ತುಮಕೂರು ವಿವಿ ಲೋಗೋ ಬದಲಾವಣೆಗೆ ಚಿಂತನೆ
ಉಗಮ ಶ್ರೀನಿವಾಸ್
ಕ.ಪ್ರ.ವಾರ್ತೆ ತುಮಕೂರು ಆ.5
ಹಾಲಿ ಇರುವ ತುಮಕೂರು ವಿವಿ ಲೋಗೋವನ್ನು ಬದಲಾಯಿಸುವ ಚಿಂತನೆಯನ್ನು ತುಮಕೂರು ವಿವಿ ಮಾಡಿದೆ.
ಈ ಹಿಂದೆ ಅನಂತರಾಮಯ್ಯ ಅವರು ಉಪಕುಲಪತಿಯಾಗಿದ್ದಾಗ ತುಮಕೂರಿನ ಚಾರಿತ್ರಿಕ ಮಹತ್ವವನ್ನು ಒಳಗೊಂಡು ರಚಿತವಾದ ಲೋಗೋವನ್ನು ಆನಂತರ ಬಂದ ಕುಲಪತಿ ಡಾ.ಎಸ್.ಸಿ. ಶರ್ಮ ಅವರು ಬದಲಾಯಿಸಿದ್ದರು. ಹೊಸ ಲೋಗೋ ಬಗ್ಗೆ ಜಿಲ್ಲೆಯಲ್ಲಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯ ಮುಖಂಡರು ವ್ಯಾಪಕ ಹೋರಾಟ ಮಾಡಿದ್ದರು. ಜತೆಗೆ ಎಸ್ಎಫ್ಐ ಪತ್ರ ಚಳವಳಿಯನ್ನು ನಡೆಸಿತ್ತು. ಸುಮಾರು 6 ಸಾವಿರ ಪತ್ರವನ್ನು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಕಳುಹಿಸಿತ್ತು. ಇದರ ಜತೆಗೆ ಜಿಲ್ಲೆಯ 10 ಸಾವಿರ ವಿದ್ಯಾರ್ಥಿಗಳ ಸಹಿ ಸಂಗ್ರಹ ಚಳವಳಿ ಕೂಡ ರೂಪಿಸಲಾಗಿತ್ತು. ಈ ಸಹಿ ಸಂಗ್ರಹದ ಪುಸ್ತಿಕೆಯನ್ನು ಕುಲಪತಿ, ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಮತ್ತು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ ಲೋಗೋ ಮಾತ್ರ ಬದಲಾಗಲಿಲ್ಲ. ಈಗ ತುಮಕೂರು ವಿವಿಗೆ ಹೊಸ ಕುಲಪತಿಯಾಗಿ ರಾಜಾಸಾಬ್ ಆಗಮಿಸಿದ್ದು ಅವರನ್ನು ಭೇಟಿ ಮಾಡಿದ ಎಸ್ಎಫ್ಐ ನ ಜಿಲ್ಲಾ ಕಾರ್ಯದರ್ಶಿ ವೆಂಕಟಾಪುರ ಶಿವಣ್ಣ ನೇತೃತ್ವದ ನಿಯೋಗ ಹಾಲಿ ಇರುವ ಲೋಗೋ ಯಾವುದೋ ಒಂದು ಧರ್ಮಕ್ಕೆ ಸಂಬಂಧಪಟ್ಟಂತೆ ಇದ್ದು ಪ್ರಜಾಸತ್ತಾತ್ಮಕ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆ ಈ ಲೋಗೋ ರೂಪಿಸಲಾಗಿದ್ದು ಇದನ್ನು ಕೂಡಲೇ ವಾಪಾಸ್ ಪಡೆಯಬೇಕೆಂದು ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ರಾಜಾಸಾಬ್ ಒಂದು ವೇಳೆ ಸರ್ಕಾರ ಲೋಗೋ ಬದಲಾವಣೆಗೆ ಸೂಚಿಸಿದರೆ ನಾಳೆಯೇ ಬದಲಾವಣೆ ಮಾಡುವ ಭರವಸೆ ನೀಡಿದರು.
