ದೇವೇಗೌಡ, ಕುಮಾರಸ್ವಾಮಿ ಟಾರ್ಗೆಟ್: ಅಂಬರೀಷ್
ಕ.ಪ್ರ. ವಾರ್ತೆ , ಮಂಡ್ಯ , ಏ.12
ನಂಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಟಾರ್ಗೆಟ್ ಹೊರತು ಇಲ್ಲಿರುವ ಯಾವ ನಾಯಕರೂ ಎದುರಾಳಿಗಳಲ್ಲ ಎಂದು ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಅಂಬರೀಷ್ ಶುಕ್ರವಾರ ಹೇಳಿದರು.
ಅಂಬರೀಷ್ ಡೇ ಔಟ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಗುತ್ತಲಿನ ಮುನವರ್ ಖಾನ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಅಧಿಪತ್ಯ ನಮ್ಮ ಜಿಲ್ಲೆಯ ನಾಯಕರಲ್ಲೇ ಇರಬೇಕು ಎಂಬುದು ನನ್ನ ಒತ್ತಾಸೆ. ಹೀಗಾಗಿ, ದೇವೇಗೌಡ, ಕುಮಾರಸ್ವಾಮಿಯನ್ನು ನಾನು ಪ್ರಬಲವಾಗಿ ವಿರೋಧಿಸುತ್ತೇನೆ ಮತ್ತು ಅವರೇ ನನ್ನ ಎದುರಾಳಿಗಳು ಎಂದರು.
ರಾಜ್ಯದಲ್ಲೇ ಕಾಂಗ್ರೆಸ್ ಅಲೆ ಹೆಚ್ಚಾಗಿದೆ ಇದೆ. ಪಕ್ಷ ಅಧಿಕಾರಕ್ಕೆ ಬಂದರೆ ಒಂದಷ್ಟು ಕೆಲಸ ಮಾಡಿಸುವ ಆಸೆ ಇದೆ. ಶ್ರೀರಂಗಪಟ್ಟಣದಲ್ಲಿ ಸೋತೆ. ಅಲ್ಲೆ ನಿಂತು ಗೆಲವು ಸಾಧಿಸುವ ಬಯಕೆ ನನ್ನದಾಗಿತ್ತು. ಆದರೆ, ಪಕ್ಷ ನಾಯಕರು ಒತ್ತಾಯ ಮಾಡಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿದ್ದರಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿ ಬಂತು. ನಾನು ಈ ಕ್ಷೇತ್ರದಲ್ಲಿ ಆತ್ಮಾನಂದರಿಗೆ ಟಿಕೆಟ್ ನೀಡಬೇಕು ಎಂಬ ಪ್ರಸ್ತಾವನೆವನ್ನು ಹೈ ಕಮಾಂಡ್ ಮುಂದೆ ಇಟ್ಟಿದ್ದೆನು ಎಂದರು.
'ಬಿ' ಫಾರಂ ನನ್ನ ಕೈಗೆ ಸಿಗದ ಹೊರತು ನಾನು ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಘಂಟಾಘೋಷವಾಗಿ ಹೇಳಲಾರೆ. 'ಬಿ' ಫಾರಂ ಸಿಗುವ ಸೂಚನೆ ಇದೆ. ಅದೇ ಆಶಾಭಾವನೆಯಲ್ಲಿ ಇಂದಿನಿಂದಲೇ ಪ್ರಾಥಮಿಕ ಹಂತದ ಪ್ರಚಾರ ಮಾಡಿದ್ದೇನೆ. ಏ.15ರಂದು ನಾಮಪತ್ರ ಸಲ್ಲಿಸುವ ದಿನಾಂಕ ನಿಗದಿಯಾಗಿದೆ. ನಂತರದ ಹೋರಾಟ ಇದ್ದೇ ಇದೆ ಎಂದರು.
ಸೋಲು, ಗೆಲುವು ಜನರ ಕೈಲಿ ಇದೆ. ಜನರ ತೀರ್ಮಾನವನ್ನು ನಾವು ಒಪ್ಪಲೇಬೇಕು. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎನ್ನುವುದು ಜನರಿಗೆ ಗೊತ್ತಿದೆ. ಇದರ ಆಧಾರ ಮೇಲೆ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದರು.
ರವಿಗೆ ವಿರೋಧ: ಶ್ರೀರಂಗಪಟ್ಟಣವೂ ಸೇರಿದಂತೆ ಬೇರೆ ಯಾವುದೇ ಕ್ಷೇತ್ರಕ್ಕೆ ಇಂತಹವರಿಗೆ ಟಿಕೆಟ್ ಕೊಡಿ ಎಂಬ ನನ್ನ ಅಜೆಂಡಾ ಯಾವುದೂ ಇಲ್ಲ. ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ಕೊಡದಂತೆ ವಿರೋಧ ಸೂಚಿಸಿದ್ದೇನೆ. ಏಕೆಂದರೆ, ಈ ಹಿಂದಿನ ಎರಡು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧವೇ ಕೆಲಸ ಮಾಡಿದ ರವೀಂದ್ರನಿಗೆ ಈಗ ಹೇಗೆ ಟಿಕೆಟ್ ಕೊಡುವುದು. ಹೀಗಾಗಿ ನನ್ನ ವಿರೋಧವಿದೆ ಎಂದರು.
ಪಕ್ಷದಲ್ಲಿ ಸಣ್ಣ, ಪುಟ್ಟ ಗೊಂದಲಗಳಿವೆ. ಎಲ್ಲವನ್ನೂ ಸರಿಪಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವಂತೆ ಮಾಡುವ ತಂತ್ರಗಾರಿಕೆ ಮಾಡುವ ನಿಟ್ಟಿನಲ್ಲಿ ಹೋರಾಟ ರೂಪಿಸುತ್ತಿದ್ದೇನೆ ಎಂದು ಅಂಬರೀಷ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

