ಡಿಸಿಸಿ ಬ್ಯಾಂಕ್ ಚುನಾವಣೆ ಕ್ಷಣಗಣನೆ
ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 21
ನಾಲ್ವರ ಅವಿರೋಧ ಆಯ್ಕೆ ಆಗಿದೆ. ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ...
ಇಷ್ಟೇ ಆಗಿದ್ದರೆ ಸಹಕಾರ ಕ್ಷೇತ್ರದ ಪ್ರಮುಖ ಅಧಿಕಾರ ಕೇಂದ್ರವಾದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಚುನಾವಣೆ ಸಹಕಾರಿ ತತ್ವಗಳಿಗೆ ಯಾವುದೇ ಕುಂದಿಲ್ಲದಂತೆ ನಡೆಯುತ್ತಿದೆ ಎನ್ನಬಹುದಿತ್ತು. ಆದರೆ ಇಲ್ಲಿ ನುಸುಳಿರುವ ರಾಜಕೀಯ ಶುದ್ಧ ಸಹಕಾರಿಗಳನ್ನು ನಾಚಿಕೊಳ್ಳುವಂತೆ ಮಾಡುತ್ತಿದೆ.
ಮೇ 24ರಂದು ಡಿಸಿಸಿ ಬ್ಯಾಂಕಿನ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 380 ಮತದಾರರು ಆಯ್ಕೆ ಮಾಡಲಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಈಗ ಕಣಕ್ಕಿಳಿದಿದ್ದು, ಸಾರ್ವತ್ರಿಕ ಚುನಾವಣೆಯ ಎಲ್ಲ ಕಸರತ್ತುಗಳನ್ನೂ ಇಲ್ಲಿ ನಡೆಸುತ್ತಿದ್ದಾರೆ.
ಸತ್ಯವೇನೆಂದರೆ- ಒಬ್ಬ ಮತದಾರನ ಮನಸನ್ನು ಬದಲಿಸುವುದು ಕಷ್ಟ. ಮತ ಚಲಾವಣೆ ಇವರೊಬ್ಬರ ತೀರ್ಮಾನವಾಗಿರುವುದಿಲ್ಲ. ಅದು ಅವರು ಪ್ರತಿನಿಧಿಸುವ ಇಡೀ ಸಹಕಾರ ಸಂಘದ ತೀರ್ಮಾನವಾಗಿರುತ್ತದೆ. ಆದರೆ ರಾಜಕೀಯ ಪಕ್ಷಗಳು ಮಾತ್ರ ಕಲ್ಲು ಹೊಡೆದರೆ ಹಣ್ಣು ಬೀಳುವುದಿಲ್ಲವೇನು ಎಂಬಂತೆ ಪ್ರಯತ್ನ ಮಾಡುತ್ತಿದ್ದಾರೆ.
90ರ ದಶಕದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವವರಿರಲಿಲ್ಲ. ಎಷ್ಟೋ ಕ್ಷೇತ್ರಗಳಲ್ಲಿ ಮತದಾರರನ್ನು, ಸ್ಪರ್ಧಿಗಳನ್ನು ಒತ್ತಾಯ ಮಾಡಿ ಕರೆತರಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಡಿಸಿಸಿ ಬ್ಯಾಂಕ್ ಬಲಿಷ್ಠವಾಗಿದೆ. ಎಲ್ಲರ ನೋಟ ಇತ್ತ ತಿರುಗಿದೆ.
ಗೌಡರ ಮೇಲೆ ಕಣ್ಣು: ಎಲ್ಲರ ಕಣ್ಣು ಇರುವುದು ಹಾಲಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಮೇಲೆ. ಕಳೆದ ಒಂದೂವರೆ ದಶಕದಿಂದ ಅಧ್ಯಕ್ಷರಾಗಿರುವ ಇವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆಗಿದ್ದಾರೆ. 90ರ ದಶಕದಲ್ಲಿ ಇವರು ಅಧ್ಯಕ್ಷರಾದಾಗ 4.5 ಕೋಟಿಯಷ್ಟು ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕನ್ನು ಮೇಲೆತ್ತಿ ಲಾಭ ಗಳಿಸುವಂತೆ ಮಾಡಿದರು. ಹಲವು ಪಕ್ಷದಲ್ಲಿ ಗೆಳೆಯರನ್ನು ಸಂಪಾದಿಸಿದರು.
