ಜೆಡಿಎಸ್ ನಿಲುವು ಸ್ಪಷ್ಟಪಡಿಸಲಿ: ಡಾ. ಪರಮೇಶ್ವರ್
ಕ.ಪ್ರ.ವಾರ್ತೆ ಕುಣಿಗಲ್ ಆ. 17
ಜಾತ್ಯತೀತ ಪಕ್ಷವೆಂದು ಬಿಂಬಿಸುತ್ತಾ, ಕೋಮುವಾದಿ ಬಿಜೆಪಿ ಜೊತೆ ಲೋಕಸಭೆ ಉಪಚುನಾವಣೆಯಲ್ಲಿ ಕೈಜೋಡಿಸಿರುವ ಜೆಡಿಎಸ್ 2014ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ನಿಲುವು ಏನೆಂದು ಜೆಡಿಎಸ್ ವರಿಷ್ಠರು ಈಗಲೆ ಜನತೆಗೆ ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ. ಜಿ.ಪರಮೇಶ್ವರ್ ಆಗ್ರಹಿಸಿದರು.
ಶನಿವಾರ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಲೋಕಸಭೆ ಉಪಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಸಾಧ್ಯವಾಗದ ಮಟ್ಟಿಗೆ ದಿವಾಳಿಯಾಗಿದೆ. ಅಲ್ಲದೆ ಜೆಡಿಎಸ್ಗೆ ಶರಣಾಗಿದ್ದಾರೆ. ಇನ್ನು ಜೆಡಿಎಸ್ ತನ್ನ ತತ್ವ, ಸಿದ್ಧಾತಗಳಿಗೆ ತಿಲಾಂಜಲಿ ಇಟ್ಟು ಕೋಮುವಾದಿಗಳೊಂದಿಗೆ ಕೈಜೋಡಿಸಿ, ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಏಕೈಕ ಧ್ಯೇಯದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಜೆಡಿಎಸ್ ವರಿಷ್ಠರಾದ ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಚುನಾವಣೆ ಪ್ರಚಾರದಲ್ಲಿ ತಮ್ಮ ಅಧಿಕಾರವಧಿಯಲ್ಲಿ ಜನತೆಗೆ ಯಾವ ಅಭಿವೃದ್ಧಿ ಮಾಡಿದ್ದೇವೆಂದು ಹೇಳದೆ ವಿನಾಕಾರಣ ವೈಯಕ್ತಿಕ ತೆಜೋವಧೆಯಲ್ಲಿ ತೊಡಗಿರುವುದು ಖಂಡನೀಯ. ಚುನಾವಣೆಯಲ್ಲಿ ಸಿದ್ಧಾಂತಗಳನ್ನೆಲ್ಲಾ ಗಾಳಿಗೆ ತೂರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, 2014ರ ಚುನಾವಣೆಯಲ್ಲಿ ಈಗಾಗಲೆ ಕೋಮುವಾದಿ ಮೋದಿಯನ್ನು ಪ್ರಧಾನಮಂತ್ರಿಯನ್ನಾಗಿಸಿ ಬಿಂಬಿಸಿಕೊಂಡಿರುವ ಬಿಜೆಪಿ ಬೆಂಬಲಿಸುತ್ತಾರೋ, ಅಥವಾ ತೃತೀಯ ರಂಗದಲ್ಲೆ ಉಳಿಯುತ್ತಾರೋ ಎಂದು ರಾಜ್ಯದ ಜನತೆಗೆ ಈಗಲೇ ಸ್ಪಷ್ಟಪಡಿಸಿ ತಮ್ಮ ಬದ್ಧತೆ ಮೆರೆಯಬೇಕಿದೆ ಎಂದು ಆಗ್ರಹಿಸಿದರು.
ಪ್ರಸಕ್ತ ಲೋಕಸಭೆ ಉಪ ಚುನಾವಣೆಗಳು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಮೇಲಾಗಲಿ, ಕೇಂದ್ರ ಸರ್ಕಾರದ ಮೇಲಾಗಲಿ ಪರಿಣಾಮ ಬೀರುವುದಿಲ್ಲ. ಇತ್ತೀಚೆಗೆ ಮಾಜಿ ಪ್ರದಾನಿ ದೇವೆಗೌಡರು, ದಲಿತ ವರ್ಗದವರಾದ ತಮ್ಮ ಮೇಲೆ ಹಾಗೂ ಖರ್ಗೆ ಮೇಲೆ ಹೆಚ್ಚಿನ ಅನುಕಂಪ ತೋರಿಸುತ್ತಾ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಖರ್ಗೆ ಅಥವಾ ಡಿಸಿಎಂ ಸ್ಥಾನಕ್ಕೆ ತಮ್ಮನ್ನು ಯಾಕೆ ಆಯ್ಕೆ ಮಾಡಲಿಲ್ಲವೆನ್ನುತ್ತಾರೆ. ಇದೇ ದೇವೇಗೌಡರು ಹಾಗೂ ಅವರ ಪುತ್ರ ಕುಮಾರಸ್ವಾಮಿಗೆ ದಲಿತರ ಬಗ್ಗೆ ನಿಜವಾಗಿ ಅನುಕಂಪವಿದ್ದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭೆ ಪ್ರಚಾರಕ್ಕೆ ಆಗಮಿಸಿ ಯಾವುದೇ ಕಾರಣಕ್ಕೂ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಯಾದ ಜಿ. ಪರಮೇಶ್ವರ್ ಗೆಲ್ಲಬಾರದು, ಅವರನ್ನು ಸೋಲಿಸಿ ಎಂದು ಅಬ್ಬರಿಸಿ ಹೋಗಿದ್ದರು. ಈಗ ಮೊಸಳೆ ಕಣ್ಣೀರಿನ ಮೂಲಕ ಕಾಟಾಚಾರದ ಅನುಕಂಪ ತೋರಿಸುತ್ತಿದ್ದು, ಜನತೆ ಯಾವುದೇ ಕಾರಣಕ್ಕೂ ಇವರ ಬೂಟಾಟಿಕೆ ರಾಜಕಾರಣಕ್ಕೆ ಬಲಿಯಾಗದೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಪೀ ಆಹಮದ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯಿತ್ರಿರಾಜು, ತಾಲೂಕು ಅಧ್ಯಕ್ಷ ಶಂಕರ್, ಶಾಸಕರಾದ ರಫೀಕ್ ಆಹಮದ್, ಷಡಕ್ಷರಿ, ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ಶಿವರಾಂ, ಎಸ್.ಪಿ. ಮುದ್ದಹನುಮೇಗೌಡ, ಪ್ರಮುಖರಾದ ಶಿವಕುಮಾರ್, ಲಕ್ಷ್ಮಣ, ಮುನ್ನ, ರೆಹಮಾನ್ ಶರೀಫ್, ಹೊರೂರು ಶಂಕರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

