಸರ್ಕಾರದ ನಿಯಮದಂತೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಆದರೆ ಮರಳಿನ ಅಭಾವದ ಹಿನ್ನೆಲೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗುತ್ತಿಗೆದಾರರು ಆರ್ಥಿಕ ನಷ್ಟದ ಜೊತೆಗೆ ಇಲಾಖೆಯ ಶಿಸ್ತುಕ್ರಮ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಗುತ್ತಿಗೆದಾರರು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಿಡಿಯುವ ಗುತ್ತಿಗೆದಾರರಿಗೆ ಪ್ರತ್ಯೇಕ ಮರಳು ಕ್ವಾರೆ ನಿಗದಿ ಮಾಡಬೇಕು. ಇದರಿಂದ ಗುತ್ತಿಗೆದಾರರಿಗೆ ಮರಳಿನ ಅಭಾವ ತಪ್ಪುವುದರ ಜೊತೆಗೆ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲವು ಮರಳು ಸಾಗಣೆದಾರರು ತಮ್ಮದೆ ಆದ ಕೂಟ ರಚಿಸಿ ಅವರಿಗೆ ಇಷ್ಟ ಬಂದ ರೀತಿಯಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಇದರಿಂದ ಗುತ್ತಿಗೆದಾರರಿಗೆ ಸಾಕಷ್ಟು ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಗುತ್ತಿಗೆದಾರರಿಗೆ ಪ್ರತ್ಯೇಕ ಮರಳು ಕ್ವಾರಿಯನ್ನು ನಿಗದಿ ಮಾಡಬೇಕು ಎಂದು ಅಸೋಸಿಯೇಷನ್ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿತು.
ರಂಗನಾಥಸ್ವಾಮಿ ರಥೋತ್ಸವ 14ಕ್ಕೆ
ಕ.ಪ್ರ.ವಾರ್ತೆ , ಸೊರಬ , ಮೇ 9
ರಂಗಪ್ಪನ ತೇರು ಎಂದೆ ತಾಲೂಕಿನಲ್ಲಿ ಕರೆಯುವ ಪಟ್ಟಣದ ರಂಗನಾಥ ಸ್ವಾಮಿಯ ರಥೋತ್ಸವ ಇದೇ ವೈಶಾಖ ಹುಣ್ಣಿಮೆ(ಮೇ 14) ರಂದು ನಡೆಯಲಿದ್ದು, ರಂಗಪ್ಪನ ತೇರಿನ ದಿನ ಅಗತ್ಯ ಬೇಕಾದ ತೇರು ದುಸ್ಥಿತಿಯಲ್ಲಿರುವ ಕಾರಣ ತ್ವರಿತ ದುರಸ್ತಿ ಕಾರ್ಯ ನಡೆಯುತ್ತಿದೆ.
ಕಳೆದ ವರ್ಷ ರಥೋತ್ಸವಕ್ಕೆ ಕೆಲವೇ ದಿನ ಇದ್ದಾಗ ಪರೀಕ್ಷೆ ಮಾಡಿದ ಎಂಜಿನಿಯರ್ ರಥ ಎಳೆಯುವ ಸ್ಥಿತಿಯಲ್ಲಿಲ್ಲ ಎಂದು ವರದಿ ನೀಡಿದ್ದರು. ಪ್ರಸಕ್ತ ಹಳೆಯ ರಥ ರಿಪೇರಿಯಾಗುತ್ತಿದೆ. ಇದಕ್ಕಾಗಿ 1 ಲಕ್ಷ ಮಂಜೂರಿಯಾಗಿದೆ. ಆದರೆ, ರಥ ಎಳೆಯಲು ರಸ್ತೆ ಸರಿಯಿಲ್ಲ.
