ರಾಜಕೀಯದಲ್ಲಿ ಗೊಲ್ಲ ಯುವಕರು ಮುಂದೆ ಬರಲಿ
ಕ.ಪ್ರ.ವಾರ್ತೆ ತುಮಕೂರು ಆ.11
ಶಿಕ್ಷಣ, ಉದ್ಯೋಗಾವಕಾಶ, ರಾಜಕೀಯ ಪ್ರಾತಿನಿಧ್ಯ, ಸಾಂಸ್ಕೃತಿಕ ಹೆಗ್ಗಳಿಕೆಯ ವಾಸ್ತವಿಕ ಮನ್ನಣೆ ಮತ್ತಿತರ ಅಂಶಗಳಲ್ಲಿ ಮನ್ನಣೆಯನ್ನು ಗಳಿಸಿಕೊಳ್ಳಲು ಗೊಲ್ಲ ಸಮುದಾಯದೊಳಗಿನ ವಿದ್ಯಾವಂತ ಯುವಕರು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ತಿಳಿಸಿದ್ದಾರೆ.
ಮೈಸೂರಿನ ಶ್ರೀ ಲಕ್ಷ್ಮೀ ನರಸಿಂಹ ಚಾರಿಟಬಲ್ ಟ್ರಸ್ಟ್ ಮತ್ತು ರಾಜ್ಯ ಕಾಡುಗೊಲ್ಲರ ಹಿತರಕ್ಷಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಶಿರಾ ತಾಲೂಕಿನ ಬಂದಕುಂಟೆ ಗ್ರಾಮದಲ್ಲಿ ಕಾಡುಗೊಲ್ಲರ ಸಾಂಸ್ಕೃತಿಕ ವೀರ ಪುರುಷ ಶ್ರೀ ಈರುಚಿಕ್ಕಣ್ಣ ಸ್ವಾಮಿ ಪೌಳಿಯ ನೂತನ ಕಟ್ಟಡದ ಸಮಾರಂಭವನ್ನು ಅವರು ಉದ್ಘಾಟಸಿ ಮಾತನಾಡಿದರು.ಹಿಂದುಳಿದಿರುವ ಗ್ರಾಮಗಳ ಕಡೆ ಕಂದಾಚಾರಗಳು ಹೆಚ್ಚಾಗಿದ್ದು, ಗೊಲ್ಲ ಸಮಾಜದ ಅಸಂಖ್ಯಾತ ಬಡವರಿಗೆ ಇನ್ನೂ ಸರ್ಕಾರ ಪ್ರಯೋಜನ ದೊರಕ್ಕಿಲ್ಲ. ಇಂದಿನ ಜಾಗತಿಕ ಯುಗದಲ್ಲಿ ಮಕ್ಕಳೇ ಆಸ್ತಿ. ಅವರನ್ನು ಶಿಕ್ಷಿತರನ್ನಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ದುರಂತ ಕಥೆ: ಸ್ಮರಣೆ ಸಂಚಿಕೆ ಬಿಡುಗಡೆ ಮಾಡಿದ ಸಮಿತಿಯ ಕಾರ್ಯದರ್ಶಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಚಿಕ್ಕಪ್ಪಯ್ಯ ಅವರು ಮಾತನಾಡಿ ಕಾಡುಗೊಲ್ಲರ ಸಾಂಸ್ಕೃತಿಕ ವೀರ ಪುರುಷರಾದ ಜುಂಜಪ್ಪ ಸ್ವಾಮಿಯಂತೆ ಶ್ರೀ ಈರಚಿಕ್ಕಣ್ಣ ಸ್ವಾಮಿಯ ಹೋರಾಟದ ಬದುಕು ಕೂಡ ದುರಂತ ಕಥೆ. ಈರಚಿಕ್ಕಣ್ಣ ಸ್ವಾಮಿ ಚತುರ ಕುದುರೆ ಸವಾರ, ಪರಕ್ರಮಿ. ಪಶುಗಳ ರಕ್ಷಣೆಗೆ ಮತ್ತು ಜನ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ ಹೋರಾಡಿ ಮಡಿದ ಮಹತ್ಮಾ. ಇದರಿಂದ ಅವರ ಸಮಾಧಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಭಾಗಿಯಾಗೋಣ: ಕಾಡುಗೊಲ್ಲರಿಗೆ ಮಾತ್ರವಲ್ಲದೆ ಇತರ ಜನಾಂಗದವರಿಗೂ ಆರಾಧ್ಯ ದೈವವಾಗಿ ಈರುಚಿಕ್ಕಣ್ಣ ಸ್ವಾಮಿ ಪೂಜ್ಯರು. ಎಲ್ಲಾ ಸಮುದಾಯದವರು ಈ ಭಾಗದಲ್ಲಿ ಒಂದುಗೂಡಿ ಜೀವಿಸುತ್ತಿದ್ದರು ಎಂದು ಹಲವಾರು ಕೃತಿಗಳು ತಿಳಿಸುತ್ತವೆ. ಕುಂಚಿಟಿಗರು, ಕುರುಬರು, ಕಾಡುಗೊಲ್ಲರು ಮೂಲತಃ ಒಂದೇ ವಂಶಸ್ಥರಿರಬೇಕು ಎಂದು ಪ್ರೊ.ಡಿ.ಜವರೇಗೌಡ ಅವರ ಕೃತಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಯಾವುದೇ ವೈಶಮ್ಯಗಳನ್ನು ಬಿಟ್ಟು ವಿವಿಧ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗೋಣ ಎಂದರು. ಪೌಳಿಯ ನೂತನ ಕಟ್ಟಡ ಉದ್ಘಾಟಿಸಿದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಎ.