ತುಮಕೂರು

ಡಿ.ಗ್ರೂಪ್ ನೌಕರರ ನಿವೇಶನಕ್ಕೆ ಮಂಜೂರಾತಿ

Published On :

ಕ.ಪ್ರ.ವಾರ್ತೆ ಪಾವಗಡ ಆ, 5
ಪಾವಗಡ ಗ್ರಾಮಾಂತರ ರೊಪ್ಪ ಗ್ರಾಮದ ಸರ್ವೆ ನಂ.327ರಲ್ಲಿ 6ಎಕರೆ 20ಗುಂಟೆ ವಿಸ್ತೀರ್ಣದ ಜಮೀನು
ತಾಲೂಕು ಸರ್ಕಾರಿ ಡಿ.ಗ್ರೂಪ್ ನೌಕರರ ವಸತಿ ನಿವೇಶನಕ್ಕೆ ಮಂಜೂರು ಮಾಡಿ ತಾಪಂನಿಂದ ಆದೇಶ ಜಾರಿಗೊಳಿಸಿರುವುದಾಗಿ ಸರ್ಕಾರಿ ಡಿ.ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನ ಸರ್ಕಾರಿ ಡಿ.ಗ್ರೂಪ್ ನೌಕರರ ವಸತಿಗೆ ಮೀಸಲಿದ್ದ ರೊಪ್ಪ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.327ರಲ್ಲಿ 6ಎಕರೆ 20ಗಂಟೆ ಜಮೀನಿಗೆ ಸಂಬಂಧಪಟ್ಟಂತೆ ಕೆಲವರು ವಿನಾ ಕಾರಣ ವಿವಾದ ಸೃಷ್ಟಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ನಿವೇಶನದ ಹಂಚಿಕೆಗೆ ಸಂಬಂಧಪಟ್ಟಂತೆ ತಾಪಂ ಇಒ ರಂಗನಾಥ್ ಅವರಿಗೆ ದಾಖಲೆಗಳ ಸಮೇತ ದೂರು ನೀಡಿ ಪರಿಶೀಲಿಸಲು ಡಿ.ಗ್ರೂಪ್ ನೌಕರರು ಒತ್ತಾಯಿಸಿ ಮನವಿ ಮಾಡಲಾಗಿತು. ಈ ಸಂಬಂಧ ದಾಖಲೆಗಳು ಮತ್ತು ಸ್ಥಳ ಪರಿಶೀಲಿಸಿದ ತಾಪಂ ಇಒ ರಂಗನಾಥ್ ನಿಯಮನುಸಾರ ಸರ್ವೆ ನಂ.327ರಲ್ಲಿರುವ 6ಎಕರೆ 20ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಜಮೀನು ಸರ್ಕಾರಿ ಡಿ.ಗ್ರೂಪ್ ನೌಕರರಿಗೆ ಸಲ್ಲಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟು ತಾಪಂನಿಂದ ಆದೇಶ ಜಾರಿ ಮಾಡಿ ಸದರಿ ಜಮೀನನ್ನು ಸರ್ಕಾರಿ ಡಿ.ಗ್ರೂಪ್ ನೌಕರರ ವಸತಿಗೆ ಮಂಜೂರಾತಿ ನೀಡಿರುವುದಾಗಿ ತಿಳಿಸಿದರು.
ಸದರಿ ಜಮೀನಿನಲ್ಲಿ ನಿವೇಶನ ಹಂಚಿಕೆಗೆ ಸಂಬಂಧಪಟ್ಟಂತೆ ಈ ಹಿಂದೆ ತಾಲೂಕು ಸರ್ಕಾರಿ ಡಿ.ಗ್ರೂಪ್ ಅಧ್ಯಕ್ಷರು ನಿಯಮ ಉಲ್ಲಂಘಿಸಿ ಮನಬಂದಂತೆ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಸಂಬಂಧವಿಲ್ಲದವರಿಗೆಲ್ಲ ನಿವೇಶನ ಹಂಚಿಕೆ ಮಾಡಿದ್ದರು. ಸದರಿ ಜಮೀನಿನಲ್ಲಿರುವ ನಿವೇಶನಗಳ ಹಕ್ಕು ಪತ್ರಗಳ ಹಂಚಿಕೆ ಮಾಡುವ ಹಕ್ಕು ಸಂಬಂಧಪಟ್ಟ ತಹಸೀಲ್ದಾರ್ ಅವರಿಗೆ ಮಾತ್ರವಿದ್ದು ಸರ್ಕಾರದ ಆದೇಶ ಧಿಕ್ಕರಿಸಿ ಈ ಹಿಂದಿನ ಅಧ್ಯಕ್ಷರು ಹಕ್ಕು ಪತ್ರಗಳು ಸಂಬಂಧವಿಲದವರಿಗೆಲ್ಲ ವಿತರಿಸಿ ನಿಜವಾದ ಸರ್ಕಾರಿ ಡಿ.ಗ್ರೂಪ್ ನೌಕರರಿಗೆ ಅನ್ಯಾಯ ಮಾಡಿದ್ದರು. ಇದನ್ನು ಪ್ರಶ್ನಿಸಿ ಪಾವಗಡ ಜೆಎಂಎಫ್ಸಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಇದನ್ನೆಲ್ಲ ಪರಿಶೀಲಿಸಿ ಈ ಹಿಂದೆ ವಿತರಿಸಿದ ಹಕ್ಕು ಪತ್ರಗಳನ್ನು ರದ್ದು ಪಡಿಸಿ ಸರ್ಕಾರಿ ಜಮೀನಿನ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸುವ ಅಧಿಕಾರ ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಸಂಬಂಧಪಟ್ಟಿದೆ ಎಂದು ಅಭಿಪ್ರಾಯಪಟ್ಟು ಆದೇಶ ಣನೀಡಿದೆ.
ತಾಪಂ ಆದೇಶದಂತೆ ಮಂಜೂರಾತಿಯಾದ ಜಮೀನಿನಲ್ಲಿ ನಿಯಮದನ್ವಯ ಮನೆ ನಿರ್ಮಿಸಿಕೊಳ್ಳಲು ತಾಲೂಕಿನ ಎಲ್ಲಾ ಸರ್ಕಾರಿ ಡಿ.ಗ್ರೂಪ್ ನೌಕರರಿಗೆ ಅವಕಾಶವಿದ್ದು ನಿವೇಶನಕ್ಕಾಗಿ ಈ ಕೂಡಲೇ ತಾಲೂಕಿನ ಡಿ.ಗ್ರೂಪ್ ನೌಕರರ ಸಂಘಕ್ಕೆ ಅರ್ಜಿ ಸಲ್ಲಿಸುವಂತೆ ಸರ್ಕಾರಿ ಡಿ.ಗ್ರೂಪ್ ನೌಕರರಲ್ಲಿ ಸಂಘದ ಅಧ್ಯಕ್ಷ ಗೋವಿಂದಪ್ಪ ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.