ತುಮಕೂರು

ಗುರುವನ್ನು ಮೀರಿ ಬೆಳೆಯಿರಿ

Published On :

ಕನ್ನಡಪ್ರಭ ವಾರ್ತೆ    ತುಮಕೂರು    ಏ.18
ಶಿಷ್ಯ ಗುರುವನ್ನು ಮೀರಿಸಿದಾಗ ಗುರು ಅತ್ಯಂತ ಹೆಚ್ಚು ಸಂತೋಷಪಡುತ್ತಾನೆ. ಗುರುವನ್ನು ಮೀರಿ ಶಿಷ್ಯ ಬೆಳೆಯುವುದೇ ಆತ ಸಲ್ಲಿಸಬಹುದಾದ ಶ್ರೇಷ್ಠ ಗುರುದಕ್ಷಿಣೆ ಎಂದು  ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.
ವಿಶ್ವವಿದ್ಯಾನಿಲಯ ಕಲಾಛ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಜವಾದ ಅಧ್ಯಾಪಕ ಶಿಷ್ಯನ ಯಶಸ್ಸಿನಲ್ಲಿ ತನ್ನ ಬದುಕಿನ ಯಶಸ್ಸನ್ನು ಕಂಡುಕೊಳ್ಳುತ್ತಾನೆ ಎಂದರು.
ಗುರುವಿನ ಗುಲಾಮನಾಗುವತನಕ  ದೊರೆಯದಣ್ಣ ಮುಕುತಿ ಎಂದು ಪುರಂದರದಾಸರು ಹೇಳಿದರಾದರೂ, ಸ್ವತಃ ಅವರ ಗುರುಗಳಾದ ವ್ಯಾಸರಾಜರೇ ದಾಸರೆಂದರೆ ಪುರಂದರದಾಸರಯ್ಯಾ ಎಂದು ಕೊಂಡಾಡಿದ್ದಿದೆ. ಗುರುವಿನ ಸಮಾನನಾಗುವತನಕ ದೊರೆಯದಣ್ಣ ಮುಕುತಿ ಎಂಬ ಅಡಿಗರ ಮಾತು ನಮಗೆ ಆದರ್ಶವಾಗಬೇಕು ಎಂದರು.
ಕಿವಿಮಾತು: ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವುದು ಒಟ್ಟು ಕಲಿಕೆಯ ಶೇ. 10 ಭಾಗ ಮಾತ್ರ. ಉಳಿದ ತೊಂಬತ್ತು ಪಾಲು ತರಗತಿಯ ಹೊರಗೆ ಕಲಿಯುವುದೇ ಇರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ವಿದ್ಯಾರ್ಥಿ ಮತ್ತು ಅಧ್ಯಾಪಕ ಸದಾ ಜ್ಞಾನ ಹಾಗೂ ಕೌಶಲಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಎಚ್ಚೆಸ್ವಿ ಕಿವಿಮಾತು ಹೇಳಿದರು.
ಸನ್ಮಾನ: ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಕಲಾವಿದ ಮಲ್ಲಿಕಾರ್ಜುನ ಕೆಂಕೆರೆ ಹಾಗೂ ಕ್ರೀಡಾಕ್ಷೇತ್ರದ ಸಾಧನೆಗಾಗಿ ಚಂಪಾರಾಣಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು, ಪಿಎಚ್‌ಡಿ ಪದವಿ ಪಡೆದಿರುವ ಡಾ. ಗುಂಡೇಗೌಡ ಹಾಗೂ ಡಾ. ಮೌನೇಶ್ವರ ಶ್ರೀನಿವಾಸರಾವ್ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಟಿ. ಎನ್. ಹರಿಪ್ರಸಾದ್, ಸಾಂಸ್ಕೃತಿಕ ಕಾರ್ಯದರ್ಶಿ ಡಾ. ಎಸ್. ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.