ತುಮಕೂರು

ಬಿಸಿಲ ಬೇಗೆ ಲೆಕ್ಕಿಸದೆ ಸ್ಪರ್ಧಿಗಳ ಮತಯಾಚನೆ

Published On :

ಕನ್ನಡಪ್ರಭ ವಾರ್ತೆ   ಮಧುಗಿರಿ   ಏ.23
ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ  ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಟ್ಟಿ ಕೊಂಡಿರುವ  ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿಗಳು ಬೇಸಿಗೆ ಬಿಸಿಲು ಲೆಕ್ಕಿಸದೇ ಪ್ರತಿ  ಹಳ್ಳಿ ಹಳ್ಳಿಗೆ ತೆರಳಿ ಮತ ಕೋರುವ ಮೂಲಕ ಪ್ರಚಾರದ ಕಾವು ರಂಗೇರಿದೆ.
ಅಭಿವೃದ್ಧಿ ವಿಚಾರದಲ್ಲಿ ಮಾತ್ರ   ಅಕ್ಷರಶಃ ಮಧುಗಿರಿ ವಂಚಿತವಾಗಿದೆ.  ಬೇಸಿಗೆ ರಣ ಸುಡು ಬಿಸಿಲು, ಶುದ್ಧ ಕುಡಿವ ನೀರು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು ರಸ್ತೆಗಳಲ್ಲಿ ಸಂಪೂರ್ಣ ಡಾಂಬರು ಕಿತ್ತು ಹೋಗಿ ರಾಜಕಿಯ ನಾಯಕರ ಬಿಳಿ ಬಟ್ಟೆ  ಕೆಂಧೂಳಿನಲ್ಲಿ ಮಿಂದಿವೆ.  ಮತದಾರನ ಮನೆ ಮನೆಗೆ ಹೋಗಿ  ಮತ ಕೋರುವ ದೃಶ್ಯ ಕಂಡು ಬಂದಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ: 33 ವರ್ಷ ಕಾಲ ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ  ಕ್ಷೇತ್ರ  ಈಗಿನ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಾಯಕತ್ವದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಸಾಮಾನ್ಯ ಕ್ಷೇತ್ರವಾದ  ಬಳಿಕ ಪ್ರಥಮ ಬಾರಿಗೆ  ಮಾಜಿ ಮಂತ್ರಿ ಸಿ.ಚನ್ನಿಗಪ್ಪ ಪುತ್ರ ಡಿ.ಸಿ.ಗೌರಿಶಂಕರ್ ಜೆಡಿಎಸ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ವಿರುದ್ಧ  ಕೂದಲೆಳೆ ಅಂತರದಲ್ಲಿ  ಗೆದ್ದಿದ್ದರು. ನಂತರ ಡಿ.ಸಿ.ಗೌರಿಶಂಕರ್ ಆಪರೇಷನ್ ಕಮಲಕ್ಕೆ ಸಿಕ್ಕಿ ರಾಜಿನಾಮೆ ನೀಡಿದರು.
2008ಲ್ಲಿ ನಡೆದ  ಉಪಚುನಾವಣೆಯಲ್ಲಿ  ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾಕುಮಾರಸ್ವಾಮಿ ಅವರನ್ನು ಜೆಡಿಎಸ್ ಕಣಕ್ಕಿಳಿಸಿತು. ಕಾಂಗ್ರೆಸ್‌ನಿಂದ ಕೆ.ಎನ್.ರಾಜಣ್ಣ ಹಾಗೂ ಬಿಜೆಪಿಯಿಂದ ಮಾಜಿ ಮಂತ್ರಿ ಸಿ. ಚನ್ನಿಗಪ್ಪ ಸ್ಪರ್ಧಿಸಿದ್ದರು. ಈ ಇಬ್ಬರು ಜನತಾ ಪರಿವಾರದಲ್ಲಿದ್ದವರು. ವರಿಷ್ಠರ  ವಿರುದ್ಧ ಬಂಡೆದ್ದ ಈ ನಾಯಕರನ್ನು ಮಣಿಸಲೆಂದೇ  ಮಾಜಿ ಪ್ರಧಾನಿ ದೇವೇಗೌಡರು ತನ್ನ ಸೊಸೆ ಅನಿತಾ ಅವರನ್ನು ಕಣಕ್ಕಿಳಿಸಿ ಗೆದ್ದಿದ್ದು ಇತಿಹಾಸ.