ಸಿಂಡಿಕೇಟ್ನಲ್ಲಿ ನಿರ್ಧಾರ: ಹಾಲಿ ಲೋಗೋ ಬದಲಾವಣೆ ಸಂಬಂಧ ತುಮಕೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಸಭೆಯ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈಗಾಗಲೇ ಹಳೆಯ ಸಿಂಡಿಕೇಟ್ ಅನ್ನು ವಿಸರ್ಜಿಸಲಾಗಿದೆ. ಹೊಸ ಸಿಂಡಿಕೇಟ್ ಅಸ್ತಿತ್ವಕ್ಕೆ ಬಂದ ನಂತರ ಲೋಗೋ ಬದಲಾವಣೆ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ಮಾತನ್ನು ರಾಜಾಸಾಬ್ ಆಡಿದ್ದಾರೆ.
ಆರಂಭದಿಂದಲೂ ತುಮಕೂರು ವಿವಿ ಒಂದಲ್ಲಾ ಒಂದು ಸಮಸ್ಯೆಯನ್ನು, ವಿವಾದವನ್ನು ಮೈ ಮೇಲೆ ಎಳೆದುಕೊಂಡೇ ಬಂದಿದೆ. ತುಮಕೂರು ವಿವಿಗೆ ಜಾಗದ ವಿಷಯದಿಂದ ಆರಂಭವಾದ ವಿವಾದ ಲೋಗೋ ವರೆಗೆ ಎಡೆಬಿಡದೆ ಬೆಂಬತ್ತಿದೆ. ಅನಂತರಾಮಯ್ಯ ಅವರು ರೂಪಿಸಿದ್ದ ಲೋಗೋವನ್ನು ಶರ್ಮ ಅವರು ಬದಲಾಯಿಸಿದ್ದರು. ಈಗ ಶರ್ಮ ಅಧಿಕಾರದಿಂದ ನಿರ್ಗಮಿಸಿದ್ದು ಆ ಜಾಗಕ್ಕೆ ರಾಜಾಸಾಬ್ ಆಗಮಿಸಿದ್ದರು. ಈಗಲಾದರೂ ಈ ವಿವಾದ ಬಗೆಹರಿಯುತ್ತದೆಯೇ ಎಂಬ ಪ್ರಶ್ನೆ ಶೈಕ್ಷಣಿಕ ವಲಯದಲ್ಲಿ ಮೂಡಿದೆ.
ಸಿಂಡಿಕೇಟ್ಗೆ ಯಾರ್ಯಾರು....
ತುಮಕೂರು ವಿವಿಗೆ ಹೊಸದಾಗಿ 13 ಮಂದಿ ಸಿಂಡಿಕೇಟ್ ಸದಸ್ಯರು ನೇಮಕಗೊಳ್ಳಲಿದ್ದಾರೆ. ಇದರಲ್ಲಿ ಸರ್ಕಾರ 3 ಮಂದಿಯನ್ನು ನೇಮಕ ಮಾಡಲಿದ್ದು ಉಳಿದಂತೆ ಕುಲಪತಿಗಳು ಉಳಿಕೆಯವರನ್ನು ನೇಮಕ ಮಾಡಿಕೊಳ್ಳಲಿದ್ದಾರೆ. ಹಾಲಿ ತುಮಕೂರು ವಿವಿ ಸಿಂಡಿಕೇಟ್ಗೆ ಪ್ರಗತಿಪರ ಚಿಂತಕರಾದ ಕೆ. ದೊರೈರಾಜು, ಪ್ರೊ. ಜಿ.ಎಂ. ಶ್ರೀನಿವಾಸಯ್ಯ, ಚಿಕ್ಕಹನುಮಯ್ಯ, ಎಚ್.ಎಸ್. ನಿರಂಜನಾರಾಧ್ಯ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

