ತುಮಕೂರು

ರಾಜಕೀಯ ವಿದ್ಯಮಾನದಿಂದ ನನಗೆ ಆಘಾತವಾಗಿದೆ: ಎಸ್ಪಿಎಂ

Published On :

ಕ.ಪ್ರ. ವಾರ್ತೆ   ,  ಕುಣಿಗಲ್   ,  ಏ.21
ತಾಲೂಕಿನ ರಾಜಕಾರಣದಲ್ಲಿ ಕೆಲದಿನಗಳಿಂದ ನಡೆದ ವಿದ್ಯಾಮಾನಗಳಿಂದ ನನ್ನ ಮನಸ್ಸು ಜರ್ಝರಿತಗೊಂಡಿದ್ದು, ಮುಂದಿನ ಒಂದು ತಿಂಗಳ ಕಾಲ ರಾಜಕೀಯ ಜೀವನದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ ಘೋಷಿಸಿದರು.
ಭಾನುವಾರ, ಹೆಬ್ಬೂರಿನ ತಮ್ಮ ತೋಟದ ಮನೆಯಲ್ಲಿ ಅಭಿಮಾನಿಗಳನ್ನು, ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ನ್ಯಾಯಾಧೀಶರೊಬ್ಬರಾಗಿ ಸೇವೆ ಸಲ್ಲಿಸಿದವರೊಬ್ಬರು ಶಾಸಕರಾಗಿ ಆಯ್ಕೆಯಾದ ಉದಾಹರಣೆಗಳಿಲ್ಲ. ತಾವು ನ್ಯಾಯಾಧೀಶರಾಗಿ ಸೇವೆ ಬಿಟ್ಟು, ರಾಜಕೀಯ ಪ್ರವೇಶಿಸಿ, ಶಾಸಕರಾಗಿದ್ದು, ಕಳೆದ 26 ವರ್ಷಗಳ ರಾಜಕೀಯ ಜೀವನದಲ್ಲಿ ನಲಿವುಗಳಿಗಿಂತ, ನೋವನ್ನೆ ಹೆಚ್ಚಾಗಿ ಉಂಡಿದ್ದು, ಹಲವು ಆಘಾತಗಳನ್ನು ಸಹಿಸಿ, ಸಹಿಸಿ, ಆಘಾತಗಳು ಸಾಮಾನ್ಯವಾಗಿರುವ ಕಾರಣ, ಇತ್ತೀಚಿನ ವಿದ್ಯಾಮಾನಗಳಿಂದ ಕುಗ್ಗಿಲ್ಲ.
ಹಿಂಜರಿಯುವುದಿಲ್ಲ: ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಲು ಇಚ್ಛಿಸುವುದಿಲ್ಲ. ಮನಸು ತೀವ್ರ ಜರ್ಝರಿತಗೊಂಡಿರುವ ಕಾರಣ ಇಂದಿನಿಂದ ಒಂದು ತಿಂಗಳಕಾಲ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ ಅವರು, ತಾವು ಎಂದಿಗೂ ಫಲಾಯನವಾದಿಯಲ್ಲ. ಹೋರಾಟ ಮನೋಭಾವದ ಪ್ರವೃತ್ತಿಹೊಂದಿದ್ದು, ನನ್ನನ್ನು ನಂಬಿದ ಕಾರ್ಯಕರ್ತರು, ಮುಖಂಡರಿಗೆ ಹಾಗೂ ಸಾರ್ವಜನಿಕರಿಗೆ  ಯಾವುದೇ ತೊಂದರೆಯಾದರೂ ಬೀದಿಗಿಳಿದು ಹೋರಾಟ ನಡೆಸುವಲ್ಲಿ ಹಿಂಜರಿಯುವುದಿಲ್ಲ. ರಾಜಕಾರಣದಲ್ಲಿ ತಮ್ಮದೇ ಆದ ಸಿದ್ಧಾಂತ, ಮೌಲ್ಯಗಳಿಗೆ ಕಟ್ಟುಬಿದ್ದು ಕಾರಣ, ಎಂತಹ ಪರಿಸ್ಥಿತಿಯಲ್ಲೂ ತತ್ವ, ಸಿದ್ಧಾಂತಗಳನ್ನು ತೊಡೆದು, ಕೀಳು ಮಟ್ಟದ ರಾಜಕಾರಣ ಮಾಡಿಲ್ಲ, ತಮ್ಮ ಜೀವಮಾನದ ಕೊನೆವರೆಗೂ ಕುಣಿಗಲ್ ಕ್ಷೇತ್ರವೇ ತಮ್ಮ ಕರ್ಮಭೂಮಿ ಎಂದರು.
ಚುನಾವಣೆಯಲ್ಲಿ ತಟಸ್ಥ: ಪ್ರಸಕ್ತ ಚುನಾವಣೆಗಳಲ್ಲಿ, ತಾವಂತೂ ತಟಸ್ಥವಾಗಿ ಉಳಿಯಲಿದ್ದು, ಬೆಂಬಲಿಗರು ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ. ಆದರೆ, ಇನ್ನೊಂದು ತಿಂಗಳ ನಂತರ ತಾವು ಸಕ್ರಿಯ ರಾಜಕಾರಣಕ್ಕೆ ಮರಳಿ, ಜನಪರ ಸೇವೆಗೆ ತೊಡಗಿಕೊಳ್ಳುವುದಾಗಿ ತಿಳಿಸಿ, ಅಲ್ಲಿಯವರೆಗೂ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಲಿದ್ದು, ಎಲ್ಲರೂ ಸಹಕರಿಸುವಂತೆ, ಯಾವುದೇ ತರಹದ ಒತ್ತಡ ಮಾಡದಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.