ಕಾಂಗ್ರೆಸ್ಗೆ ಬಂಡಾಯ ಅಭ್ಯರ್ಥಿಯದೇ ತೊಡಕು
ಕ.ಪ್ರ.ವಾರ್ತೆ ಕುಣಿಗಲ್ ಏ. 30
2008ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರರ ನಡುವಿನ ಜಗಳದ ಲಾಭ ಪಡೆದು, ವಿಜಯಮಾಲೆ ಕೊರಳಿಗೆ ಹಾಕಿಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿಗೆ, ಈ ಬಾರಿ ಸಹೋದರರ ಜಗಳ ಮುಂದುವರೆದಿದ್ದರೂ, ಪರಿಸ್ಥಿತಿಯ ಲಾಭ ಪಡೆಯಲು ಬಂಡಾಯ ಅಭ್ಯರ್ಥಿ ತೊಡಕಾಗಿದೆ.
2008ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕುಣಿಗಲ್, ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರಗಳು ಪುನರ್ ವಿಂಗಡಣೆಗೊಂಡು, ಕುಣಿಗಲ್ ವಿಧಾನಸಭಾ ಕ್ಷೇತ್ರ ಒಂದೇ ಆಯಿತು. ಇದರಿಂದ, ಕುಣಿಗಲ್ ವಿಧಾಸಭಾ ಕ್ಷೇತ್ರ ಹಾಗೂ ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರ, ಎರಡೂ ಕ್ಷೇತ್ರಗಲ್ಲಿ ತಮ್ಮದೇ ಆದ, ಛಾಪು ಮೂಡಿಸಿದ್ದ ವಿವಿಧ ಪಕ್ಷಗಳ ಮುಖಂಡರು, ಒಂದೇ ಕ್ಷೇತ್ರಕ್ಕೆ ಸೀಮಿತಗೊಂಡು, ತಮ್ಮ ತಮ್ಮ ಪಕ್ಷಗಳಲ್ಲಿ ಛಾಪು ಮೂಡಿಸಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಪರದಾಡವಂತಾಯಿತು.
ಜೆಡಿಎಸ್ ಮುಖಂಡ, ಮಾಜಿ ಸಚಿವ ಡಿ.ನಾಗರಾಜಯ್ಯನವರ ಬೆನ್ನುಲುಬಾಗಿ, ಎಲ್ಲಾ ವಿಜಯಗಳ ಹಿಂದೆ ಬಹುತೇಕ ರೂವಾರಿಯಂತಿದ್ದ ಸಹೋದರ ಡಿ.ಕೃಷ್ಣಕುಮಾರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆಗೆ ಟಿಕೆಟ್ ವಂಚಿತರಾಗಿ, ಬಿಜೆಪಿಯಿಂದ ಕಣಕ್ಕಿಳಿದರು. ಆದರೂ ಡಿ.ನಾಗರಾಜಯ್ಯ ಅಧೀರರಾಗದೆ, ಅಪಾರ ಬೆಂಬಲಿಗರ ಶಕ್ತಿಯಿಂದ ಕಣದಲ್ಲಿ ಉಳಿದರು. ಸಹೋದರರ ನಡುವಿನ ಜಗಳದ ಲಾಭವನ್ನು ಪರಿಣಾಮಕಾರಿಯಾಗಿ ಪಡೆಯುವಲ್ಲಿ ಯಶಸ್ವಿಯಾದ ಮೂರನೆ ಅಭ್ಯರ್ಥಿ ಕಾಂಗ್ರೆಸ್ನ ಬಿ.ಬಿ.ರಾಮಸ್ವಾಮಿಗೌಡ ಶಾಸಕರಾಗಿ ಆಯ್ಕೆಯಾದರು.
ಮತ್ತೆ ಕಣದಲ್ಲಿ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿ ಫಾರಂ ಗೊಂದಲದ ನಡುವೆಯೂ ಜೆಡಿಎಸ್ನಿಂದ ಡಿ.ನಾಗರಾಜಯ್ಯ ಅಭ್ಯರ್ಥಿ ಎಂದು ಘೋಷಣೆಯಾದರೆ, ಬಿಜೆಪಿಯಿಂದ ಇವರ ಸಹೋದರ ಡಿ. ಕೃಷ್ಣಕುಮಾರ್ ಕಣದಲ್ಲಿದ್ದಾರೆ. ಕಳೆದ ಬಾರಿಯಂತೆ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬ ತರ್ಕದ ನಡುವೆ ಜೆಡಿಎಸ್-ಬಿಜೆಪಿ ಸಹೋದರ ಅಭ್ಯರ್ಥಿಗಳ ಜಗಳದ ಲಾಭ ಪಡೆಯಲು ಈ ಬಾರಿಯೂ ಕಾಂಗ್ರೆಸ್ಗೆ ಸಹಕಾರಿಯಾಗಿತ್ತು.
ಕಡಿವಾಣ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ, ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ರವಿಕಿರಣ್, ಕಾಂಗ್ರೆಸ್ ಗೆಲವಿನ ನಾಗಲೋಟಕ್ಕೆ ಕಡಿವಾಣ ಹಾಕುವ ಯತ್ನದಲ್ಲಿದ್ದಾರೆ. ಬಹುತೇಕ ಕಾಂಗ್ರೆಸ್ ಮತಗಳಿಗೆ ಕನ್ನ ಹಾಕ್ಕುತ್ತಾ, ಕಾಂಗ್ರೆಸ್ ಅಭ್ಯರ್ಥಿಯ ಪಾಲಿಗೆ ಮಗ್ಗಲಮುಳ್ಳಾಗಿ ಪರಿಣಿಸಿದ್ದಾರೆ. ಕಾಂಗ್ರೆಸ್ ಜಯದಮಾಲೆ ಸುಲಭವಾಗಿ ದಕ್ಕುವ ಸಾಧ್ಯತೆ ಇದ್ದರೂ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯೇ ತಲೆನೋವಾಗಿದ್ದಾರೆ.
ಈ ಮಧ್ಯೆ ಬಂಡಾಯವಾಗಿ ಕಣಕ್ಕಿಳಿದಿರುವ ಅಭ್ಯರ್ಥಿಯ ಕೈ ಚಳಕ ನಡೆಯದಂತೆ, ಅಧಿಕೃತ ಕೈ ಪಾಳೆಯ ಕಾರ್ಯಕರ್ತರು ಹಲವು ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ. ಈ ಮೊದಲು ಬಂಡಾಯ ಕೈಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಕೆಲವರನ್ನು ತಮ್ಮತ್ತ ಸೆಳೆದು, ತಮ್ಮದೇ ಆದ ಕೈಚಳಕ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಂಡಾಯ ಕೈಪಾಳೆಯಕ್ಕೆ ಅನಿರೀಕ್ಷಿತ ತಂತ್ರಗಳನ್ನು ಹೂಡುವ ಮೂಲಕ, ಕಡಿವಾಣ ಹಾಕಲು ಸಿದ್ಧತೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಬಂಡಾಯದವರು ಬೆಂಗಳೂರಿನಿಂದ ತಮ್ಮದೇ ಆದ ಪಡೆಯ ನೆರವಿನಿಂದ ಅಸ್ತಿತ್ವ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

