ಪುರುಷಶಕ್ತಿಗೆ ಪರ್ಯಾಯವಾಗಿ ಬೆಳೆದ ಮಹಿಳೆ
ಕ.ಪ್ರ.ವಾರ್ತೆ ತುಮಕೂರು ಆ. 7
ಒಂದು ಕಾಲದಲ್ಲಿ ಮನೆಯಂಗಳದಲ್ಲಿ ರಂಗವಲ್ಲಿ ಚುಕ್ಕಿಗಳನ್ನು ಇಡುತ್ತಿದ್ದ ನಮ್ಮ ಹೆಣ್ಣುಮಕ್ಕಳು ಇಂದು ಬಾನೆತ್ತರಕ್ಕೆ ಏರಿದ್ದಾರೆ. ಬಾನಂಗಳದಲ್ಲಿ ಸಾಹಸದ ಚಿತ್ರ-ಚಿತ್ತಾರಗಳನ್ನು ಬರೆಯುತ್ತಾ ಪುರುಷಶಕ್ತಿಗೆ ಪರ್ಯಾಯವಾಗಿ ಬೆಳೆದುನಿಂತಿದ್ದಾರೆ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಹಿರೇಮಠದಲ್ಲಿ ಶೇ. 98 ಕ್ಕೂ ಹೆಚ್ಚು ಅಂಕ ಪಡೆದ ವೈಭವಿ ಸೇರಿ ಇತರೇ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಹಿಂದೊಮ್ಮೆ ಬರೀ ನಾವು ಹೌಸ್ ವೈಫ್ ಎಂದು ಹೇಳಿಕೊಂಡಿದ್ದ ಹೆಣ್ಣುಮಕ್ಕಳು ಇವತ್ತು ಬರೀ ಹೌಸ್ ವೈಫ್ ಆಗಿ ಉಳಿದುಕೊಳ್ಳದೆ ಅವರು ಹೌಸ್ಲೈಫ್ ಆಗಿನಿಂತುಕೊಂಡಿದ್ದು ಇಡೀ ಹೌಸ್ಅನ್ನು ಲೈವ್ ಆಗಿ ಇರಿಸಿರುವುದಷ್ಟೇ ಅಲ್ಲ, ಅವರು ಹೌಸ್ಗೆ ಹೊಸ ಲೈಫ್ ಕೊಟ್ಟು ತಮ್ಮ ಮನೆಗಳನ್ನು ಜೀವಂತವಾಗಿಟ್ಟುಕೊಂಡಿರುವುದನ್ನು ನಾವೆಲ್ಲ ಕಾಣುತ್ತಿದ್ದೇವೆ ಎಂದರು.
ಇವತ್ತಿನ ಈ ಕಾಲಘಟ್ಟದಲ್ಲಿ ಅದೆಷ್ಟೋ ಹಸೀನಾ ಬೇಗಮ್ಗಳು ಪಸೀನಾ ಬೇಗಮ್ಗಳಾಗಿ ಬಿಸಿಲು ಮಳೆ, ಗಾಳಿಗಳೆನ್ನದೆ ಹಗಲಿರುಳು ದುಡಿದು ತಮ್ಮ ಮನೆ ಮತ್ತು ಮಕ್ಕಳನ್ನು ಅತ್ಯಂತ ಕಷ್ಟಪಟ್ಟು ಸಾಕಿ ಸಲಹುತ್ತಿರುವುದನ್ನು ನಾವು ದಿನನಿತ್ಯದಲ್ಲೂ ಕಾಣುತ್ತಿದ್ದೇವೆ. ಹಿಂದೊಮ್ಮೆ ರಾಜಾ ಪ್ರತ್ಯಕ್ಷ ದೇವತಾ ಎಂದು ಹೇಳಿಕೊಂಡಿದ್ದ ನಾವು ಇವತ್ತು ನಾರೀ ಪ್ರತ್ಯಕ್ಷ ದೇವತಾ ಎಂದು ಹೇಳಲೇಬೇಕಾದ ಅನಿವಾರ್ಯತೆ ಉಂಟಾಗಿದೆ.
