ಮೆಗ್ಗಾನ್ ಆಸ್ಪತ್ರೆಗೆ ಗಾಯಾಳು ದಾಖಲು
ಶಿಕಾರಿಪುರ: ತಾಲೂಕಿನ ಕಾಗಿನಲ್ಲಿ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆ ಗಾಳಿಯ ರಭಸಕ್ಕೆ ಕುಸಿದ ಗೋಡೆಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರನ್ನು ಗ್ರಾಮದ ರವಿ, ನಾಗೇಂದ್ರಾಚಾರಿ, ಜ್ಞಾನೇಂದ್ರಾಚಾರಿ, ಲೋಕೇಶಪ್ಪ ಹಾಗೂ ಕುಮಾರ ಎಂದು ಗುರುತಿಸಲಾಗಿದೆ.
ಪರಿಹಾರಕ್ಕೆ ಸೂಚನೆ: ಗೋಡೆ ಕುಸಿತದಿಂದಾಗಿ ಮೃತಪಟ್ಟವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಕೂಡಲೇ ವಿತರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ಸೋಮವಾರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಸ್ಥಿತಿಗತಿ ಬಗ್ಗೆ ಮಾಹಿತಿಗಾಗಿ ಆಗಮಿಸಿದ್ದ ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಜತೆ ದೆಹಲಿಯಿಂದ ದೂರವಾಣಿ ಮೂಲಕ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿ ಕೂಡಲೇ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಾಧ್ಯವಿರುವ ಹೆಚ್ಚಿನ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು. ಜತೆಗೆ ತೀವ್ರವಾಗಿ ಗಾಯಗೊಂಡಿರುವವರಿಗೆ ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.
ಸೂಕ್ತ ಪರಿಹಾರ: ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಆಗಮಿಸಿ ಘಟನೆ ಬಗ್ಗೆ ತನಿಖೆ ನಡೆಸಿ ಪ್ರಕೃತಿ ವಿಕೋಪದಿಂದ ಆದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು.ತೀವ್ರವಾಗಿ ಗಾಯಗೊಂಡಿರುವವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಮೃತರಿಗೆ ತಲಾ 1.5 ಲಕ್ಷ ವಿತರಿಸಲು ಅವಕಾಶವಿದ್ದು, ಘಟನೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮುಖಂಡ ಗುರುಮೂರ್ತಿ, ಲಕ್ಷ್ಮಣ ಕೆಂಗಟ್ಟೆ, ಕಂದಾಯ ಅಧಿಕಾರಿ ಮಂಜುನಾಥ್, ರಾಜೀವ್, ಶಶಿಧರ ಮತ್ತಿತರರು ದ್ದರು.
--
ಸೌಲಭ್ಯಕ್ಕಾಗಿ ಹೋರಾಟ ಅಗತ್ಯ
ಶಿಕಾರಿಪುರ: ಸಂಘಟನೆಯಿಂದ ಮಾತ್ರ ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ. ಸಂಘಟನಾತ್ಮಕ ಹೋರಾಟಕ್ಕೆ ಕೈಜೋಡಿಸುವಂತೆ ಇಲ್ಲಿನ ಕುಮದ್ವತಿ ಅಸಂಘಟಿತ ಕಟ್ಟಡ ಕೂಲಿ ಕಾರ್ಮಿಕರ ಹಾಗೂ ಪೈಂಟರ್ಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಏಳುಕೋಟಿ ಗಿಡ್ಡಪ್ಪ ತಿಳಿಸಿದರು.
ಸೋಮವಾರ ಪಟ್ಟಣದ ಹರಳೆಣ್ಣೆ ಕೇರಿಯ ಕಚೇರಿಯಲ್ಲಿ ಇತ್ತೀಚೆಗೆ ವೃತ್ತಿಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಸಂಘದ ಬಿ. ಎಡ್ವಿನ್ ಅವರ ಪತ್ನಿಗೆ ಯುನೈಟೆಡ್ ಇನ್ಶೂರೆನ್ಸ್ ಕಂಪನಿ ವತಿಯಿಂದ ಮಂಜೂರಾದ 1 ಲಕ್ಷ ವಿಮಾ ಪರಿಹಾರದ ಚೆಕ್ಅನ್ನು ವಿತರಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರು ಅನಕ್ಷರಸ್ಥರಾಗಿ ಕೇವಲ ದಿನನಿತ್ಯದ ದುಡಿಮೆಯಲ್ಲಿ ತೊಡಗಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಲು ವಿಫಲರಾಗುತ್ತಿದ್ದು, ಶ್ರಮಜೀವಿಗಳಾಗಿ ನಿತ್ಯ ದುಡಿಮೆ ನಂಬಿ ಜೀವಿಸುತ್ತಿರುವ ಕಾರ್ಮಿಕರು ಹಲವು ಸಂದರ್ಭದಲ್ಲಿ ದುರ್ಘಟನೆಯಲ್ಲಿ ತೊಂದರೆ ಅನುಭವಿಸುತ್ತಿರುವ ಸಂಗತಿ ಸಾಮಾನ್ಯವಾಗಿದೆ. ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರ ಹಲವು ಸೌಲಭ್ಯಗಳಿದ್ದರೂ ಅವುಗಳ ಪ್ರಯೋಜನ ಪಡೆಯಲು ವಿಫಲರಾಗುತ್ತಿದ್ದಾರೆ ಎಂದು ವಿಷಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

