ಎದೆಹಾಲು ಮಗುವಿಗೆ ರೋಗ ನಿರೋಧಕ ಶಕ್ತಿ
ಕ.ಪ್ರ.ವಾರ್ತೆ ತುಮಕೂರು ಆ. 8
ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆ, ಅಜ್ಞಾನದ ಹಿನ್ನೆಲೆಯಲ್ಲಿ ತಾಯಂದಿರು ಮಗುವಿಗೆ ಮೊದಲ ಹಾಲನ್ನು ನೀಡಲು ಹಿಂಜರಿಯುತ್ತಾರೆ. ಮೊದಲ ಹಾಲಿನಲ್ಲಿ ಕೊಲೆಸ್ಟ್ರಮ್ ಅಂಶವಿದ್ದು ಇದು ಮಗುವಿಗೆ ರೋಗನಿರೋಧಕ ಶಕ್ತಿಯನ್ನು ನೀಡುವುದರಿಂದ ತಾಯಂದಿರು ಮಗು ಹುಟ್ಟಿದ ಅರ್ಧ ಗಂಟೆಯೊಳಗಾಗಿ ಎದೆ ಹಾಲು ನೀಡುವುದು ಅತ್ಯವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚನ್ನಮಲ್ಲಯ್ಯ ಅವರು ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ಆಡಿಟೋರಿಯಂನಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆರಿಗೆಗಳು ಆರೋಗ್ಯ ಸಂಸ್ಥೆಗಳಲ್ಲಿ ನಡೆದಲ್ಲಿ ಜನನಿ ಸುರಕ್ಷಾ ಯೋಜನೆ, ಪ್ರಸೂತಿ ಆರೈಕೆ, ಮಡಿಲು ಮುಂತಾದ ಶಿಶು ಸುರಕ್ಷಾ ಯೋಜನೆಗಳ ಪ್ರಯೋಜನವನ್ನು ತಾಯಂದಿರು ಪಡೆಯಬಹುದಾಗಿದೆ ಎಂದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶ್ರೀಕಾಂತ್ ಬಾಸೂರ್ ಅವರು, ಎದೆ ಹಾಲು ಕುಡಿಸುವುದರಿಂದ ನವಜಾತ ಶಿಶು ಮರಣ, ತಾಯಂದಿರ ಮರಣವನ್ನೂ ಸಹ ತಡೆಗಟ್ಟಬಹುದಾಗಿದೆ. ತಾಯಿಯ ಎದೆ ಹಾಲು ಕುಡಿದ ಮಕ್ಕಳು ಕಿವಿ, ಬಾಯಿ ಸೋಂಕು, ಹೃದಯದ ಕಾಯಿಲೆ, ಪಾರ್ಶ್ವವಾಯು ಮುಂತಾದ ಮಾರಕ ರೋಗಗಳಿಂದ ರಕ್ಷಣೆ ಪಡೆಯುತ್ತಾರೆ ಎಂದರು.
ವರ್ಷ ಪೂರ್ತಿ: ಸ್ತನ್ಯಪಾನ ಸಪ್ತಾಹ ಆಗಸ್ಟ್ 1ರಿಂದ 7 ರವರೆಗೆ ನಡೆಯಲಿದ್ದು, ಸ್ತನಪಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ವರ್ಷಪೂರ್ತಿ ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯಾದ್ಯಂತ ನಡೆಯುತ್ತವೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಪಿ.ಬಿ. ಗುರುದೇವ್ ಅವರು, ತಾಯಿಯ ಎದೆ ಹಾಲಿನಲ್ಲಿ ಮಗುವಿಗೆ ಬೇಕಾದ ವಿಟಮಿನ್ಸ್, ಮಿನರಲ್ಸ್, ಲ್ಯಾಕ್ಟೋಸ್, ಪ್ರೊಟಿನ್ ಸೇರಿದಂತೆ ಎಲ್ಲ ಪೋಷಕಾಂಶಗಳು ಒಳಗೊಂಡಿದ್ದು, ಮಗುವಿನ ಮೊದಲ ಎರಡು ವರ್ಷಗಳ ಸೂಕ್ತ ಬೆಳವಣಿಗೆ ಅಭಿವೃದ್ಧಿ ಮತ್ತು ಮಗುವಿನ ಉಳಿಯುವಿಕೆಗೆ ಅತ್ಯವಶ್ಯಕವಾದ ಅವಕಾಶವನ್ನು ತೆರೆದಿಡುತ್ತದೆ ಎಂದು ತಿಳಿಸಿದರು.
ಬಾಟಲ್ ಹಾಲು ಕುಡಿದ ಮಕ್ಕಳಿಗಿಂತ ತಾಯಿಯ ಎದೆಹಾಲು ಕುಡಿದ ಮಕ್ಕಳು ಶಕ್ತಿವಂತರಾಗಿ, ಬುದ್ಧಿವಂತರಾಗಿ, ಆರೋಗ್ಯವಂತರಾಗಿರುತ್ತಾರೆ. ಶಿಶುವಿಗೆ ಯಾವುದೇ ಕಾರಣಕ್ಕೂ ಬಾಟಲ್ ಹಾಲು ಕುಡಿಸಬಾರದು ಎಂದು ಅವರು ಈ ಸಂದರ್ಭ ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಆರೋಗ್ಯ ಶಿಕ್ಷಣಧಿಕಾರಿ ಜಿ.ಕೆ.ಕುಲಕರ್ಣಿ ಅವರು ಮಾತನಾಡಿ, 1992 ರಿಂದ ಸ್ತನ್ಯಪಾನ ಸಪ್ತಾಹ ಪ್ರಾರಂಭವಾಗಿದ್ದು, ಈ ವರ್ಷದ ಸ್ತನ್ಯಪಾನ ಸಪ್ತಾಹದ ಘೋಷಣೆ ಸ್ತನ್ಯಪಾನಕ್ಕೆ ಸೂಕ್ತವಾದ ಬೆಂಬಲ ತಾಯಂದಿರ ಸನಿಹಕ್ಕೆ ಎಂಬುದಾಗಿದೆ ಎಂದು ತಿಳಿಸಿದರು.
ಅಜ್ಞಾನ, ಮೂಢನಂಬಿಕೆ, ಜೀವನಶೈಲಿ, ಸೌಂದರ್ಯಪ್ರಜ್ಞೆ ಮುಂತಾದ ಕಾರಣಗಳಿಂದ ತಾಯಂದಿರು ಹುಟ್ಟಿದ ತಮ್ಮ ಮಗುವಿಗೆ ಎದೆ ಹಾಲುಣಿಸಲು ಹಿಂಜರಿಯುತ್ತಾರೆ. ಇದು ಸಲ್ಲದು. ಮಗು ಜನಿಸಿದ ಅರ್ಧ ಗಂಟೆಯೊಳಗಾಗಿ ತಾಯಿ ಎದೆ ಹಾಲು ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಶಾಂತ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎನ್. ಗುರುಸಿದ್ದಯ್ಯ ವಂದಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

