ಆಸ್ತಿ ತೆರಿಗೆ, ನಳ ಕಂದಾಯಕ್ಕೆ ಆದ್ಯತೆ
ಕ.ಪ್ರ.ವಾರ್ತೆ ್ಣ ಸಾಗರ ್ಣ ಮೇ 12
ಜನಸ್ನೇಹಿ ಆಡಳಿತ ನಮ್ಮ ಗುರಿಯಾಗಿದ್ದು, ರಸ್ತೆ, ಚರಂಡಿ ನಿರ್ಮಾಣ, ಕೆರೆ ಅಭಿವೃದ್ಧಿ, ಕುಡಿಯುವ ನೀರು, ಬಡತನ ನಿರ್ಮೂಲನೆ, ಉದ್ಯಾನವನಗಳ ನಿರ್ಮಾಣ, ಸ್ವಯಂ ಉದ್ಯೋಗ ಸೃಷ್ಟಿ, ಸಾಂಸ್ಕೃತಿಕ, ಕ್ರೀಡಾ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವುದು ನಮ್ಮ ಧ್ಯೇಯ ಎಂದು ನಗರಸಭೆ ಅಧ್ಯಕ್ಷೆ ಎನ್. ಲಲಿತಮ್ಮ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ 2014- 15ನೇ ಸಾಲಿನ ಆಯವ್ಯಯ ತಯಾರಿಸುವ ಕುರಿತು ಕರೆಯಲಾಗಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಆಸ್ತಿ ತೆರಿಗೆ, ನಳ ಕಂದಾಯ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಾರ್ವಜನಿಕರು ನೀಡುವ ಸಲಹೆಗಳನ್ನು ಆಧರಿಸಿ ಜನಪರವಾದ ಬಜೆಟ್ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಹಾಲಿ ನಗರಸಭೆ ನಷ್ಟದಲ್ಲಿದೆ. ಅದನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಸೂಕ್ತ ನಿಯಮಾವಳಿ ರೂಪಿಸಿ: ಪರಿಸರ ಪ್ರೇಮಿ ಅಖಿಲೇಶ್ ಚಿಪ್ಪಳಿ ಮಾತನಾಡಿ, ನೀರಿನ ಅಪವ್ಯಯ ತಪ್ಪಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು. ಜೊತೆಗೆ ಜಾಗತಿಕ ತಾಪಮಾನ ತಪ್ಪಿಸಲು ಸೋಲಾರ್ ಬಲ್ಬ್ಗಳನ್ನು ಅಳವಡಿಸುವಂತೆ ಸಲಹೆ ನೀಡಿದರೆ, ಪತ್ರಕರ್ತ ಎಂ.ರಾಘವೇಂದ್ರ, ನಲ್ಲಿ ಸಂಪರ್ಕಕ್ಕಾಗಿ ಹೊಸ ರಸ್ತೆಗಳನ್ನು ಅಗೆಯಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗುತ್ತಿದೆ. ನಳ ಸಂಪರ್ಕಕ್ಕೆ ಪರವಾನಗಿ ನೀಡುವಾಗ ಸೂಕ್ತ ನಿಯಮಾವಳಿ ರೂಪಿಸಬೇಕು ಎಂದು ಸಲಹೆ ಮಾಡಿದರು.
ಡಿ.ಎಸ್.ಎಸ್. ಮುಖಂಡ ಪರಮೇಶ್ವರ ದೂಗೂರು ಮಾತನಾಡಿ, ನಲ್ಲಿಗಳಿಗೆ ಮೀಟರ್ ಅಳವಡಿಸುವುದರಿಂದ ನೀರು ಪೋಲು ತಡೆಗಟ್ಟಲು ಸಾಧ್ಯವಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ಮಹ್ಮದ್ ಖಾಸಿಂ, ಶೌಚಾಲಯಗಳ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಜೊತೆಗೆ ಶಿವಾಜಿ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಒತ್ತಾಯ ಮಾಡಿದರು.
ನಾಗರೀಕರಿಗೆ ಹೊಣೆ ಕೊಡಿ: ಹಿರಿಯ ನಾಗರೀಕ ಕೆ.ಎನ್.ಭಟ್ ಮಾತನಾಡಿ, ನಾಗರೀಕರ ಸಹಭಾಗಿತ್ವದಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಿ, ಸ್ಥಳೀಯ ಪ್ರಮುಖರ ಸಲಹೆ ಪಡೆದು ನಗರಸಭೆ ಅಭಿವೃದ್ಧಿಗೆ ಪ್ರಯತ್ನ ನಡೆಸಬೇಕು. ಹಸುರೀಕರಣದ ಹೆಸರಿನಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಅದನ್ನು ಸಂರಕ್ಷಿಸುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ನೆಟ್ಟ ಸಸಿಗಳನ್ನು ಸಂರಕ್ಷಿಸುವ ಹೊಣೆಯನ್ನು ಸ್ಥಳೀಯ ನಾಗರೀಕರಿಗೆ ಕೊಡುವಂತೆ ಸಲಹೆ ನೀಡಿದರು.
ದಲಿತ ಮುಖಂಡ ನಾರಾಯಣ ಅರಮನೆಕೇರಿ ಮಾತನಾಡಿ, ಪಟ್ಟಣದ ರಸ್ತೆಗಳಲ್ಲಿ ಬೀಡಾಡಿ ದನಗಳಿಂದ ವಾಹನ ಹಾಗೂ ಜನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಲು ದೊಡ್ಡಿ ನಿರ್ಮಿಸುವಂತೆ ಒತ್ತಾಯಿಸಿದರೆ, ಎಪಿಎಂಸಿ ಅಧ್ಯಕ್ಷ ಕೆ.ಹೊಳೆಯಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ನೀರಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ನಗರಸಭೆ ಸದಸ್ಯರಾದ ತೀ.ನ.ಶ್ರೀನಿವಾಸ್, ಸುಂದರಸಿಂಗ್, ರವಿ ಜಂಬಗಾರು, ಫ್ರಾನ್ಸಿಸ್ ಹಾಗೂ ಪ್ರಮುಖರಾದ ರವಿ ನಾಯ್ಡು, ಮಹಾಬಲೇಶ್ವರ ಶೇಟ್. ದೀಪಕ್ ಸಾಗರ್, ಹಿತಕರ ಜೈನ್, ತಾರಾಮೂರ್ತಿ, ಲಕ್ಷ್ಮಣ ಸಾಗರ್, ಧರ್ಮರಾಜ್ ಇನ್ನಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

