ಪ್ರಾದೇಶಿಕ ಪಕ್ಷಕ್ಕೆ ಪೂರಕ ವಾತಾವರಣ
ಕ.ಪ್ರ.ವಾರ್ತೆ ಕುಣಿಗಲ್ ಆ. 17
ಸದ್ಯದ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಪೂರಕ ವಾತಾವರಣವಿದೆ. ಹಾಗಾಗಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.
ಶನಿವಾರ ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಪರ ಮತಯಾಚಿಸಿ, ದೇಶವನ್ನಾಳುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜನತೆ ವಿಶ್ವಾಸ ಕಳೆದುಕೊಂಡಿದ್ದು, ಬಿಜೆಪಿ ಪರಿಸ್ಥಿತಿಯೂ ಇದಕ್ಕಿಂತಲೂ ಹೀನಾಯವಾಗಿರುವ ಕಾರಣ ಜನತೆ ಪ್ರಾದೇಶಿಕ ಪಕ್ಷಗಳತ್ತ ಮನಸ್ಸು ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ಎಂದಿಗೂ ಜನಪರ ಹಾಗೂ ರೈತಪರ ಮಿಡಿಯುವ ಪಕ್ಷವಾಗಿದ್ದು, ತೆಂಗಿನ ಬೆಳೆ ಅವಲಂಬಿಸಿದ್ದ ರೈತರು ನೈಸರ್ಗಿಕ ವಿಕೋಪ ಸೇರಿದಂತೆ ಹಲವು ರೋಗಗಳ ಬಾಧೆಯಿಂದ ಬೆಳೆ ನೆಲಕಚ್ಚಿ ರೈತ ಕಂಗಾಲಾದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಮಾತ್ರ ರಾಜ್ಯದ ವಿವಿಧೆಡೆಗಳಲ್ಲಿ ಸಂಚರಿಸಿ ತೆಂಗು ಬೆಳೆಗಾರರ ಪರಿಸ್ಥಿತಿಯನ್ನು ಕೇಂದ್ರ ಕೃಷಿ ಸಚಿವರಿಗೆ ಮನದಟ್ಟು ಮಾಡಿ ಕೊಟ್ಟಿದ್ದಾರೆ. ಎಕರೆಗೆ ಹದಿನೈದು ಸಾವಿರ ಪರಿಹಾರ ಕೊಡಿಸಲು ಶ್ರಮಿಸಿದ್ದಾರೆ. ರಾಜ್ಯವನ್ನಾಳುತ್ತಿರುವ ಕಾಂಗ್ರೆಸ್ಗೆ ಸ್ಪಷ್ಟ ದೃಷ್ಟಿಕೋನವಿಲ್ಲದೆ ಹಲವು ಗೊಂದಲ ಸೃಷ್ಟಿಸುತ್ತಿದೆ ಎಂದರು.
ಕಳೆದ ನಾಲ್ಕೂವರೆ ವರ್ಷದಿಂದ ಕ್ಷೇತ್ರದ ಕಡೆಗೆ ತಲೆಹಾಕದ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ, ತಾವು ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷರೂ ಆಗಿದ್ದು, ಕೆಲ ವಿರೋಧ ಪಕ್ಷಗಳು ಜೆಡಿಎಸ್ ಏಳಿಗೆ ಸಹಿಸದೆ ಪಕ್ಷಕ್ಕೆ ಧಕ್ಕೆ ತರಲು ಸಂಚು ನಡೆಸಿದ್ದರು. ಪಕ್ಷವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ತಾವೊಬ್ಬರೆ ಏಕಾಂಗಿ ಹೋರಾಟ ನಡೆಸಿ ಪಕ್ಷವನ್ನು ಸಂಘಟಿಸಲು ತೊಡಗಿದ್ದ ಕಾರಣ ಕ್ಷೇತ್ರಕ್ಕೆ ಬರಲಾಗಲಿಲ್ಲ. ಇನ್ನು ಜನಪರ ಅಭಿವೃದ್ಧಿ ಕಾರ್ಯ ಮಾಡಲು ಕೇಂದ್ರದಲ್ಲಿ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿದ್ದು, ಸಂಸದರಾದ ತಮಗೆ ಎಷ್ಟರ ಮಟ್ಟಿಗೆ ಪ್ರೋತ್ಸಾಹ ಮತ್ತು ಅನುದಾನ ದೊರಕುತ್ತದೆ ಎಂದರು.
ಉಜ್ಜಿನಿ ಗ್ರಾಮಕ್ಕೆ ಪ.ಪೂ. ಕಾಲೇಜಿನ ಅವಶ್ಯಕತೆ ಬಗ್ಗೆ ಸ್ಥಳೀಯರು ಮನವಿ ಮಾಡಿದ ಮೇರೆಗೆ ಸರ್ಕಾರದ ಗಮನಸೆಳೆದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈಗಾಗಲೆ ಕುಣಿಗಲ್ ಕ್ಷೇತ್ರದಲ್ಲಿ ಶಾಸಕರಾಗಿ ಜೆಡಿಎಸ್ನ ಡಿ.ನಾಗರಾಜಯ್ಯ ಇದ್ದಾರೆ. ತಾಲೂಕಿನ ಜನತೆ ಸದಾ ಜೆಡಿಎಸ್ಅನ್ನು ಬೆಂಬಲಿಸುತ್ತಲೆ ಬಂದು ರಾಜ್ಯ ರಾಜಕಾರಣದಲ್ಲಿ ಕುಣಿಗಲ್ ಜೆಡಿಎಸ್ ಭದ್ರಕೋಟೆ ಎಂದು ಗುರುತಿಸುವಂತಾಗಿದೆ ಎಂದರು.
ಶಾಸಕರಾದ ಡಿ.ನಾಗರಾಜಯ್ಯ, ಜಿ.ಟಿ. ದೇವೆಗೌಡ, ಜಿಪಂ ಸದಸ್ಯ ಡಾ.ರವಿ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ಮುಖಂಡರಾದ ಎಚ್.ಎ. ಜಯರಾಮಯ್ಯ, ಬಾಂಬೆ ಶಿವಣ್ಣ, ವೆಂಕಟೇಶ್, ರಮೇಶ್, ಈ.ಮಂಜು, ಮೊದೂರು ಗಂಗಾಧರ ಇತರರು ಇದ್ದರು.
ಉಜ್ಜಿನಿ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ಕೆ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಅವರು ಗ್ರಾಮದ ಅದಿದೇವತೆ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಸಬಾ, ಹುತ್ರಿದುರ್ಗ, ಹುಲಿಯೂರುದುರ್ಗ, ಅಮೃತೂರು, ಯಡೆಯೂರು ಹೋಬಳಿಗಳ ವಿವಿಧೆಡೆ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

