ತುಮಕೂರು

ವಿಶಾಲ ಭಾವನೆಯಿಂದ ಲೋಕಕಲ್ಯಾಣ: ಡಾ.ವೀರೇಶಾನಂದಶ್ರೀ

Published On :

ಕ.ಪ್ರ.ವಾರ್ತೆ ,  ತುಮಕೂರು ,  ಆ. 18
ಶಿಕ್ಷಕರು ಮರು ಚಿಂತನೆಗೆ ಒಳಪಟ್ಟಾಗ ಮಾತ್ರ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಬೆಳೆಯುತ್ತಾರೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಸರಸ್ವತಿಪುರಂನಲ್ಲಿ ಏರ್ಪಡಿಸಿದ್ದ ಸಚ್ಚಿಂತನ ವೇದಿಕೆ ಉದ್ಘಾಟನೆ ಹಾಗೂ ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿ ಡಿ.ಸಿ. ಚಿತ್ರಲಿಂಗಯ್ಯ ಅವರ 'ಸಂಕ್ಷಿಪ್ತ ಭಾಷಾ ವಿಜ್ಞಾನ' ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನುಷ್ಯನ ಭಾವನೆಗಳು ವಿಶಾಲವಾದಾಗ ಲೋಕ ಕಲ್ಯಾಣವಾಗುತ್ತದೆ. ಭಾವನೆಗಳು ಸಂಕುಚಿತಗೊಂಡಾಗ ಶೋಷಣೆ ಮೂಡುತ್ತದೆ. ಬುದ್ಧಿಭಾವನೆಗಳ ಸಂಸ್ಕರಣ ಶಿಕ್ಷಣ. ಶಿಕ್ಷಣ ಎನ್ನುವುದು ನಿರಂತರವಾದ ಪ್ರಕ್ರಿಯೆಯಾಗಿದೆ. ಜೀವನದ ಉದ್ದಕ್ಕೂ ಕಲಿಯುವುದು ಇರುತ್ತದೆ. ಕಲಿಕೆಗೆ ಪೂರ್ಣ ವಿರಾಮ ಇರುವುದಿಲ್ಲ. ಶಿಕ್ಷಣ ಯಾವಾಗಲೂ ಬೌದ್ಧಿಕ ಕೌತುಕತೆ ಹೆಚ್ಚಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕು. ಕಲಿಯಲು ಆಸಕ್ತಿಯುಳ್ಳವರು ಕಲಿಸಲು ಯೋಗ್ಯರಾಗಿರುತ್ತಾರೆ. ಯಾರು ಉತ್ತಮ ವಿದ್ಯಾರ್ಥಿಯೂ ಆತ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ತಿಳಿಸಿದರು. ಮನುಷ್ಯನಿಗೆ ಪ್ರಶ್ನಿಸುವ ಹಕ್ಕಿದೆ. ಆದರೆ ಸತ್ಯವಾದುದನ್ನು ಕೂಡ ಸರಿಯಾಗಿ ಅರ್ಥ ಮಾಡಿಕೊಳ್ಳದೆ ಸಂಶಯ ಪಟ್ಟರೆ ಅದು ರೋಗಗ್ರಸ್ತ ಮನಸ್ಸಾಗುತ್ತದೆ. ಹಾಗೆಯೇ ಮನುಷ್ಯನ ಬದುಕಿಗೆ ಪರಿಪೂರ್ಣತೆಯನ್ನು ನೀಡುವಲ್ಲಿ ಆಯ್ಕೆಯ ವಿಚಾರವು ಮುಖ್ಯವಾಗುತ್ತದೆ. ಜೀವನದಲ್ಲಿ ತುಂಬಾ ಕಠಿಣವಾದ ಕೆಲಸವೆಂದರೆ ಆಯ್ಕೆಯನ್ನು ಮಾಡುವುದೇ ಆಗಿದೆ. ಆದ್ದರಿಂದ ವ್ಯಕ್ತಿಗಳು ಆಯ್ಕೆಯ ವಿಚಾರದಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಎಂದರು.
ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಕಾರ್ಯಶೀಲತೆ ರೂಢಿಸಿಕೊಳ್ಳಬೇಕು. ಕಾರ್ಯಶೀಲತೆ ಇಲ್ಲದ ಜೀವನ ಅದು ಮೃಗೀಯವಾಗುತ್ತದೆ. ಹಾಗೆಯೇ ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯ ದೋಷ ವ್ಯವಸ್ಥೆಯ ದೋಷವಾಗಿ ನೋಡಬಾರದು. ನಮ್ಮ ಭಾವನೆಗಳ ಶುದ್ಧೀಕರಣವೇ ಆಧ್ಯಾತ್ಮ ಎಂದು ಸ್ವಾಮೀಜಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಇತಿಹಾಸ ಸಂಶೋಧಕ ಡಿ.ಎನ್. ಯೋಗೀಶ್ ಮಾತನಾಡಿ ಜಾತಿ ಬೇಧವಿಲ್ಲದೆ ಸಾಮಾಜಿಕ ಸೇವೆ ಯಶಸ್ವಿಯಾಗಿ ಮಾಡುತ್ತಿರುವ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮ ಇಂದು ನಗರದಲ್ಲಿ ನೆಮ್ಮದಿಯ ಕೇಂದ್ರವಾಗಿ ಗುರುತಿಸಿಕೊಂಡಿರುವುದು ಹರ್ಷದಾಯಕ ಎಂದರು. ಕಾರ್ಯಕ್ರಮದಲ್ಲಿ ತೇಜಸ್ ಪ್ರಾರ್ಥಿಸಿದರು. ಪೂಜಾ ನಿರೂಪಣೆ ಮಾಡಿದರು. ಬೃಂದಾ ಸ್ವಾಗತಿಸಿ ನಿತಿನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.