ಚುನಾವಣಾಸಿಬ್ಬಂದಿಗೆವಾಹನ ವ್ಯವಸ್ಥೆ
ಚಿಕ್ಕನಾಯಕನಹಳ್ಳಿ: ತಾಲೂಕಿನಿಂದ ಬೇರೆ ಸ್ಥಳಗಳಿಗೆ ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿಗಳು ತಮ್ಮತಮ್ಮ ಕ್ಷೇತ್ರಗಳಲ್ಲಿ ಏರ್ಪಡಿಸಿರುವ ಚುನಾವಣಾ ತರಬೇತಿಗೆ ತೆರಳಲು ಪಟ್ಟಣದಿಂದ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದರು. ಚುನಾವಣಾ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ, ಇಲ್ಲಿಂದ ಜಿಲ್ಲೆಯ 11 ಬೇರೆಬೇರೆ ತಾಲೂಕುಗಳಿಗೆ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಕ್ಷೇತ್ರಗಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಎರಡನೇ ಹಂತದ ತರಬೇತಿಗೆ ಹಾಜರಾಗ ಬೇಕಾಗಿರುವುದರಿಂದ ಅವರಿಗೆ, ಈ ಹಿಂದೆ ಕರೆದ ಸಭೆಯಲ್ಲಿ ವಾಹನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿರಲಿಲ್ಲ. 29 ರಂದು ಬೆಳಿಗ್ಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿಯಿಂದ 29 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿಗಳು ಅಂದು ಬೆಳಿಗ್ಗೆ 5.00 ಗಂಟೆಗೆ ಸರಿಯಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಬರಬೇಕಾಗಿ ತಿಳಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ 1348 ಸಿಬ್ಬಂದಿಗಳುನ್ನು ತರಬೇತಿ ಸ್ಥಳಕ್ಕೆ ಕರೆದುಕೊಂಡು ಹೋಗಿ ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗ ಬೇಕಾಗಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ ಉಪಸ್ಥಿತರಿದ್ದರು.
'ಕವಿಗೆ ಸಾಮಾಜಿಕ ಪ್ರಜ್ಞೆ ಅಗತ್ಯ'
ತುಮಕೂರು: ಸಮಾಜಮುಖಿ ಲೋಕಪ್ರಜ್ಞೆಯೊಂದಿಗೆ, ಏಕಾಗ್ರತೆಯೊಂದಿಗೆ ಕಾವ್ಯ ರಚಿಸಿದರೆ ಉತ್ತಮ ಕವಿಯಾಗಲು ಸಾಧ್ಯ. ಅಂತಹ ಸಾಧ್ಯತೆಗಳನ್ನು ಮೈಗೂಡಿಸಿಕೊಂಡು ರಚಿಸಿದ ಕವಿತೆಗಳ ಸಂಕಲನ ರಾಗಿಹೊಲ ಕೃತಿಯಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋಮು ಭಾಸ್ಕರಾಚಾರ್ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಕಸಾಪ ಹಾಗೂ ತಿಪಟೂರಿನ ಮೇಗಳ ಮನೆ ಪ್ರಕಾಶನ ಆಶ್ರಯದಲ್ಲಿ ಕವಿ ಸಂತೋಷ ಮಡೆನೂರು ಅವರ ರಾಗಿಹೊಲ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹಿರಿಯ ಸಾಹಿತಿ ಗೌಡನಕಟ್ಟೆ ತಿಮ್ಮಯ್ಯ ಮಾತನಾಡಿದರು. ವಿಮರ್ಶಕ ಡಾ. ರವಿಕುಮಾರ ನೀಹ ಅವರು ಕೃತಿ ಪರಿಚಯಿಸಿದರು. ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ಎಂ.ಎಚ್.ಬಿ. ಮೈಕ್ರೋ ಕಾರ್ಖಾನೆ ಮುಖ್ಯಸ್ಥ ವೆಂಕಟೇಶ್ಪ್ರಸಾದ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕರ್ತರೆ ನಮ್ಮ ನಾಯಕರು: ಮಂಜುನಾಥ್
ಶಿರಾ: ಪಕ್ಷದ ಕಾರ್ಯಕರ್ತರೆ ನಮ್ಮ ನಾಯಕರು ಎಂದು ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಕೆ. ಮಂಜುನಾಥ್ ತಿಳಿಸಿದರು. ಅವರು ತಾಲೂಕಿನ ಹಾರೋಗೆರೆ ಹಾಗೂ ರಂಗಾಪುರ ಗ್ರಾಮದಲ್ಲಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡುತ್ತಾ, ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಉತ್ತಮವಾದ ಯೋಜನೆ ಮತ್ತು ಅನುದಾನ ನೀಡಿದೆ. ಆದ್ದರಿಂದ ನಮ್ಮ ಪಕ್ಷಕ್ಕೆ ಮತ ನೀಡುವುದರ ಮೂಲಕ ನನ್ನನ್ನೂ ಗೆಲ್ಲಿಸಿ ಎಂದರು. ಮೊದಲು ಈ ಕ್ಷೇತ್ರದ ಜನತೆಯ ನೋವು ನಲಿವುಗಳಿಗೆ ಆದ್ಯತೆ ನೀಡುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಮತಯಾಚನೆ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬರಗೂರು ತಿಪ್ಪೇಸ್ವಾಮಿ ಹಾಗೂ ಮತ್ತಿತರರು ಹಾಜರಿದ್ದರು.