ಎನ್. ತ್ಯಾಗರಾಜ್ ಮಾತನಾಡಿ ಗೊಲ್ಲರು ಹಿಂದುಳಿದವರು ಎಂಬ ಕೀಳರಿಮೆಯನ್ನು ತೊಡೆದು ಹಾಕಿ. ಗೊಲ್ಲ ಸಮುದಾಯದ ನಾಗರಿಕರು ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಶ್ರಮಜೀವಿಗಳು: ಅತಿಥಿಗಳಾದ ಕಿರುತೆರೆಯ ಕಲಾವಿದರಾದ ಹನುಮಂತೇಗೌಡ ಅವರು ಮಾತನಾಡಿ ಗೊಲ್ಲ ಸಮುದಾಯದವರು ಶ್ರಮಜೀವಿಗಳು, ಪ್ರಾಮಾಣಿಕರು, ನಂಬಿಕೆಗೆ ಅರ್ಹರು. ಈ ಸಮಾಜದ ಅಭಿವೃದ್ಧಿಗೆ ಸರ್ಕಾರ ಯತ್ನಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಬಿ.ಶಿವಲಿಂಗಪ್ಪ ಅವರು ಮಾತನಾಡಿ ಗೊಲ್ಲ ಸಮಾಜದ ಜಾನಪದ ಸಂಪತ್ತನ್ನು ರಕ್ಷಿಸಬೇಕಿದೆ ಎಂದರು. ಬೆಂಗಳೂರಿನ ಸಹಕಾರ ಇಲಾಖೆಯ ಉಪ ನಿಬಂಧಕ ಡಿ.ಆರ್. ನರಸಿಂಹಮೂರ್ತಿ ಅವರು ಮಾತನಾಡಿ ಗೊಲ್ಲ ಸಮುದಾಯದ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗಾಗಿ ಪ್ರತ್ಯೇಕವಾದ ಜಾನಪದ ಪರಿಷತ್ ಪ್ರಾರಂಭವಾಗಬೇಕಾಗಿದೆ ಎಂದು ತಿಳಿಸಿದರು. ಗೊಲ್ಲರ ಜಾನಪದ ಪರಿಷತ್ ರಚನೆಗಾಗಿ ಸಮುದಾಯದ ಎಲ್ಲಾ ವಿದ್ಯಾವಂತರು ಪ್ರಯತ್ನಿಸಬೇಕು ಎಂದು ಡಿ.ಆರ್. ನರಸಿಂಹಮೂರ್ತಿ ಅವರು ಹೇಳಿದರು.
ತುಮಕೂರು ಜಿಲ್ಲಾ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಚಂಗಾವರ ಕರಿಯಪ್ಪ ಅವರು ಮಾತನಾಡಿ ಕಾಡುಗೊಲ್ಲರ ವೀರ ಸಮಾಧಿ, ವೀರಗಲ್ಲು, ಸ್ಮಾರಕಗಳ ರಕ್ಷಣೆಯಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಸಿ.ಆರ್. ಉಮೇಶ್ ಮಾತನಾಡಿ ಈರುಚಿಕ್ಕಣ್ಣ ಸ್ವಾಮಿ ಪೌಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಯತ್ನಿಸಲಾಗುವುದು ಎಂದರು.
ಚಿತ್ರದುರ್ಗದ ಅಖಿಲ ಭಾರತ ಯಾದವ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಸ್ಥಳ ದಾನಿಗಳಾದ ಮಾರಜ್ಜೀರ ವಂಶಸ್ಥರು, ಡಿವೈಎಸ್ಪಿ ಪಿ. ನಾಗರಾಜ್, ಗಾಯಕರಾದ ಸಣ್ಣಪ್ಪ ಮತ್ತು ಚಿಕ್ಕವ್ವ, ಕುದರೇ ಪೂಜಾರಿ ಸಣ್ಣಚಿಕ್ಕಣ್ಣ, ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ, ನರಸಮ್ಮ ಬಿ.ವೀರಣ್ಣ, ಬಿ.ಉಗ್ರಪ್ಪ, ಮೂಡ್ಲಪ್ಪ, ಚಿನ್ನಪ್ಪ, ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿವಿಧ ಇಲಾಖೆಯಲ್ಲಿನ ಉನ್ನತ ಅಧಿಕಾರಿಗಳಾದ ವೈ.ಈರಣ್ಣ, ಈ. ಡೊಡ್ಡನಾಗಯ್ಯ, ದಾನಿಗಳಾದ ಯಳೇಉಗ್ರಪ್ಪ. ಜಿಲ್ಲೆಯ ವಿವಿಧ ಗ್ರಾ.ಪಂ. ಮತ್ತು ತಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು, ಪೂಜಾರಪ್ಪರು, ಯಜಮಾನರು, ದಳವಾಯಿಗಳು ಸೇರಿದಂತೆ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