ತೇರೆಳೆಯುವುದಿಲ್ಲ: ಕಳೆದ ಬಾರಿ ಶಾಸಕ ಮಧು ಬಂಗಾರಪ್ಪ ತಾತ್ಕಾಲಿಕ ರಸ್ತೆ ದುರಸ್ತಿ ಮಾಡಿಸುವ ಮೂಲಕ ರಥೋತ್ಸವಕ್ಕೆ ಸಹಕರಿಸಿದ್ದರು. ನಂತರ ರಸ್ತೆ ಉತ್ತಮವಾಗಿದ್ದರೂ ರಥ ಸುಸ್ಥಿತಿಯಲ್ಲಿಲ್ಲ ಎಂಬ ಕಾರಣಕ್ಕೆ ರಥ ಎಳೆಯುವ ಶಾಸ್ತ್ರವನ್ನಷ್ಟೇ ಮಾಡಲಾಯಿತು. ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನ. ರಸ್ತೆ ಅಗಲೀಕರಣಕ್ಕೆ ನಿವಾಸಿಗಳ ಸ್ವಯಂ ತೆರವು ಕಾರ್ಯ ಭರದಿಂದ ಸಾಗಿದೆ. ಹಾಗಾಗಿ ರಸ್ತೆ ರಿಪೇರಿ ಸಾಧ್ಯವಿಲ್ಲ. ತೇರು ಎಳೆಯುವಂತಾದರೂ ಈ ಬಾರಿ ತೇರೆಳೆಯುವಂತಿಲ್ಲ.
'ಸಹಕಾರಿ ಸಂಘದಲ್ಲಿ ಮಂಜುನಾಥ್ ರಾಜಕೀಯ ಬೆರೆಸದಿರಲಿ'
ಹೊಸನಗರ:  ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕಾರ ಹಿಡಿಯಬೇಕು ಎನ್ನುವ ಹಪಹಪಿಯಲ್ಲಿರುವ ಬಿಜೆಪಿಯ ಆಸೆಯನ್ನು ಈಡೇರಿಸುವ ಯತ್ನದಲ್ಲಿರುವ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಜೇನು ಕೃಷಿ ಮತ್ತು ಕೈಗಾರಿಕಾ ಸಹಕಾರ ಸಂಘವೂ ಸೇರಿದಂತೆ ಜಿಲ್ಲೆಯ ಕೆಲ ಸಹಕಾರಿ ಸಂಘಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇದು ಅವರ ಬಾಲಿಶ ಹೇಳಿಕೆ ಎಂದು ಜೇನುಕೃಷಿ ಮತ್ತು ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ವಾಟಗೋಡು ಸುರೇಶ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯನೂರು ಮಂಜುನಾಥ ಸಹಕಾರ ಸಂಘದಲ್ಲಿ ರಾಜಕೀಯ ಸೇರಿಸುವ ಪ್ರಯತ್ನ ಕೈ ಬಿಡಬೇಕು. ಸಹಕಾರಿ ಸಂಘ ಸಂಸ್ಥೆಗಳಲ್ಲಿ ರಾಜಕೀಯ ಬೆರೆಸಿ ಚೆಂದ ನೋಡುವ ಹುಡುಗಾಟ ಮಾಡಬಾರದು. ಈ ಕ್ರಮ ಕೈಬಿಡದಿದ್ದಲ್ಲಿ ತಮ್ಮ ಸಣ್ಣತನ ಜಗದ್ಜಾಹೀರಾಗಲಿದೆ ಎಂದಿದ್ದಾರೆ.
ಈಗಾಗಲೇ ಡಿಸಿಸಿ ಬ್ಯಾಂಕ್ ಸದಸ್ಯತ್ವ ಹೊಂದಿರುವ ಅನೇಕ ಸಹಕಾರ ಸಂಘಗಳು ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಇವು ಯಾವ ಪಕ್ಷದ ಒಲವು ಹೊಂದಿರದೆ ಸ್ವತಂತ್ರ್ಯವಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಅರಿತ ಅವರು, ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮುಳುವಾಗಬಹುದಾದ ಇಂತಹ ಸಂಘಗಳ ಸದಸ್ಯತ್ವ ರದ್ದುಪಡಿಸಲು ಮುಂದಾಗಿದ್ದಾರೆ. ಸಹಕಾರ ಸಿದ್ಧಾಂತದ ಬಗ್ಗೆ ಗೌರವವಿಲ್ಲದ ರೀತಿ ಮಾತನಾಡಿರುವುದು ಸರಿ ಅಲ್ಲ.  ಸಹಕಾರ ಸಂಘ ಎನ್ನುವ ಜೇನುಗೂಡಿಗೆ ಕೈ ಹಾಕುವ ಕಾರ್ಯ ಆಯನೂರು ಮಂಜುನಾಥರಿಗೆ ತಕ್ಕದ್ದಲ್ಲ ಎಂದು ಎಚ್ಚರಿಸಿದ್ದಾರೆ.