'ಜೆಡಿಎಸ್ನಲ್ಲಿ ಯಾವುದೇ ಗೊಂದಲವಿಲ್ಲ'
ತಿಪಟೂರು: ತಾಲೂಕು ಜೆಡಿಎಸ್ನಲ್ಲಿ ಯಾವುದೇ ಗೊಂದಲವಿಲ್ಲ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಈ ಬಾರಿ ನನ್ನ ಗೆಲುವಿಗೆ ಇನ್ನಷ್ಟು ಶ್ರಮಿಸಬೇಕೆಂದು ಜೆಡಿಎಸ್ ಅಭ್ಯರ್ಥಿ ಎಂ.ಲಿಂಗರಾಜು ಜಕ್ಕನಹಳ್ಳಿ ಮನವಿ ಮಾಡಿದರು. ನಗರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಾನು ಡಮ್ಮಿ ಅಭ್ಯರ್ಥಿ ಅಲ್ಲ. ಪಕ್ಷದ ನಿಷ್ಟಾವಂತ ಕಾರ್ಯಕರ್ತನಾದ ನನಗೆ ಜೆಡಿಎಸ್ ಹೈಕಮಾಂಡ್ ಈ ಬಾರಿ ಗುರುತಿಸಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಜೆಡಿಎಸ್ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರಲ್ಲದೆ 3 ಜನ ನಗರಸಭಾ ಸದಸ್ಯರೂ ಸಹ ಜೆಡಿಎಸ್ಗ ದುಡಿಯುತ್ತಿದ್ದಾರೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ತಾ.ಜೆಡಿಎಸ್ ಅಧ್ಯಕ್ಷ ಗುರುಮೂರ್ತಿ, ನಗರಸಭಾ ಸದಸ್ಯರಾದ ಕೋಟೆಪ್ರಭು, ಗಣೇಶ್, ರೇಖಾ ಅನೂಪ್, ಜೆಡಿಎಸ್ ಮುಖಂಡರಾದ ಪ್ರಕಾಶ್, ಪ್ರಶಾಂತ್, ನಾಗರಾಜು ಮತ್ತಿತರರಿದ್ದರು.
ಗೋವಿಂದರಾಜು ನೇಮಕ
ಶಿರಾ: ಪಟ್ಟಣದ ಎಸ್.ಎಲ್. ಗೋವಿಂದರಾಜು ಅವರನ್ನು ರಾಜ್ಯ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ರಾಜ್ಯ ಯುವ ಜನತಾದಳದ ಅಧ್ಯಕ್ಷ ಎಸ್. ಮಧು ಬಂಗಾರಪ್ಪ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ಗೆ ನೇಮಕ
ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದ 30 ನೇ ವಾರ್ಡ್ನ ಉಪಾಧ್ಯಕ್ಷರಾಗಿ ದೇವನೂರು ಮುಖ್ಯ ರಸ್ತೆಯ ಕೆ.ಎಸ್. ನಾಗದತ್ತ ಅವರು ನೇಮಕಗೊಂಡಿದ್ದಾರೆ ಎಂದು ಯುವ ಕಾಂಗ್ರೆಸ್ ನಗರ ಅಧ್ಯಕ್ಷ ರಾಜೇಶ್ ದೊಡ್ಮನೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

