ಅಡಕೆ ರೋಗ ನಿವಾರಣೆಗೆ ದಿವ್ಯ ಸಂಕಲ್ಪ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಮೇ 10
ರೈತರು- ವಿಜ್ಞಾನಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿಕೊಂಡು ಅಡಕೆಗೆ ಅಂಟಿರುವ ರೋಗ ಸಂಕಟವನ್ನು ದೂರ ಮಾಡಲು ರೈತ ಸಮುದಾಯ ಹಾಗೂ ವಿಜ್ಞಾನಿಗಳು- ಅಧಿಕಾರಿಗಳು ಸಂಕಲ್ಪ ತೊಟ್ಟಿದ್ದಾರೆ.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ರಾಷ್ಟ್ರೀಯ ತೋಟಗಾರಿಕಾ ಮಂಡಳಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಾಂಬಾರು ಮಂಡಳಿ, ಮ್ಯಾಮ್ಕೋಸ್ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.
ವಿಚಾರ ಸಂಕಿರಣದ ಮೊದಲ ದಿನ ವಿಜ್ಞಾನಿಗಳು ಕಲೆತು ಅಡಕೆ ಕ್ಷೇತ್ರದಲ್ಲಿ ಈವರೆಗೆ ಆಗಿರುವ ಸಂಶೋಧನೆ ಬಗ್ಗೆ ಮತ್ತು ಮುಂದೆ ಆಗಬೇಕಾದ ಸಂಶೋಧನೆ ಕುರಿತು ಚರ್ಚೆ ನಡೆಸಿದ್ದರು. 2ನೇ ದಿನ ಕುವೆಂಪು ರಂಗಮಂದಿರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ರೈತರ ಮುಂದೆ ತಮ್ಮ ಮುಂದಿನ ಕಾರ್ಯಯೋಜನೆ ಪ್ರಸ್ತುತಪಡಿಸಿದರು.
ಆತಂಕ: ಸಭೆಗೆ ಚಾಲನೆ ನೀಡಿ ಮಾತನಾಡಿದ ಮ್ಯಾಮ್ಕೋಸ್ ಉಪಾಧ್ಯಕ್ಷ ನರಸಿಂಹ ನಾಯಕ್ ಅವರು, ಅಡಕೆಗೆ ಈಗಿರುವ ಧಾರಣೆಯಿಂದ ಬೆಳೆಗಾರರಿಗೆ ಸಂತೋಷವಿದೆ. ಆದರೆ, ಅಡಕೆ ಕೃಷಿಯಲ್ಲಿ ತೊಂದರೆ ಇದೆ. ಹಾಗೆಯೇ ಅಡಕೆ ಕುರಿತಂತೆ ಸಾಕಷ್ಟು ಸಂಶೋಧನೆ ನಡೆದರೂ ವಿಜ್ಞಾನಿಗಳು ಮತ್ತು ರೈತರ ನಡುವೆ ಅಂತರ ಸಾಕಷ್ಟಿದೆ ಎಂದರು.
ಶಿವಮೊಗ್ಗದಿಂದ 5-6 ಕಿಲೋ ಮೀಟರ್ ದೂರ ಮತ್ತೂರು ಹೊಸಹಳ್ಳಿಯಲ್ಲಿ ತೋಟಗಳು ಪ್ರತಿ ಎಕರೆಗೆ 12 ಕ್ವಿಂಟಾಲ್ ಅಡಕೆ ನೀಡುತ್ತವೆ. ಆದರೆ, ಇಂದು ಮರಗಳು ಸಾಯುತ್ತಿವೆ. ಇದಕ್ಕೆ ಯಾರು ಪರಿಹಾರ ಯಾರು ಹೇಳಬೇಕು ಎಂದು ಪ್ರಶ್ನಿಸಿದರು.
ಅಡಕೆಗೆ ಹಿಡಿಮುಂಡಿಗೆ ರೋಗ, ಹಳದಿ ರೋಗ ಹೀಗೆ 36 ಬಗೆಯ ರೋಗಗಳಿವೆ. ಇದು ಹೀಗೆ ಮುಂದುವರಿದರೆ ಅಡಕೆ ತೋಟವೇ ಇರುವುದಿಲ್ಲ. ಹೀಗಾಗಿ ವಿಜ್ಞಾನಿಗಳು, ರೈತರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಂಗಳಿಗೋ, 2 ತಿಂಗಳಿಗೋ ಸೇರಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಅಂತರ ಇರುವುದು ಹೌದು: ನಾವು ಮಾಡಿರುವ ಕೆಲಸ ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದು ನೂರಕ್ಕೆ ನೂರು ಸತ್ಯ, ಇದರಲ್ಲಿ ಎರಡು ಮಾತಿಲ್ಲ ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾನಿರ್ದೇಶಕ ಡಾ. ಕೃಷ್ಣಕುಮಾರ್ ಸ್ಪಷ್ಟಪಡಿಸಿದರು.
ಕೃಷಿ-ತೋಟಗಾರಿಕೆ ಇಲಾಖೆಯ ವಿಸ್ತರಣಾಧಿಕಾರಿಗಳು ವಿಜ್ಞಾನಿಗಳ ಕಂಡುಹಿಡಿದ ಪರಿಹಾರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು ಎಂದ ಅವರು, ವಿಜ್ಞಾನಿಗಳು ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬುದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಸಂಶೋಧಕರ ಹುದ್ದೆಗಳಿಗೆ ಅರ್ಜಿ ಹಾಕಿದರೆ ಜನರೇ ಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿ ರೈತ ತಾನು ಮಾಡಿದ ಒಳ್ಳೆಯ ಕೆಲಸವನ್ನು ನೂರಾರು ರೈತರಿಗೆ ಸಮರ್ಪಕವಾಗಿ ತಿಳಿಸಿಕೊಟ್ಟರೆ ಸಾಕಷ್ಟು ಒಳಿತಾಗುತ್ತದೆ. ಮಲೆನಾಡು ಪ್ರದೇಶ- ಘಟ್ಟ ಪ್ರದೇಶದಲ್ಲಿ ಭೂಮಿ ಫಲವತ್ತತೆ ಸಾಕಷ್ಟು ಕಡಿಮೆಯಾಗಿದೆ. ಇದೂ ಕೂಡ ಅಡಕೆ ಮರಗಳಿಗೆ ರೋಗ ಬರಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು.
ನಂತರ ರೈತರೊಂದಿಗೆ ವಿಜ್ಞಾನಿಗಳು ಸಂವಾದ ನಡೆಸಿ ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

