ಮಾಧುಸ್ವಾಮಿ ಬಹಿರಂಗ ಚರ್ಚೆಗೆ ಬರಲಿ: ಸಿಬಿಎಸ್
ಚಿಕ್ಕನಾಯಕನಹಳ್ಳಿ: ಕ್ಷೇತ್ರದಲ್ಲಿ ಜನರ ನೆಮ್ಮದಿ ಕದಡದಂತೆ ಶಾಂತಿಯಿಂದ 5 ವರ್ಷಗಳ ಕಾಲ ಆಡಳಿತ ನಡೆಸಿದ ಸಮಾಧಾನ ನನಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ನುಡಿದರು.
ಅವರು 15ರಂದು ಜೆಡಿಎಸ್ನಿಂದ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಶಾಸಕರು ಮಾಡುತ್ತಿರುವ ಆರೋಪಕ್ಕೆ ಉತ್ತರವಾಗಿ ನಾನು ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದಾಖಲೆ ಸಮೇತ ನಿರೂಪಿಸುತ್ತೇನೆ. ತಾಕತ್ತಿದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಬಹಿರಂಗ ಸವಾಲು ಹಾಕಿದರು.
ಹೇಮಾವತಿ ನೀರಾವರಿ ವಿಚಾರದಲ್ಲಿ ನಾನು ಏನೂ ಮಾಡಿಲ್ಲವೆಂಬ ಆರೋಪವನ್ನು ಮಾಜಿ ಶಾಸಕರಿಬ್ಬರು ಮಾಡುತ್ತಿದ್ದಾರೆ. ಚುನಾಯಿತ ಸದಸ್ಯನಾದ ನಾನು ಆಡಳಿತಾತ್ಮಕವಾಗಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿರುವ ದಾಖಲೆಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಪಡಿಸುತ್ತೇನೆ ಎಂದು ಗುಡುಗಿದರು. ಈ ನಿಟ್ಟಿನಲ್ಲಿ ಮಾಧ್ಯಮಗಳೆ ನನಗೆ ವೇದಿಕೆ ಒದಗಿಸಿಕೊಡಬೇಕು ಎಂದರು.
ವೈಯಕ್ತಿಕ ಅಭಿವೃದ್ಧಿಕಾರ: ಮೂರು ಬಾರಿ ಆಯ್ಕೆಯಾಗಿದ್ದ ಜೆ.ಸಿ. ಮಾಧುಸ್ವಾಮಿಯವರು ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಬದಿಗೊತ್ತಿ ನೈಸ್, ಮೈನ್ಸ್, ಏಟ್ರಿಯಾ ಹಗರಣಗಳ ಬಗ್ಗೆ 40 ತಿಂಗಳು ಚರ್ಚಿಸಿ ಮುಕ್ಕಿದ್ದಲ್ಲದೆ, ಸಾಲದೆ, ಕೊನೆಗೆ ಇಸ್ಕಾನ್ ಭಿಕ್ಷಾಪಾತ್ರೆಯನ್ನು ಸಹ ಬಿಡದೆ ಮುಕ್ಕಿದರು. ರಾಜ್ಯ ಮಟ್ಟದಲ್ಲಿ ಮುಕ್ಕುವ ಭರದಲ್ಲಿ ಕ್ಷೇತ್ರದ ಹಿತವನ್ನೇ ಮರೆತವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕ್ಷೇತ್ರದ ಅಭಿವೃದ್ಧಿಯಾಗದಿದ್ದರೂ, ತಮ್ಮ ವೈಯಕ್ತಿಕ ಅಭಿವೃದ್ಧಿಯನ್ನು ಬಹಳ ಯಶಸ್ವಿಯಾಗಿ ಮಾಡಿಕೊಂಡಿದ್ದಾರೆ. ತಾಲೂಕಿನ ಕುಡಿಯುವ ನೀರಿನ ಯೋಜನೆ ಬಗ್ಗೆ ಚೊಂಬಲ್ಲಿ ತರಬೇಕೆಂದು ಹಗುರವಾಗಿ ಮಾತನಾಡಿದ ಸನ್ಮಾನ್ಯ ಜೆ.ಸಿ.ಮಾಧುಸ್ವಾಮಿಯವರು ಯೋಜನೆ ಮಂಜೂರಾಗಿ ಕಾಮಗಾರಿ ಪ್ರಾರಂಭವಾದಾಗ ಸದರಿ ಯೋಜನೆ ಯಡಿಯೂರಪ್ಪನವರು ಜಾರಿಗೊಳಿಸಿದ ಯೋಜನೆ, ಆದ್ದರಿಂದ ಇದರ ಯಶಸ್ಸು ಕೆಜೆಪಿಗೆ ಸಲ್ಲಬೇಕೆಂಬ ಸಬೂಬು ಹೇಳುತ್ತಿದ್ದಾರೆ.