ದೇವಾಲಯ ಹರಟುವ ಸ್ಥಳವಾಗದಿರಲಿ: ಶ್ರೀಗಳು
ಶಿವಮೊಗ್ಗ: ದೇವಾಲಯಗಳು ಮಾನಸಿಕ ಸ್ವಾಸ್ಥ್ಯಕ್ಕೆ ಇರುವ ಕೇಂದ್ರಗಳು. ನೊಂದ ಮನಸ್ಸುಗಳಿಗೆ ಇಲ್ಲಿ ಸಾಂತ್ವನ ಸಿಗಲಿದೆ ಎಂದು ಯಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಜೆಪಿಎನ್ ರಸ್ತೆಯ ಶ್ರೀ ಕಾಮಾಕ್ಷಿ ಸರ್ವ ಸಿದ್ಧಿ ವಿನಾಯಕ ಸ್ವಾಮಿ ದೇವಾಲಯದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಕಲಶಾಭಿಷೇಕ ನೆರವೇರಿಸಿ ಮಾತನಾಡಿದರು.
ದೇವಾಲಯಗಳು ಧ್ಯಾನ ಕೇಂದ್ರಗಳಾಗಬೇಕೇ ಹೊರತು ಹರಟುವ ಸ್ಥಳವಾಗಬಾರದೆಂದು ಸಲಹೆ ನೀಡಿದ ಅವರು, ಧಾರ್ಮಿಕ ಚಟುವಟಿಕೆಗಳ ಮುಖಾಂತರ ಸಮಾಜದಲ್ಲಿ ಎಲ್ಲಾ ವರ್ಗದಮೊಂದಿಗೆ ಅನ್ಯಾನ್ಯತೆ ಏರ್ಪಡಲಿದೆ ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಅತಂತ್ರ ಬದುಕಿಗೆ ಆಧಾರ ಪರಮಾತ್ಮನ ಮೇಲಿನ ಅದಮ್ಯ ನಂಬಿಕೆ. ಇಂತಹ ನಂಬಿಕೆಯ ಕೇಂದ್ರಗಳು ದೇವಾಲಯ ಎಂದರು. ಕೆ.ಎಚ್.ಶ್ರೀನಿವಾಸ್, ಎಸ್.ಎಲ್.ಕೃಷ್ಣಮೂರ್ತಿ, ವಿ.ರಾಜು, ಉಮಾಪತಿ, ಹೊನ್ನಪ್ಪ ಇದ್ದರು.
ಅಕ್ರಮ ಸಹಕಾರ ಸಂಘ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 9
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯ ಉದ್ದೇಶದಿಂದ ಹಲವು ಅಕ್ರಮ ಸಹಕಾರ ಸಂಘಗಳು ಉದ್ಭವವಾಗಿವೆ. ಇವುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಹಕಾರಿ ಚುನಾವಣಾ ಆಯೋಗದ ಆಯುಕ್ತ ಎನ್.ಸಿ. ಮುನಿಯಪ್ಪ ಅವರಿಗೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ನೇತೃತ್ವದ ಬಿಜೆಪಿ ನಿಯೋಗ ಶುಕ್ರವಾರ ಮನವಿ ಅರ್ಪಿಸಿತು.
ಕೆಲವು ಸಹಕಾರ ಸಂಘಗಳೇ ಕಳೆದು ಹೋಗಿವೆ, ಚುನಾವಣೆಯ ಉದ್ದೇಶಕ್ಕಾಗಿ ಕೆಲವು ಹುಟ್ಟಿಕೊಂಡಿವೆ ಎಂದು ನಿಯೋಗದ ಸದಸ್ಯರು ವಿವರಿಸಿದರು.
