ಶಿವಮೊಗ್ಗ

9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಜೂ.1 ರಿಂದ

Published On :

ಶಿವಮೊಗ್ಗ: 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಸಜ್ಜಾಗಿದೆ.
ಜೂನ್ 1 ಮತ್ತು 2 ರಂದು ಸಮ್ಮೇಳನ ನಡೆಸಲು ಸಿದ್ಧತೆ ನಡೆಸಲಾಗಿದ್ದು, ಸರ್ವಾಧ್ಯಕ್ಷರಾಗಿ ನಾಡಿನ ಹಿರಿಯ ಕವಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.
ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಎರಡೂ ದಿನ ಕುವೆಂಪುರಂಗ ಮಂದಿರದ ರಾಷ್ಟ್ರಕವಿ ಕುವೆಂಪು ಮಹಾ ಮಂಟಪ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಹೆಸರಿನ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಟಿ. ಮಹಾಬಲೇಶ್ವರಭಟ್ಟ, ನೀ.ನಾ.ಮಧ್ಯಸ್ಥ ಮತ್ತು ಎಸ್.ವಿ.ತಿಮ್ಮಯ್ಯ ಅವರ ಹೆಸರುಗಳನ್ನು ಮಹಾದ್ವಾರಗಳಿಗೆ ಇಡಲಾಗಿದೆ ಎಂದು ವಿವರಿಸಿದರು.
ಮೆರವಣಿಗೆ: ಜೂನ್ 1ರಂದು ಬೆಳಿಗ್ಗೆ 9.30ಕ್ಕೆ ಸಮ್ಮೇಳನದ ಧ್ವಜರೋಹಣ ನಡೆಯಲಿದೆ. ಡಿಡಿಪಿಐ ಬಿ.ಸಿ.ಬಸವರಾಜಪ್ಪ, ತಹಶೀಲ್ದಾರ್ ರಾಜ್‌ಗೋಪಾಲ್ ಅವರು ಧ್ವಜಾರೋಹಣದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ನೇನೃತ್ವದಲ್ಲಿ ರಾಜಬೀದಿ ಉತ್ಸವ ನಗರದ ಶಿವಪ್ಪನಾಯಕ ವೃತ್ತದಿಂದ ಆರಂಭವಾಗಲಿದೆ. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ  ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಅಂದು ಬೆಳಿಗ್ಗೆ 11.30ಕ್ಕೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಸಮ್ಮೇಳನ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎನ್.ಹುಚ್ಚಪ್ಪಮಾಸ್ತರ್, ಸಮ್ಮೇಳನಾಧ್ಯಕ್ಷ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರದರ್ಶನ ಕಲೆಗಳ ಅನಾವರಣ ಮಾಡಲಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಪುಸ್ತಕ ಪ್ರದರ್ಶನ ಉದ್ಘಾಟಿಸಿದರೆ, ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ ನೆರವೇರಿಸುವರು.
ಗೋಷ್ಠಿ: ಸಮ್ಮೇಳನದಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅರಿವು ಗೋಷ್‌ಠಿ ನಡೆಯಲಿದ್ದು ಜಿಲ್ಲೆ, ತಾಲೂಕು ಗ್ರಾಮ ಪಂಚಾಯಿತಿಗಳ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅರಿವು, ಹಳ್ಳಿಗಳ ಏಳಿಗೆಗೆ ಸರ್ಕಾರ- ಸಮೂಹದ ಕಾಳಜಿ, ಗ್ರಾಮ ನೈರ್ಮಲ್ಯ, ಉದ್ಯೋಗ ಖಾತರಿ, ಜಲ ಸಂವರ್ಧನೆ, ಆರೋಗ್ಯ ಸಂಜೀವಿರಿ, ಪರಿಸರ ಜಾಗೃತಿ ಕುರಿತು ಮಾತು ಮಂಥನ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ತಾ.