ಡಿ. ನಾಗರಾಜಯ್ಯ ಜೆಡಿಎಸ್ ಅಧಿಕೃತ ಅಭ್ಯರ್ಥಿ
ಕ.ಪ್ರ. ವಾರ್ತೆ ಕುಣಿಗಲ್ ಏ.17
ಸೋಮವಾರ ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡರಿಗೆ ಬಿ ಫಾರಂ ನೀಡಿದ್ದ ಜೆಡಿಎಸ್ ಪಕ್ಷದ ವರಿಷ್ಠರು, ಬುಧವಾರ ಮಾಜಿ ಸಚಿವ ಡಿ.ನಾಗರಾಜಯ್ಯನವರಿಗೆ ಸಿ ಫಾರಂ ನೀಡುವ ಮೂಲಕ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದರು.
ಹೈಕಮಾಂಡ್ನ ಹೈಡ್ರಾಮಕ್ಕೆ ಮಾಜಿ ಶಾಸಕರ ಬೆಂಬಲಿಗರು ಪರದಾಡುವಂತಾಗಿ, ಹಲವು ಅಚ್ಚರಿಯ ಬೆಳವಣಿಗೆಗ ಕಾರಣವಾಯಿತು.
ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಕಳೆದ ನಲವತ್ತು ವರ್ಷಗಳಿಂದಲೂ ಹಲವು ಏಳು ಬೀಳುಗಳ ನಡುವೆ ಮಾ ಜಿಸಚಿವ ಡಿ.ನಾಗರಾಜಯ್ಯ ಸದೃಢವಾಗಿ ಕಟ್ಟಿಬೆಳೆಸಿಕೊಂಡು ಬಂದಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ ಎಸ್.ಪಿ. ಮುದ್ದಹನುಮೇಗೌಡ ಜೆಡಿಎಸ್ ಸೇರ್ಪಡೆಗೊಂಡು, ಇತ್ತೀಚೆಗೆ ನಡೆದ ಪುರಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬಿ ಫಾರಂ ನೀಡುವ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ತಾವೇ ಅಧಿಕೃತ ಅಭ್ಯರ್ಥಿ ಎಂಬ ಸಂದೇಶ ಸಹ ನೀಡಿದ್ದರು.
ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಹ ಪುರಸಭೆ ಚುನಾವಣಾ ಪ್ರಚಾರಕ್ಕೆ ಬಂದಾಗ ಪೂರಕ ಹೇಳಿಕೆ ನೀಡಿ, ವಿಧಾನಸಭಾ ಚುನಾವಣೆ ಘೋಷಣೆಯಾದಾಗ ಹಲವು ಗೊಂದಲಗಳ ನಡುವೆ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರಿಗೆ ಕಳೆದ 15ರಂದು ಬಿ ಫಾರಂ ನೀಡಿ ಕಳಿಸಿದ್ದರು. ಸೋಮವಾರದಂದೆ ಎಸ್ಪಿಎಂ ನಾಮಪತ್ರ ಸಲ್ಲಿಸಿ, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡರು. ಆದರೆ ಪಕ್ಷದ ರಾಜ್ಯಾಧ್ಯಕ್ಷ ನೀಡಿದ ಬಿ ಫಾರಂ ಪ್ರಭಾವ, ಬುಧವಾರ ವೇಳೆಗೆ ಮುದ್ದುಹನುಮೇಗೌಡರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪಟಾಕಿ ಸಿಡಿಸಿ ಹರ್ಷ: ಕಾರಣ, ಸೋಮವಾರ ಮಾಜಿ ಶಾಸಕರಿಗೆ ನೀಡಿದ್ದ ಬಿ ಫಾರಂ ಬದಲಿಗೆ ಬುಧವಾರ ಮಾಜಿ ಸಚಿವ ಡಿ.ನಾಗರಾಜಯ್ಯನವರಿಗೆ ಸಿ ಫಾರಂ ನೀಡಿದ್ದು, ನಾಗರಾಜಯ್ಯ ಬೆಂಬಲಿಗರ ಹರ್ಷಕ್ಕೆ ಪಾರವೇ ಇಲ್ಲದಂತಾಗಿ, ಮಾಜಿ ಸಚಿವರಿಗೆ ಸಿ ಫಾರಂ ದೊರೆತ ವಿಷಯ ತಾಲೂಕಿನಾದ್ಯಂತ ಮಿಂಚಿನಂತೆ ಹರಡಿ ಸಾವಿರಾರು ಕಾರ್ಯಕರ್ತರು ಪಟ್ಟಣಕ್ಕೆ ಆಗಮಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಾಮಪತ್ರ ಸಲ್ಲಿಸಿ ಹೊರಬಂದ ಮಾಜಿ ಸಚಿವರನ್ನು, ಪುತ್ರ ಜಗದೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್ ಹೆಗಲಮೇಲೆ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಬಿಸಿ ತುಪ್ಪ: ಇತ್ತ ನಾಗರಾಜಯ್ಯನವರ ಬೆಂಬಲಿಗರು ಸಿಫಾರಂ ಪಡೆದು ಸಮರೋತ್ಸಾಹದಲ್ಲಿ ತೊಡಗಿದರೆ, ಅತ್ತ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರು ಬಿಸಿ ತುಪ್ಪ ನುಂಗಲಾರದೆ, ಉಗಿಯಲಾರದ ಸ್ಥಿತಿಯಲ್ಲಿದ್ದರೆ, ಇವರ ಬೆಂಬಲಿಗರು, ಸಮರಸಿದ್ಧತೆಗಳನ್ನು ಅರ್ಧಕ್ಕೆ ನಿಲ್ಲಿಸಿ, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಸಿದ್ಧತೆ ನಡೆಸಿದರು.
ಮಾಜಿ ಶಾಸಕರು ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಪ್ರತಿಕ್ರಿಯಿಸಲು ಆಸಕ್ತಿ ತೋರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

