ನೀರು ಪೂರೈಕೆಗಾಗಿ 42 ಲಕ್ಷ ಬಿಡುಗಡೆ
ಕ.ಪ್ರ.ವಾರ್ತೆ, ಸಾಗರ, ಮೇ 10
ತಾಲೂಕಿನ ಜನರಿಗೆ ಸಮರ್ಪಕ ಕುಡಿವ ನೀರು ಪೂರೈಕೆಗಾಗಿ ರು. 42 ಲಕ್ಷ ಬಿಡುಗಡೆಯಾಗಿದ್ದು, ಅದನ್ನು ತುರ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ ತಕ್ಷಣದಿಂದಲೇ ಜಾರಿಯಾಗುವಂತೆ ಉಪಯೋಗಿಸಿಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೂಚನೆ ನೀಡಿದರು.
ಇಲ್ಲಿನ ತಾಪಂ ಸುವರ್ಣಸೌಧ ಸಭಾಂಗಣದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾವಿ ಆಳ ಮಾಡುವುದು, ಬೋರ್ವೆಲ್ ಕೊರೆಯುವುದು ಹಾಗೂ ಅಗತ್ಯ ಇರುವ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸಮರೋಪಾದಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಆದೇಶ ನೀಡಿದರು.
ಅನುಭವ ಕಡಿಮೆ: ಚುನಾಯಿತ ಪ್ರತಿನಿಧಿಗಳಿಗೆ ಅನುಭವ ಕಡಮೆ ಇದ್ದು, ನಾಯಕತ್ವ ಹಾಗೂ ಇಚ್ಚಾಶಕ್ತಿಯ ಕೊರತೆ ಇರುತ್ತದೆ. ಅಧಿಕಾರಿಗಳು ವಿದ್ಯಾವಂತರಿದ್ದು, ಆಡಳಿತಾತ್ಮಕ ಸಂಸ್ಕಾರ ಅವರಿಗೆ ಕೊಡುವ ಅಗತ್ಯವಿದೆ. ಅಧಿಕಾರಿಗಳು ನಿಮ್ಮಿಂದ ತಪ್ಪು ಕೆಲಸ ಮಾಡಿಸುವ ಪ್ರಯತ್ನ ಮಾಡಿದರೆ ಅದನ್ನು ಪ್ರತಿರೋಧಿಸುವ ಗುಣ ನೀವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಹೆಚ್ಚುವರಿಯಾಗಿ 500 ಮನೆ ನೀಡಿದ್ದು, ಸಾಗರಕ್ಕೆ 300 ಹಾಗೂ ಹೊಸನಗರ ಭಾಗಕ್ಕೆ 200 ಮನೆ ವಿತರಣೆ ಮಾಡಲಾಗುವುದು. ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿ, ಅವರಿಗೆ ಮನೆ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಕೆಲವು ಪಂಚಾಯ್ತಿಗಳಲ್ಲಿ ಮನೆ ಬಿಕರಿ ಕೆಲಸ ನಡೆಯುತ್ತಿದ್ದು, ಇಂತಹದ್ದನ್ನು ಸಹಿಸುವುದಿಲ್ಲ. ಇಂತಹ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಫಲಾನುಭವಿ ಆಯ್ಕೆ: ತಾಲೂಕಿನ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ನಮ್ಮ ಮನೆ ನಮ್ಮ ತಟ ಯೋಜನೆಯಡಿ 126 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 8 ವರ್ಷದ ಹಿಂದೆ ಅನುಷ್ಠಾನಕ್ಕೆ ಬಂದಿರುವ ಯೋಜನೆ ಈತನಕ ಯಶಸ್ವಿಗೊಳಿಸಬೇಕು ಎಂಬ ಪ್ರಜ್ಞೆ ಅಧಿಕಾರಿ ವರ್ಗದಲ್ಲಿ ಇಲ್ಲದೆ ಇರುವುದು ದುರದೃಷ್ಟಕರ ಸಂಗತಿ ಎಂದರು.
94 ಸಿ ಅಡಿಯಲ್ಲಿ ಅರ್ಹರಿಗೆ ನಿವೇಶನ ನೀಡಲು ಅವಕಾಶವಿದ್ದು, ಅವರನ್ನು ಗುರುತಿಸುವ ಕೆಲಸ ಮಾಡಿ ಉತ್ತಮ ಆಡಳಿತ ನೀಡಿದಾಗ ಮಾತ್ರ ಜನರಿಂದ ಶಹಬ್ಬಾಸ್ ಗಿರಿ ಪಡೆಯಲು ಸಾಧ್ಯ ಎಂದು ಹೇಳಿದರು.
ತಾಪಂ ಅಧ್ಯಕ್ಷ ಹರೀಶ್ ಗಂಟೆ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯೆ ಜ್ಯೋತಿ ಮುರಳಿಧರ್, ಜಿಪಂ ನೋಡೆಲ್ ಅಧಿಕಾರಿ ಗೋಪಾಲ್, ಕಾರ್ಯನಿರ್ವಹಣಾಧಿಕಾರಿ ಡಾ. ಕಲ್ಲಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

