ಬಿಜೆಪಿ ಅಭ್ಯರ್ಥಿಯಿಂದ ಚುನಾವಣಾ ಕಚೇರಿ ಶುರು
ಕ.ಪ್ರ. ವಾರ್ತೆ ಕುಣಿಗಲ್ ಏ.1
ಕಳೆದ 24ರಂದು ತಾಲೂಕಿನ ಪ್ರಮುಖ ದೇವಾಲಯ ಹಾಗೂ ದರ್ಗಾಗಳಲ್ಲಿ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಅರಂಭಿಸಿದ್ದ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್, ಸೋಮವಾರದಂದು ಪಟ್ಟಣದ ತುಮಕೂರು ರಸ್ತೆಯಲ್ಲಿ ಬಿಜೆಪಿ ಚುನಾವಣಾ ಕಚೇರಿಯನ್ನು ವಿವಿಧ ಹೋಮಾದಿಗಳನ್ನು ನಡೆಸಿ ಪ್ರಾರಂಭಿಸಿದರು.
ತಾಲೂಕಿನ ವಿವಿಧೆಡೆಯಿಂದ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು ಬೆಳಗಿನಿಂದಲೇ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಪೂಜಾ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿ. ಕೃಷ್ಣಕುಮಾರ್, ದೇಶಕ್ಕೆ ಮಾದರಿ ಎನಿಸುವಂತ ಹಲವು ಜನಪರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಅನುಷ್ಠಾನಗೊಳಿಸಿದ ಬಿಜೆಪಿ ಸರ್ಕಾರದ ಸಾಧನೆಯೆ ತಮಗೆ ಶ್ರೀರಕ್ಷೆಯಾಗಲಿದೆ. ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದೆ ನಿರ್ಲಕ್ಷ್ಯವಹಿಸಿದ್ದು, ಬಿಜೆಪಿ ಸರ್ಕಾರ ರಾಜ್ಯದ ಉದ್ದಗಲಕ್ಕೂ ಎಲ್ಲಾ ಕ್ಷೇತ್ರಗಳಲ್ಲೂ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತರು ಮತದಾರರ ಮನೆ, ಮನೆಗೂ ತಲುಪಿಸಬೇಕು. ಈ ಮೂಲಕ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ತರುವತ್ತ ಶ್ರಮಿಸಬೇಕೆಂದರಲ್ಲದೆ, ತಾಲೂಕಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಗೊಂದಲದ ಗೂಡಾಗಿದೆ. ಯಾವುದೇ ಮುಖಂಡರು ತಮಗೆ ಟಿಕೆಟ್ ಎಂದು ಧೈರ್ಯದಿಂದ ಹೇಳದೆ, ತಮಗಿಷ್ಟ ಬಂದಂತೆ ತಮಗೆ ಟಿಕೆಟ್ ಸಿಕ್ಕಿದೆ ಎಂಬ ಭ್ರಮೆಯಲ್ಲಿ ಪಟಾಕಿ ಸಿಡಿಸುತ್ತಾ, ಅವರ ಭ್ರಮೆಯೂ ಟುಸ್ ಆಗಲಿದೆ ಎಂದರು.
ಬೇಸತ್ತಿದ್ದಾರೆ: ಬೇರೆ ಪಕ್ಷದ ಕಾರ್ಯಕರ್ತರು ಬೇಸತ್ತು, ಬಿಜೆಪಿಯತ್ತ ವಾಲುತ್ತಿದ್ದಾರೆ. ಕಳೆದ ಐದು ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದ ಕಾಂಗ್ರೆಸ್ನ ಬಿ.ಬಿ. ರಾಮಸ್ವಾಮಿಗೌಡ, ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುವಲ್ಲಿ ಹಲವು ಅವಕಾಶಗಳಿದ್ದರೂ ಪರಿಣಾಮಕಾರಿಯಾಗಿ ನಿರ್ವಹಿಸದ ಕಾರಣ ತಾಲೂಕು ಅಭಿವೃದ್ಧಿಯಿಂದ ವಂಚಿತವಾಗಿದೆ. ತಾವು ಆಯ್ಕೆಯಾದಲ್ಲಿ, ತಾಲೂಕಿಗೆ ಸಮರ್ಪಕ ಹೇಮಾವತಿ ನೀರು ಹರಿಸುವುದು ಸೇರಿದಂತೆ, ನೆನೆಗುದಿಗೆ ಬಿದ್ದಿರುವ ನೀರಾವರಿ ಕಾಮಗಾರಿ, ಕೈಗಾರಿಕೆ ರಂಗದ ಅಭಿವೃದ್ಧಿ ಸೇರಿದಂತೆ ತಾಲೂಕನ್ನು ಇಡೀ ರಾಜ್ಯದಲ್ಲೆ ಮಾದರಿ ತಾಲೂಕನ್ನಾಗಿಸಲು ಶ್ರಮಿಸುವುದಾಗಿ ತಿಳಿಸಿ, ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ತಾಲೂಕಿನಲ್ಲಿ ಬಿಜೆಪಿ ಪಕ್ಷದ ಏಳಿಗೆ ಸಹಿಸದ ವಿರೋಧ ಪಕ್ಷದ ಮುಖಂಡರು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಾ ಕಾರ್ಯಕರ್ತರು, ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತ ನೀಡಿ, ಅಧಿಕಾರಕ್ಕೆ ತರುವತ್ತ ಹಗಲಿರುಳು ಶ್ರಮಿಸಬೇಕೆಂದರು.
ತಾಲೂಕು ಅಧ್ಯಕ್ಷ ಚಿಕ್ಕರಾಮಯ್ಯ, ಪ್ರಮುಖರಾದ ಬಲರಾಮ, ನಟರಾಜ ಮಾತನಾಡಿದರು. ನೂತನ ಪುರಸಭಾ ಸದಸ್ಯ ರಾಮು, ಮುಖಂಡರಾದ ರಂಗಸ್ವಾಮಿ, ಕೃಷ್ಣ, ರಂಗನಾಥ, ಎಸ್ಟಿಡಿ ಶ್ರೀನಿವಾಸ, ದತ್ತ, ಸಂತೋಶ್, ಸೋಮಶೇಖರ್, ನಂಜೇಗೌಡ, ಸುರೇಶ, ನಾಗರಾಜು, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ ಸೇರಿದಂತೆ ಇತರರು ಉಪಸ್ತಿತರಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ನ ಕೆಲ ಕಾರ್ಯಕರ್ತರು ಡಿ.ಕೃಷ್ಣಕುಮಾರ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

