ಬಿಜೆಪಿ ನಾಯಕರಿಂದ ಭ್ರಷ್ಟರಿಗೆ ಶ್ರೀರಕ್ಷೆ
ಕ.ಪ್ರ.ವಾರ್ತೆ , ತುಮಕೂರು , ಏ.26
ಜನರ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಎಚ್ಚರಿಕೆ ನೀಡಿದ್ದಾರೆ.
ಅವರು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತುಮಕೂರು ಜಿಲ್ಲಾ 11 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕೆಂಬುದು ತಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಆಶಯ. ಈ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರಿಗೆ ಪಕ್ಷದಲ್ಲಿ ಸ್ಥಾನ ನೀಡುವುದಿಲ್ಲ. ಮಾತ್ರವಲ್ಲ, ಶಾಸಕರಾದವರು ಯುವ ಪೀಳಿಗೆಯೊಂದಿಗೆ ಕೆಲಸ ಮಾಡುವ ಮನಸ್ಸು ಮಾಡ ಬೇಕು ಎಂದು ತಾಕೀತು ಮಾಡಿದರು.
ಬಿಜೆಪಿ ಹೊಸ ಇತಿಹಾಸ: ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರವೆಸಗಿದವರನ್ನು ಜೈಲಿಗೆ ಕಳುಹಿಸಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರವು ಭ್ರಷ್ಟರಿಗೆ ಯಾವುದೇ ಶಿಕ್ಷೆ ನೀಡದೆ ಸರ್ಕಾರದಲ್ಲೇ ಉಳಿಸಿಕೊಂಡು ಹೊಸ ಇತಿಹಾಸ ನಿರ್ಮಾಣ ಮಾಡಿದೆ ಎಂದು ವ್ಯಂಗ್ಯವಾಡಿದರು.
ಇಡೀ ದೇಶಕ್ಕೇ ಆದರ್ಶವಾಗಿದ್ದ ಕರ್ನಾಟಕ ರಾಜ್ಯ ಇಂದು ಭ್ರಷ್ಟಾಚಾರಕ್ಕೆ ಕುಖ್ಯಾತಿ ಗಳಿಸಿದೆ. ಇದಕ್ಕೆ ಕಾರಣ ಬಿಜೆಪಿ ಸರ್ಕಾರ. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಬೆಂಗಳೂರಿನಂತಹ ನಗರ ಇರಬೇಕು ಎಂಬ ಆಶಯ ಇತ್ತು. ಆದರೆ ಈಗ ಬೆಂಗಳೂರು ಎಂದರೆ ಭ್ರಷ್ಟಾಚಾರದ ಕೂಪ ಎಂಬ ಕುಖ್ಯಾತಿಗೆ ಪಾತ್ರವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮಿಂಚುತ್ತಿದೆ. ವಿಶ್ವ ದಾಖಲೆಯನ್ನೂ ನಿರ್ಮಿಸಿದೆ. ರಾಜ್ಯ ಸರ್ಕಾರ ಕಳೆದ 5 ವರ್ಷದ ಅವಧಿಯಲ್ಲಿ ಜನರ ಸಮಸ್ಯೆ ಕುರಿತು ಮಾತನಾಡಲಿಲ್ಲ. ಕೆಲಸವನ್ನೂ ಮಾಡಲಿಲ್ಲ. ಅವರು ಚಿಂತಿಸಿದ್ದೆಲ್ಲಾ ಜನರ ಹಣವನ್ನು ಯಾವ ರೀತಿ ಲೂಟಿ ಹೊಡೆಯಬೇಕು ಎಂಬುದರ ಕುರಿತು. ಆದರೆ ಕೇಂದ್ರ ಯುಪಿಎ ಸರ್ಕಾರ ಜನರ ಹಣ ಜನರ ಕೈಗೆ ಎಂಬ ನೀತಿ ಜಾರಿಗೆ ತರುವುದರ ಮೂಲಕ ಹಣ ಮದ್ಯದಲ್ಲೇ ಸೋರಿಕೆಯಾಗದಂತೆ ನೋಡಿಕೊಂಡಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಭ್ರಷ್ಟ ಸರ್ಕಾರ ಅಧಿಕಾರ ನಡೆಸಿದರೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜನಪರ ಆಡಳಿತ ನೀಡುತ್ತಿದೆ.ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ, ನೇರ ನಗದು, ರೈತರ ಸಾಲ ಮನ್ನಾ ಸೇರಿದಂತೆ ಹಲವು ಜನಪರ ಕಾರ್ಯಕ್ರಮ ತಂದು ಜನತೆಗೆ ನೆರವಾಗಿದೆ ಎಂದರು.
ರೈತರ ಸಾಲ ಮನ್ನಾ: ರೈತರ ಬೆವರಿನ ಋಣ ತೀರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದರು.
ದೇಶದ ಯುವ ಪೀಳಿಗೆಯೊಂದಿಗೆ ಕೆಲಸ ಮಾಡುವ ಇಚ್ಛೆ ತಮಗೆ ಇದೆ. ರಾಜ್ಯ ಸರ್ಕಾರ ಆಡಳಿತವನ್ನು ಹಳಿ ತಪ್ಪಿಸಿದ್ದು ಸರಿ ದಾರಿಗೆ ತರುವ ಜವಾಬ್ದಾರಿ ಯುವ ಜನತೆ ಹಾಗೂ ಮಹಿಳೆಯರ ಮೇಲಿದೆ. ಈ ನಿಟ್ಟಿನಲ್ಲಿ ಜನತೆಯ ಸಮಸ್ಯೆಗೆ ಸ್ಪಂದಿಸಲು ಕಟಿಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದರ ಮೂಲಕ ಹದಗೆಟ್ಟ ರಾಜ್ಯ ಆಡಳಿತವನ್ನು ಸರಿದಾರಿಗೆ ತರಲು ಸಹಕರಿಸುವಂತೆ ಮನವಿ ಮಾಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ , ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