ಇವರು ಯಾವಾಗ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರೋ ಆವಾಗನಿಂದ ಇತರೆ ಪಕ್ಷಗಳ ಧ್ವೇಷ ಕಟ್ಟಿಕೊಳ್ಳಬೇಕಾಯಿತು. ಪ್ರಮುಖವಾಗಿ ಬಿಜೆಪಿ ಮುಖಂಡರು ಇವರನ್ನೇ ಗುರಿಯಾಗಿಟ್ಟುಕೊಂಡು ಆಕ್ಷೇಪಣೆಗಳ ಸುರಿಮಳೆ ಮಾಡುತ್ತಿದ್ದಾರೆ. ಈ ಆಕ್ಷೇಪಣೆಗಳ ಪರಿಣಾಮ ಡಿಸಿಸಿ ಬ್ಯಾಂಕ್ ಚುನಾವಣೆ ಮೇಲೆ ಆಗಲು ಸಾಧ್ಯವಿಲ್ಲ. ಏಕೆಂದರೆ ಒಮ್ಮೆ ಚುನಾವಣೆ ಘೋಷಣೆಯಾದ ನಂತರ ನಿಲ್ಲುವ ಸಾಧ್ಯತೆ ಅಪರೂಪ. ಮುಂದಿನ ದಿನಗಳ ದಾಖಲಾತಿಗಾಗಿಯೇ ಈ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸದ್ಯ ಮಂಜುನಾಥ ಗೌಡರು ಯಾವ ರಾಜಕೀಯ ಪಕ್ಷದಲ್ಲೂ ಇಲ್ಲ. ಆದರೆ ಹಳೇ ಶತ್ರುಗಳನ್ನು ಎದುರಿಸಬೇಕಾಗಿದೆ.
ಕ್ಷಣಗಣನೆ: ಚುನಾವಣೆಗೆ ಉಳಿದಿರುವುದು ಇನ್ನೆರಡು ದಿನಗಳು ಮಾತ್ರ. ಎಲ್ಲರೂ ಸಹ ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
9 ಕ್ಷೇತ್ರಗಳಲ್ಲೂ ತುರುಸಿನ ಸ್ಪರ್ಧೆ ಇದೆ. ಡಿಸಿಸಿ ಬ್ಯಾಂಕ್ ಗದ್ದುಗೆ ಯಾರಿಗೆ ಎಂಬುದು ಮೇ 24ರ ಸಂಜೆ 6 ಗಂಟೆ ವೇಳೆಗೆ ಬಹಿರಂಗವಾಗಲಿದೆ.
'ಗುರುತಿನ ಚೀಟಿ ಹಾಜರುಪಡಿಸಿ'
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಮೇ 24ರಂದು ಚುನಾವಣೆ ನಡೆಯಲಿದೆ.
ಅರ್ಹ ಮತದಾರರು ಸಹಕಾರ ಚುನಾವಣಾ ಆಯೋಗವು ನಿಗದಿಪಡಿಸಿರುವ, ನೀಡಲಾಗಿರುವ ಸಂಘದ ಪ್ರತಿನಿಧಿ- ಡೆಲಿಗೇಟ್ ಗುರುತಿನ ಚೀಟಿ ಹಾಗೂ ನಮೂನೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ಹಾಜರುಪಡಿಸುವಂತೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಸ್. ಕುಸುಮ ಕುಮಾರಿ ಕೋರಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ ಕೆ.ಪಿ. ದುಗ್ಗಪ್ಪಗೌಡ, ಎಸ್.ಎಚ್. ಶ್ರೀಪಾದರಾವ್, ಎಂ.ಎಂ. ಪರಮೇಶ ಮತ್ತು ಅಗಡಿ ಅಶೋಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಶಿವಮೊಗ್ಗ, ಸಾಗರ ಉಪವಿಭಾಗದ ವ್ಯಾಪ್ತಿಗೊಳಪಡುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಕೃಷಿ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ, ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ಇನ್ನಿತರೆ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ನಿಯಮಾನುಸಾರ ಬೆಳಿಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನದ ನಂತರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಮತ ಎಣಿಕೆ ನಡೆಸಿ, ಫಲಿತಾಂಶವನ್ನು ಘೋಷಿಸಲಾಗುವುದು ಎಂದವರು ತಿಳಿಸಿದ್ದಾರೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

