ಸಪಪೂ ಕಾಲೇಜು ಶಿಕ್ಷಕರಿಗೆ ಕಿಮ್ಮನೆ ಅಭಯ
ತುಮಕೂರು: ಕಳೆದ 4 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರೂ ಇನ್ನೂ ಪ್ರೊಬೇಷನರಿ ಅವಧಿ ಘೋಷಣೆಯಾಗದ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕರಿಗೆ ಯಾವುದೇ ಭಯ ಬೇಡ. ಅವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯೋಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಯ ನೀಡಿದರು.
ಅವರು ತುಮಕೂರಿನಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಶ್ನೆಯೊಂದಕ್ಕೆ ಮೇಲಿನಂತೆ ಉತ್ತರಿಸಿದರು.
ಬಿಎಡ್ ಪದವಿ ಪಡೆದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಈ ಸಪಪೂ ಕಾಲೇಜು ಶಿಕ್ಷಕರ ಪ್ರೊಬೇಷನರಿ ಅವಧಿಯನ್ನು ಈ ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿಲ್ಲ, ಇದು ತಪ್ಪು. ಸಪಪೂ ಕಾಲೇಜು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗಲೇ ಬಿಎಡ್ ಪದವಿ ಕಡ್ಡಾಯ ಎಂದು ಹೇಳಿಲ್ಲ. ಹೀಗಾಗಿ ಯಾವೊಬ್ಬ ಸಪಪೂ ಕಾಲೇಜು ಶಿಕ್ಷಕರು ಆತಂಕ ಪಡಬೇಕಿಲ್ಲ, ಯಾರನ್ನೂ ಕೆಲಸದಿಂದ ತೆಗೆಯಲ್ಲ ಎಂದರು.
ಆದರೆ ಎನ್ಸಿಇಆರ್ಟಿ ನಿಯಮದಂತೆ ಬಿಎಡ್ ಪದವಿ ಕಡ್ಡಾಯ. ಈ ಹಿನ್ನೆಲೆಯಲ್ಲಿ ಬಿಎಡ್ ಪದವಿ ಪಡೆಯದ, ಕಳೆದ 4 ವರ್ಷಗಳಿಂದ ಪ್ರೊಬೇಷನರಿ ಅವಧಿ ಘೋಷಣೆಯಾಗದೇ ಪರದಾಡುತ್ತಿರುವ ಶಿಕ್ಷಕರಿಗೆ ಸಮಾನಂತರವಾಗಿ ಸರ್ಟಿಪಿಕೇಟ್ ಕೋರ್ಸ್ವೊಂದನ್ನು ಸರ್ಕಾರ ತೆರೆಯಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ 24 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಈ ಹಿನ್ನೆಲೆಯಲ್ಲಿ 12 ಸಾವಿರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಿದ್ದತೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾಗಿದೆ. ಇಲಾಖೆಯ ಸಮಸ್ಯೆಗಳನ್ನು ಅರಿತು ಬಗೆಹರಿಸಲು ಶಕ್ತಿ ಮೀರಿ ಶ್ರಮವಹಿಸಲಾಗುವುದು ಎಂದರು.
ಸರ್ಕಾರಿ ಮುದ್ರಣಾಲಯ: ತುಮಕೂರಿನಲ್ಲಿರುವ ಅತಿ ದೊಡ್ಡ ಸರ್ಕಾರಿ ಮುದ್ರಣಾಲಯ ಸದ್ಬಳಕೆ ಕುರಿತಂತೆ ಚಿಂತಿಸಲಾಗುವುದು. ಇದು ತುಂಬಾ ವರ್ಷಗಳಿಂದ ಹಾಗೆಯೇ ಇರುವ ಹಳೆಯ ವಿಷಯ. ಇಲಾಖೆಯಿಂದ ಅಭಿಪ್ರಾಯ ಪಡೆದು ಮುಂದಡಿ ಇಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕ್ಷೀರಭಾಗ್ಯ ಯೋಜನೆ ಆರಂಭದಲ್ಲಿ ಸ್ವಲ್ಪ ತಡವರಿಸಿದರೂ, ಈಗ ಉತ್ತಮವಾಗಿ ನಡೆಯುತ್ತಿದೆ ಎಂದರು.
ಕಿಮ್ಮನೆಯ ಕಿಮ್ಮತ್ತಿನ ಮಾತು
ಚಾಕರಿಗಾಗಿ ಓದು
ಇಂದು ಕೇವಲ ಚಾಕರಿ ಪಡೆಯಲು ಓದುತ್ತಿದ್ದೇವೆ. ಯಾವುದನ್ನು ಓದಬೇಕಿತ್ತೋ ಅದನ್ನು ಓದುತ್ತಿಲ್ಲ. ಗಾಂಧಿ, ವಿವೇಕಾನಂದ, ಕುವೆಂಪು ಅವರ ಫೋಟೋಗಳಿಗೆ ಹಾರ ಹಾಕುವುದಕ್ಕಷ್ಟೇ ಸೀಮಿತವಾಗಿ, ಅವರ ವಿಚಾರಾಧಾರೆ ಮರೆತಿದ್ದೇವೆ. ಅವರನ್ನು ಟೀಕಿಸಿದ ಕೂಡಲೇ ಉಗ್ರ ಕೋಪ ವ್ಯಕ್ತಪಡಿಸುವ ನಾವು, ಅವರನ್ನು ಓದುವ ಗೋಜಿಗೆ ಹೋಗದಿರುವುದು ವಿಷಾದನೀಯ ಸಂಗತಿ. ಶಾಸಕರು, ಸಚಿವರು ಪ್ರತಿಭೆ ಹಾಗೂ ಅರ್ಹತೆ ಮೇಲೆ ಬಂದಿಲ್ಲ.
