ಹಣದಿಂದಷ್ಟೇ ಪಾರುಪತ್ಯ ನಡೆಸಲು ಸಾಧ್ಯವಿಲ್ಲ
ಹುಳಿಯಾರು: ಕ್ಷೇತ್ರದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಪ್ರೀತಿ,ವಿಶ್ವಾಸಗಳಿಸುವ ಮೂಲಕ ಅವರ ಮನಸ್ಸಿನಲ್ಲಿ ಸ್ಥಾನ ಪಡೆಯಬೇಕೆ ಹೊರತು, ಚುನಾವಣೆಗೆ ಮುಂಚೆ ಒಂದಿಷ್ಟು ಹಣ, ಗೆದ್ದ ನಂತರ ಮತ್ತಷ್ಟು ಹಣ ಕೊಡುವ ಪೊಳ್ಳು ಭರವಸೆಯಿಂದ ಸಮಾಜದಲ್ಲಿ ಪಾರುಪತ್ಯ ನಡೆಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿರುಗೇಟು ನೀಡಿದರು.
ಹುಳಿಯಾರಿನ ರಾಂ ಗೋಪಾಲ್ ಸರ್ಕಲ್ನ ಜಹೀರ್ ಕಾಂಪ್ಲೆಕ್ಸ್ನಲ್ಲಿ ಮುಸ್ಲಿಂ ಸಮುದಾಯದ ಮುಖಂಡರನ್ನು ಕೆಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು ಸಚಿವ ಹಾಗೂ ಶಾಸಕ ಸ್ಥಾನದಲ್ಲಿದ್ದ ವ್ಯಕ್ತಿಗಳು ಘನತೆ ಹಾಗೂ ತೂಕದ ವ್ಯಕ್ತಿತ್ವದಿಂದ ಮಾತನಾಡಬೇಕೇ ಹೊರತು ಕೇವಲ ಸಮುದಾಯದ ಓಲೈಕೆಗಾಗಿ ಇನ್ನೊಬ್ಬರನ್ನು ತೆಗಳುವ, ತೇಜೋವಧೆ ಮಾಡುವ ಕಾರ್ಯಕ್ಕೆ ಮುಂದಾಗಬಾರದು ಎಂದು ಕಿವಿ ಮಾತು ಹೇಳಿದರು.
ಪ್ರಸ್ತುತ ಬಿಜೆಪಿ ಸರ್ಕಾರ ರಾಜ್ಯದಲ್ಲಿನ ಆದಾಯವನ್ನು ಕೇಂದ್ರಕ್ಕೆ ನೀಡುವ ಮೂಲಕ ಕೇಂದ್ರ ಸರ್ಕಾರವನ್ನು ಸಾಕುವ ಕಾರ್ಯ ಮಾಡುತ್ತಿದೆ. ಕಾವೇರಿ ವಿವಾದವನ್ನು ಬಗೆ ಹರಿಸುವಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲಾಗಿದೆ ಎಂದರು.
ಯಡಿಯೂರಪ್ಪ ಮೊದಲಿಗರು: ಜನಸೇವೆಯನ್ನು ತನ್ನ ಕಾಯಕವನ್ನಾಗಿ ನಂಬಿರುವವರಿಗೆ ಯಾವ ಪಕ್ಷವಾದರೇನು, ಜನಾರುರಾಗಿಯಾಗಿ ಜನಪರ ಕಾರ್ಯಗಳನ್ನು ಮಾಡಬೇಕಿದ್ದು, ಇಂತಹ ಜನಪರ ಕಾರ್ಯಗಳನ್ನು ಮಾಡಿದವರಲ್ಲಿ ಬಂಗಾರಪ್ಪ ಮತ್ತು ಯಡಿಯೂರಪ್ಪನವರು ಮೊದಲಿಗರಾಗಿದ್ದಾರೆ. ಇವರು ತಮ್ಮ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದಂತವರು. ಗಣಿ ಹಗರಣದ ತನಿಖೆಯನ್ನು ಪ್ರಾರಂಭಿಸಿದ ಯಡಿಯೂರಪ್ಪ ಹಿತಶತ್ರುಗಳ ಹುನ್ನಾರದಿಂದ ಕಳಂಕ ಹೊರುವಂತಾಗಿದೆ. ಆರೆಸ್ಸೆಸ್ ಹಿನ್ನೆಲೆಯಲ್ಲಿ ಬಂದ ಯಡೆಯೂರಪ್ಪನವರು ಎಂದೂ ಜಾತಿಯನ್ನು ಎತ್ತಿಹಿಡಿದವರಲ್ಲ ಎಂದರು.
ಶಾಸಕರಿಗೆ ಧಮ್ ಇರಬೇಕು: ಶಾಸಕರಾದವರು ತಮ್ಮ ಕ್ಷೇತ್ರದಲ್ಲಿನ ಜನರ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕೆ ಗಮನಕೊಡಬೇಕಾದ ಕಾರ್ಯ ಮಾಡುವ ಬದಲು ರೆಸಾರ್ಟ್ಗಳಲ್ಲಿ ಸಚಿವರ ಸೂಟ್ಕೇಸ್ಗಳನ್ನು ಹಿಡಿದು ತಿರುಗುವ ಕಾರ್ಯ ಮಾಡಬಾರದು. ಶಾಸಕ ಜನರ ಪ್ರತಿನಿಧಿಯಾಗಿದ್ದು ಕ್ಷೇತ್ರದ ಜನರ ಅಶೋತ್ತರಗಳನ್ನು ಈಡೇರಿಸಬೇಕೆ ಹೊರತು ಜಾತ್ರೆ, ಆರ್ಕೆಸ್ಟ್ರಗಳಿಗೆ ಹಣ ಕೊಟ್ಟು ಸುಮ್ಮನೆ ಕೂರುವುದಲ್ಲ ಎಂದು ವ್ಯಂಗ್ಯವಾಡಿದರು. ಹುಳಿಯಾರು.ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಜಹೀರ್ ಸಾಬ್, ಸದಸ್ಯ ಇಸ್ಮಾಯಿಲ್, ಶೌಕತ್ ಅಲಿ, ಜಬಿಉಲ್ಲಾ ಸೇರಿದಂತೆ ಐವತ್ತಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕೆಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ವೈ.ಆರ್. ಮಲ್ಲಿಕಾರ್ಜುನಯ್ಯ, ಚಿ.ನಾ.ಹಳ್ಳಿ ಪುರಸಭೆಯ ಮಾಜಿ ಅಧಕ್ಷ ಸೈಯ್ಯದ್ ಬಜೂಸಾಬ್, ಮಾಜಿ ಉಪಾಧ್ಯಕ್ಷ ನಜೀರುಲ್ಲಾ, ತಾ.ಪಂ.ಸದಸ್ಯ ಶಶಿಧರ್, ಎಪಿಎಂಸಿ ಅಧ್ಯಕ್ಷ ಶಿವರಾಜ್, ಮಾಜಿ ಜಿ.ಪಂ.ಸದಸ್ಯ ಶಿವರಾಂ, ವಕೀಲ ಆರ್. ಚನ್ನಬಸವಯ್ಯ, ಎಸ್.ಎಂ. ಮಹೇಶ್, ಬ್ಯಾಂಕ್ ಮರುಳಯ್ಯ, ವಕೀಲ ರಾಜಶೇಖರ್, ಬಡ್ಡಿ ಪುಟ್ಟರಾಜ್ ಸೇರಿದಂತೆ ಕೆಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