ಬೇರೆಯವರ ಶ್ರಮದ ಸಾಧನೆಯನ್ನೇ ತಮ್ಮ ಸಾಧನೆಯ ಮಾನದಂಡವನ್ನಾಗಿ ಬಳಸುತ್ತಿರುವ ಇವರ ಸಾಧನೆ ಕ್ಷೇತ್ರಕ್ಕೆ ಶೂನ್ಯ. ಯೋಜನೆಗಾಗಿ ಹೋರಾಟದ ಪ್ರಾರಂಭದ ದಿನಗಳಲ್ಲಿ ಗಡಬನಹಳಳ್ಳಿ ನಾಲೆಯ ಬಳಿಯಿಂದ ಸಾಸಲು ಪೆಮ್ಮಲ ದೇವರ ಹಳ್ಳಿ ಕೆರೆಯವರಗೆ ಪಾದಯಾತ್ರೆ ಮಾಡಿದಾಗ ನನ್ನೊಂದಿಗಿದ್ದ ಕೆಲವು ಸ್ನೇಹಿತರು ಈಗ ಮಾಜಿ ಶಾಸಕರ ಪಾಳೆಯದಲ್ಲಿದ್ದಾರೆ. ಬೇಕಾದರೆ ಅವರು ನನ್ನ ಹಳೆಯ ಸ್ನೇಹಿತರನ್ನು ಕೇಳಿ ವಿಷಯ ತಿಳಿದು ಮಾತನಾಡುವುದು ಆರೋಗ್ಯ.
ಪಟ್ಟಣದ ಕುಡಿಯುವ ನೀರಿನ ಯೋಜನೆಯ ಶ್ರೇಯಸ್ಸು ನನ್ನ ತಂದೆ ದಿ.ಎನ್. ಬಸವಯ್ಯನವರಿಗೆ ಸಲ್ಲಬೇಕು. ಕೆಸಿಪಿಯಿಂದ ಗೆದ್ದ ಅವರು ನೀರಿಗಾಗಿ ಸ್ವಾಭಿಮಾನ ಬಿಟ್ಟು, ದೇವೇಗೌಡರಲ್ಲಿ ಷರತ್ತು ವಿಧಿಸಿ ಪಕ್ಷವನ್ನೇ ತ್ಯಜಿಸುವ ತೀರ್ಮಾನ ಕೈಗೊಂಡರು. ಈ ಮೂಲಕ ಇಂದು ಪಟ್ಟಣದ ನೀರಿನ ಬವಣೆಯನ್ನು ತಪ್ಪಿಸಿದವರು ನನ್ನ ತಂದೆ ದಿವಂಗತ ಬಸವಯ್ಯನವರು. ಇಂತಹ ಒಂದು ಸಾಧನೆಯನ್ನು ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿಯವರು ಜನತೆಯ ಮುಂದಿಡಲಿ. ದಕ್ಷ, ಪ್ರಾಮಾಣಿಕ, ಸದನ ಶೂರ ಎಂದೆಲ್ಲಾ ಬಿರುದು ಪಡೆದಿರುವ ಇವರಿಂದ ಕ್ಷೇತ್ರಕ್ಕೆ ಬಂದಿರುವ ಭಾಗ್ಯವಾದರು ಏನು ಎಂದು ಅವರು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