ದುರ್ಗಾಶಕ್ತಿಗೆ ಪ್ರಶಸ್ತಿ ನೀಡಬೇಕು: ಇವತ್ತು ಮತದಾಸ್ಯ ಹಾಗೂ ಮತೀಯ ದಾಸ್ಯಕ್ಕೆ ಒಳಗಾಗಿ ದಾರಿತಪ್ಪುತ್ತಿರುವ ಸರಕಾರಗಳಿಗೂ ಕೂಡ ಕಿವಿಹಿಂಡಿ ಬುದ್ಧಿಹೇಳಬೇಕಾದ ಪರಿಸ್ಥಿತಿ ಹೆಣ್ಣುಮಕ್ಕಳಿಗೇನೇ ಬಂದಿದೆ. ಆ ದಿಶೆಯಲ್ಲಿ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಒಂದು ಜೀವಂತ ಮತ್ತು ಜ್ವಲಂತ ಉದಾಹರಣೆ. ವೀರರಾದ ಮತ್ತು ಶಹೀದ್ರಾದ ಸೈನಿಕರಿಗೆ ಅವರ ಮರಣಾನಂತರ ಮರಣೋತ್ತರ ಪ್ರಶಸ್ತಿ ಕೊಡುವ ಹಾಗೆ ಸದ್ಯ ಉತ್ತರಪ್ರದೇಶ ಸರಕಾರದಿಂದ ಅಮಾನತ್ ಗೊಂಡಿರುವ ಮಹಿಳಾ ಅಧಿಕಾರಿ ದುರ್ಗಾಶಕ್ತಿಗೆ ಅವರ ಅಮಾನತೋತ್ತರ ಪ್ರಶಸ್ತಿಯನ್ನು ಕೊಡಬೇಕು ಎಂದು ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ನೂರಕ್ಕೆ ಪ್ರತಿಶತ 98.24 ಅಂಕಗಳನ್ನು ಪಡೆದ ವೈಭವಿಗೆ ಮನದುಂಬಿ ಆಶೀರ್ವದಿಸಿದರು. ಅದೇ ರೀತಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ಪ್ರತಿಶತ 97.28 ಅಂಕಗಳನ್ನು ಪಡೆದ ತುಮಕೂರಿನ ಕುಮಾರ ಡಿ. ಆರ್. ದರ್ಶನ್ನಿಗೆ ಈ ದೇಶದ ಆಸ್ತಿ ಮತ್ತು ಸಾಕ್ಷಿಪ್ರಜ್ಞೆಯಾಗಿ ನಿಂತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ತಲಾ 50001 ರು.: ಈ ಇಬ್ಬರೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಗಳು ತುಮಕೂರಿನ ಹಿರಿಯ ಗಣ್ಯನಾಗರಿಕರಾದ ಜಿ.ಎಸ್.ಎಸ್. ಮೂರ್ತಿ ಇವರ ಇಚ್ಛೆಯಂತೆ ಜಿ.ಎಸ್. ಎಸ್. ಮೂರ್ತಿ ಮತ್ತು ಮಲ್ಲಮ್ಮನವರ ಪ್ರತಿಭಾ ಪುದವಟ್ಟು ಪುರಸ್ಕಾರ ನಿಧಿಯಿಂದ ತಲಾ 5001 ರು.ಗಳನ್ನು ಪುರಸ್ಕಾರ ರೂಪದಲ್ಲಿ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಶಾಲು, ಮಾಲೆ, ಮೊಮೆಂಟೋ ಹಾಗೂ ಶ್ರೀಗಳವರ ಸಾಹಿತ್ಯ ಮತ್ತು ಭಾರದ್ವಾಜ ಡಿಕ್ಷರಿಯನ್ನು ಆಶೀರ್ವಾದ ರೂಪದಲ್ಲಿ ನೀಡಲಾಯಿತು.
ವೈಭವಿ ಮತ್ತು ದರ್ಶನ್ ಮಾತನಾಡಿ ತಾವುಗಳು ದೇಶಸೇವೆಯನ್ನು ಮಾಡುವುದರ ಜೊತೆ ಜೊತೆಯಲ್ಲಿ ಸಮಾಜ ಹಾಗೂ ಸಮುದಾಯದ ಸೇವೆಯನ್ನು ಮಾಡುತ್ತ ಈ ದೇಶದ ಆದರ್ಶ ಹಾಗೂ ಮೌಲ್ಯಗಳಿಗೆ ಹೆಗಲುಕೊಡುವುದಾಗಿ ಹೇಳಿದರು.
ಡಾ. ಬಿ. ನಂಜುಂಡಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿಭಾ ಪುರಸ್ಕಾರ ದತ್ತಿನಿಧಿಯ ಕರ್ತೃಗಳ ಪರಿಚಯ ಮಾಡಿಕೊಟ್ಟರು. ಜಿಎಸ್ಎಸ್ ಮೂರ್ತಿ ಸದ್ಭಾವನಾ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಐಟಿ ತಾಂತ್ರಿಕ ಕಾಲೇಜಿನ ವೈ.ಎಂ. ರೆಡ್ಡಿ, ಶಿವಗಂಗೆಯ ನಿವೃತ್ತ ಪ್ರಿನ್ಸಿಪಾಲ್ ಡಿ. ಸದಾಶಿವಯ್ಯ, ನಿವೃತ್ತ ತಹಸೀಲ್ದಾರ್ ಗುರುಬಸವರಾಜ್ ಮೊದಲಾದ ಗಣ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