ಪಂ.ಅಧ್ಯಕ್ಷೆ ಕಮಲಮ್ಮನವರ ಸಮ್ಮುಖದಲ್ಲಿ ಅಧಿಕಾರಿಗಳು, ತಜ್ಞರು ಚುನಾಯಿತ ಪ್ರತಿನಿಧಿಗಳು ಮಾತನಾಡಲಿದ್ದಾರೆ. ನಂತರ ಡಾ.ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವನಗಳ ಗಾಯನವಿರುವ ಕಾವ್ಯ ಸಂಜೆ ನಡೆಯಲಿದೆ. ಗಾಯಕರಾದ ಕಾಶಿ ಬಾಯಿ, ಕೆ.ಯುವರಾಜ್, ಸುರೇಖಾ ಹೆಗಡೆ ಮತ್ತು ತಂಡದವರು ಕಾರ್ಯಕ್ರಮ ನೀಡಲಿದ್ದಾರೆ.
ಸಮ್ಮೇಳನಾಧ್ಯಕ್ಷ ಬದುಕು ಬರಹ ಕುರಿತ ಎರಡನೇ ಗೋಷ್ಠಿಯಲ್ಲಿ ಕುವೆಂಪು ವಿವಿ ಕುಲಸಚಿವರಾದ ಪ್ರೊ. ಮಲ್ಲಿಕಾ ಘಂಟಿ ಅಧ್ಯಕ್ಷತೆಯಲ್ಲಿ ಎಸ್.ಪಿ.ಪದ್ಮಪ್ರಸಾದ್, ಡಾ. ನೆಲ್ಲಿಕಟ್ಟೆ ಸಿದ್ದೇಶ್, ರಮೇಶ್ ಮಾತನಾಡಲಿದ್ದಾರೆ.
ಸಾಂಸ್ಕೃತಿಕ ಕರ್ನಾಟಕದ ಬೇಗುದಿಗಳು ವಿಚಾರವಾಗಿ ಡಾ. ಬಂಜಗೆರೆ ಜಯಪ್ರಕಾಶ್ ಉಪನ್ಯಾಸ ನೀಡಲಿದ್ದಾರೆ. ಸಂಜೆ ಮೈಸೂರಿನ ಪ್ರೊ.ಕೃಷ್ಣೇಗೌಡರು ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಜೂ. 2ರಂದು ಭೂಮಿ-ಈ ಹೊತ್ತಿನ ಆತಂಕ ಕುರಿತ ಗೋಷ್ಠಿ ನಡೆಯಲಿದ್ದು, ಗೋಷ್ಠಿಯ ಅಧ್ಯಕ್ಷತೆಯನ್ನು ವಿಧಾನಸಭೆಯ ಸಭಾಪತಿ ಕಾಗೋಡು ತಿಮ್ಮಪ್ಪ ವಹಿಸಲಿದ್ದಾರೆ. ಭೂರಹಿತರ ತಲ್ಲಣಗಳ ಕುರಿತು ಮಾವಳ್ಳಿ ಶಂಕರ್, ಬೃಹತ್ ಕೈಗಾರಿಕೆಗಾಗಿ ಭೂಮಿಯ ಕಬಳಿಕೆಯ ಕುರಿತು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಬಗರ್‌ಹುಕುಂ ರೈತರು ಮತ್ತು ಅವರ ಸಮಸ್ಯೆಗಳ ಕುರಿತಾಗಿ ಶಾಸಕ ಎಂ. ಜೆ. ಅಪ್ಪಾಜಿ, ಅಭಿವೃದ್ಧಿಯ ಹೆಸರಲ್ಲಿ ಭೂಮಿಗಿರುವ ಆತಂಕ ಕುರಿತು ರೈತ ನಾಯಕ ಕಡಿದಾಳು ಶಾಮಣ್ಣ, ನೀರಾವರಿ ಯೋಜನೆಗಳು-ಆತಂಕ ಕುರಿತು ವಾಮದೇವಗೌಡ ಮಾತನಾಡುವರು.
ಅಂದು ಸಂಜೆ ಕವಿಗೋಷ್ಠಿ ನಡೆಯಲಿದೆ.   ವಿಧಾನಪರಿಷತ್ ಸದಸ್ಯ ಆರ್. ಕೆ. ಸಿದ್ಧರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಯಾರ್ಯಾರ ನೆನೆಯಲಿ ಗೋಷ್ಠಿ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ದುಡಿದವರನ್ನು ಅಭಿನಂದಿಸಲಾಗುವುದು. ಜೂನ್ 2ರ ಸಂಜೆ ನಡೆಯುವ ಸಮಾರೋಪದಲ್ಲಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರನ್ನು ಸಂಸದ ಬಿ.ಎಸ್. ಯಡಿಯೂರಪ್ಪ ಅಭಿನಂದಿಸಲಿದ್ದಾರೆ. ಡಾ.ನಾ.ಡಿಸೋಜ ಸಮಾರೋಪ ನುಡಿಗಳನ್ನಾಡಲಿದ್ದಾರೆ.
ತಾಲೂಕು ಕಸಾಪ ಅಧ್ಯಕ್ಷೆ ಶೀಲಾ ಸುರೇಶ್, ಜಿಲ್ಲಾ ಸಂಚಾಲಕ ಆರ್. ರತ್ನಯ್ಯ, ತಾಲೂಕು ಕಾರ್ಯದರ್ಶಿ ಇ.ಜಯಣ್ಣ, ಸಾಹಿತಿ ಪ್ರೊ.ಕೆ.ಓಂಕಾರಪ್ಪ, ಪ್ರಕಾಶ್ ಆರ್.ಕಮ್ಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.