ಅನಿತಾ ಕಣದಲ್ಲಿಲ್ಲ: ಆದರೆ, ಈಗ ಅನಿತಾಕುಮಾರಸ್ವಾಮಿ  ಇಲ್ಲಿ ಸ್ಪರ್ಧಿಸಿಲ್ಲ. ಈಗ ಕಾಂಗ್ರೆಸ್‌ನಿಂದ ಕೆ.ಎನ್.ರಾಜಣ್ಣ, ಜೆಡಿಎಸ್‌ನಿಂದ ನಿವೃತ್ತ  ಐಎಎಸ್ ಅಧಿಕಾರಿ ವೀರಭದ್ರಯ್ಯ, ಬಿಜೆಪಿಯಿಂದ ಬಿ.ಸುಮಿತ್ರಾದೇವಿ ಹಾಗೂ ಬಿಎಸ್ಪಿಯಿಂದ ಕೋರಮಂಗಲ ಮುನಿಯಪ್ಪ, ಬಿಎಸ್ ಆರ್ ಕಾಂಗ್ರೆಸ್‌ನಿಂದ ಹಳ್ಳಿಕಾರ್ ಕೃಷ್ಣ ಮತ್ತಿತರೆ 22 ಅಭ್ಯರ್ಥಿಗಳು  ಅಂತಿಮ ಕಣದಲ್ಲಿದ್ದಾರೆ.   
ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ ಎರಡು ಸಲ ಸೋತರೂ ಕೂಡ ಕ್ಷೇತ್ರ ಬಿಡದೇ ಜನ ಸಾಮಾನ್ಯರ ನಡುವೆ ಬೆರತು ಮತದಾರನ ಮನದಾಳದಲ್ಲಿ ಬೇರೂರಿದ್ದಾರೆ. ಜತೆಗೆ ಕಾಂಗ್ರೆಸ್‌ಗೆ ಅನ್ಯ ಪಕ್ಷದ ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರುತ್ತಿರುವುದು ವರದಾನ ಏನ್ನಬಹುದು.  ಕ್ಷೇತ್ರದಾದ್ಯಂತ  ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಶ್ರೀರಕ್ಷೆ: ಜೆಡಿಎಸ್ ಅಭ್ಯರ್ಥಿ ಎಂ.ವಿ. ವೀರಭದ್ರಯ್ಯ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಅವರಿಗೆ ಕಳೆದ  ಸಾರ್ವತ್ರಿಕ ಮತ್ತು ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿರುವುದು ಶ್ರೀರಕ್ಷೆ. ಅಲ್ಲದೆ   40ಸಾವಿರಕ್ಕೂ ಅಧಿಕ ಒಕ್ಕಲಿಗ  ಸಮುದಾಯದ ಮತಗಳು  ಕ್ಷೇತ್ರದಲ್ಲಿದೆ. ಮತ್ತಿತರೆ  ಸಮುದಾಯಗಳ ಮೇಲೆ ಕಣ್ಣಿಟ್ಟು ವೀರಭದ್ರಯ್ಯ ಮನೆ ಮನೆಗೆ ತೆರಳಿ ಉತ್ಸಾಹದಿಂದ ಮತ ಕೋರುತ್ತಿದ್ದಾರೆ.
ಬಿಜೆಪಿ ಬಿ. ಸುಮಿತ್ರಾದೇವಿ ಕೂಡ ಒಕ್ಕಲಿಗ ವರ್ಗಕ್ಕೆ ಸೇರಿದ ಹೆಣ್ಣು ಮಗಳಾಗಿದ್ದು ಮತ ಕೋರುತ್ತಿದ್ದಾರೆ.   
ಬಿಎಸ್ಪಿ ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ದಲಿತ ಮತಗಳ ಮೇಲೆ ಕಣ್ಣಿಟ್ಟು ಮತ ಯಾಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದರೂ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಗಮನ ಸೆಳೆದಿವೆ ಎನ್ನವುದನ್ನು ಬಿಟ್ಟರೆ ಇನ್ನುಳಿದ ಕೆಲವರು  ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಒಟ್ಟಿನಲ್ಲಿ ಚುನಾವಣೆ ಕಾವು, ಬೇಸಿಗೆ ರಣ ಬಿಸಿಲು ರಾಜಕಾರಣಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.