ಜಾತಿ, ಧರ್ಮ ದೇಶ ಒಡೆಯಬಾರದು
ದೇಶವನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯಬಾರದು. ಕೋಮು ಸಂಘರ್ಷಕ್ಕೆ ಕಾರಣರಾಗಬಾರದು. ಕಾನೂನು ಇಲ್ಲದೇ ಇದ್ದಾಗಲೂ ಧರ್ಮ ಇತ್ತು ಅನ್ನೋದನ್ನ ಮರೆಯಬಾರದು. ಧರ್ಮ ಎಂದರೆ ಬದುಕಲು ಹೇಳುವ ದಾರಿ. ದೇಶದ ವ್ಯವಸ್ಥೆ ತುಂಬಾ ವಿಭಿನ್ನವಾಗಿದೆ. ನಾಲ್ಕಾರು ಧರ್ಮಗಳಿವೆ. ನೂರಾರು ಭಾಷೆ, ಉಪಭಾಷೆಗಳಿವೆ. ಭಾರತ ವೈವಿಧ್ಯತೆಯಲ್ಲಿ ಏಕತೆಯಿರುವ ದೇಶ ಅನ್ನೋದನ್ನ ಯಾರೂ ಮರೆಯಬಾರದು. ದೇಶವನ್ನು ಒಗ್ಗೂಡಿಸಿ, ಕೆಲಸ ಮಾಡುವ ವಿದ್ಯಾವಂತರ ಅವಶ್ಯಕತೆಯಿದೆ. ಕೇವಲ ಎಂಎ, ಪಿಎಚ್ಡಿ ಮಾಡಿದರೆ ಸಾಲದು. ವಿವೇಕ ಬೆಳೆಸಿಕೊಳ್ಳಬೇಕು.
ಆದರ್ಶ ಸಾಯದಿರಲಿ
ಸಮಾಜವನ್ನು ಅಧಿಕಾರಿಗಳು, ರಾಜಕಾರಣಿಗಳು ಬದಲಿಸುತ್ತಾರೆಂಬ ಭ್ರಮೆ ಬೇಡ. ಬದಲಾವಣೆ ವ್ಯಕ್ತಿಯಿಂದಲೇ ಆರಂಭವಾಗಬೇಕು. ಬದಲಾವಣೆ ಅನ್ನೋದು ಕೋಟ್ಯಂತರ ಜನರಿಂದ ಆಗಿಲ್ಲ ಅನ್ನೋದನ್ನು ಗಮಿಸಬೇಕು. ಬದಲಾವಣೆ ಆಗಿರೋದು ಒಬ್ಬ ವ್ಯಕ್ತಿಯಿಂದ. ಅದು ಬುದ್ದನಿರಬಹುದು. ಗಾಂಧಿ ಇರಬಹುದು. ವಿದ್ಯಾರ್ಥಿಗಳು ಕೆಟ್ಟ ಸಹವಾಸಕ್ಕೆ ಬಲಿಯಾಗಬಾರದು. ಮಕ್ಕಳ ಸಂತೋಷ ಹಾಗೂ ನೋವಿಗೆ ಮೊದಲು ಬಲಿಯಾಗುವವರು ಪೋಷಕರು. ಮಕ್ಕಳು ಜವಾಬ್ದಾರಿ ಅರಿತು ಮುನ್ನಡೆಯಬೇಕು. ಇಂದು ಆದರ್ಶಗಳೇ ಇಲ್ಲವಾಗುತ್ತಿವೆ. ಆದರೆ ಆದರ್ಶ ಸಾಯಬಾರದು.
ನ್ಯಾಯ ಒದಗಿಸುವೆ
ಸಚಿವನಾಗಿ ತಮ್ಮ ಖಾತೆಗೆ ಎಷ್ಟು ನ್ಯಾಯ ಒದಗಿಸಲು ಸಾಧ್ಯವೋ, ಎಷ್ಟು ಪ್ರಾಮಾಣಿಕವಾಗಿ ಇರಲು ಸಾಧ್ಯವೋ ಇರುವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಾರು, ಯಾವಾಗ ಬೇಕಾದರೂ ತಮ್ಮನ್ನು ಭೇಟಿ ಮಾಡಬಹುದು. ಇಲಾಖೆ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ದ. ಸಚಿವಗಿರಿ ತಾತ್ಕಾಲಿಕ ಅನ್ನೋದನ್ನು ನೆನಪಿನಲ್ಲಿಟ್ಟುಕೊಂಡು ಅತ್ಯುತ್ತಮ ಕೆಲಸ ಮಾಡಲು ಶ್ರಮಿಸುವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