ಅಕ್ರಮ ಸಹಕಾರ ಸಂಘಗಳ ಬಗ್ಗೆ ವಿವರ ನೀಡಿ ಎಂದರೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಸುಳ್ಳು ವರದಿ ನೀಡಿ, 3 ವರ್ಷ, 7 ವರ್ಷದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಸಹಕಾರ ಸಂಘಗಳೇ ಅಲ್ಲಿ ಇಲ್ಲ. ಇದ್ದರೆ ಬಂದು ತೋರಿಸಲಿ ಎಂದು ಸವಾಲು ಹಾಕಿದರು. ಸಹಕಾರ ಕ್ಷೇತ್ರವೇ ಇಂದು ವಿಶ್ವಾಸ ಕಳೆದುಕೊಳ್ಳುತ್ತಿದೆ, ಕುಲಗೆಟ್ಟು ಹೋಗಿವೆ. ಅಲ್ಲಿನ ಅಧಿಕಾರಿಗಳು ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ತಪ್ಪು ಉತ್ತರ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಯವರನ್ನೇ ದಾರಿ ತಪ್ಪಿಸುತ್ತಿದ್ದಾರೆ ಇಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಗತ್ಯ ಬಿದ್ದರೆ ಚುನಾವಣೆ ಮುಂದಕ್ಕೆ ಹಾಕಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡರಾದ ಆರಗ ಜ್ಞಾನೇಂದ್ರ, ಭಾನುಪ್ರಕಾಶ್ ಮುಂತಾದವರು ಸಹ ಸಹಮತ ವ್ಯಕ್ತಪಡಿಸಿ ತಪ್ಪು ಮಾಹಿತಿ ನೀಡಿದ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತ ವಾಸುದೇವ್ ಅವರು ರಾಜ್ಯ ಸಹಕಾರಿ ಚುನಾವಣಾ ಆಯೋಗ ರಚನೆಯಾಗಿ ಒಂದು ವರ್ಷವಾಗಿದೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಆಯೋಗ ಸಿದ್ಧವಿದೆ ಇದಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲಾಧಿಕಾರಿಯವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅಕ್ರಮ ಸಹಕಾರ ಸಂಘಗಳ ಬಗ್ಗೆ ತನಿಖೆ ನಡೆಸುವುದು ಆಯೋಗದ ಕೆಲಸವಲ್ಲ,  ನಿಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸುವೆ. ಸಂಪೂರ್ಣವಾಗಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.
ನಕಲಿ ಸಹಕಾರಿ ಸಂಘ ವಿರುದ್ಧ ಕ್ರಮ ಜರುಗಿಸಿ
ಶಿಕಾರಿಪುರ: ತಾಲೂಕಿನ ಸಹಕಾರಿ ಸಂಘಗಳ ವಿರುದ್ಧ ಕೆಲವು ರಾಜಕೀಯಪ್ರೇರಿತ ಸಹಕಾರಿಗಳು ಮಾಡಿರುವ ಆರೋಪ, ಸುಳ್ಳಾಗಿದ್ದು, ನಕಲಿ ಸಂಘಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಇಲ್ಲಿನ ವ್ಯವಸಾಯೋತ್ವನ್ನ ಸಹಕಾರಿ ಸಂಘದ ನಿರ್ದೇಶಕ, ಪುರಸಭಾ ಸದಸ್ಯ ಪರಶುರಾಮ ಚಾರಗಲ್ಲಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಯ ದೃಷ್ಟಿಕೋನದಿಂದ ಪ್ರಭಾವಿ ಸಹಕಾರಿಗಳು ಜೆಡಿಎಸ್, ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷ ಬಳಸಿಕೊಂಡು ಸುಳ್ಳು ಮಾಹಿತಿ ನೀಡಿ ಪ್ರಚೋದನೆ ಮಾಡುತ್ತಿವೆ. ತಾಲೂಕಿನ ಸಹಕಾರಿ ಸಂಘಗಳು ಕಾನೂನಿನ ಅಡಿಯಲ್ಲಿ ಉಪನಿಬಂಧಕರ ಸಮಕ್ಷಮದಲ್ಲಿ ನೋಂದಾವಣಿಗೊಂಡಿದೆ ಎಂದ ಅವರು, ಸಹಕಾರಿ ಸಂಘ 87ರ ಕಲಂ ಅಡಿಯಲ್ಲಿ ಎಲ್ಲಾ ಸಹಕಾರಿ ಸಂಘಗಳು ಲೆಕ್ಕ ಪರಿಶೋಧನೆಗೊಳಪಟ್ಟು ಪ್ರತ್ಯೇಕ ಬೈಲಾ ತಿದ್ದುಪಡಿ ಮಾನ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪುರಸಭೆ ಸದಸ್ಯ ಕೆ.ಜಿ. ವಸಂತಗೌಡ ಮಾತನಾಡಿದರು. ಅಲ್ಲಮಪ್ರಭು ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗಿರೀಶ್ ಧಾರವಾಡದ ಮಾತನಾಡಿದರು. ಪುರಸಭಾ ಸದಸ್ಯ ಅಂಗಡಿ ಜಗದೀಶ್, ಮುಖಂಡ ಸುಬಾಷ್‌ಚಂದ್ರ ಸ್ಥಾನಿಕ್, ರಾಮಕೃಷ್ಣಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.