ಕ್ಯಾರಿ ಓವರ್ ಪದ್ಧತಿಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ತುಮಕೂರು , ಆ. 19
ಡಿಪ್ಲೊಮೋ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್ ಪದ್ಧತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ವಿಷ್ಣುವರ್ಧನ್, ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಡಿಪ್ಲೊಮೋ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಗ್ರಾಮೀಣ ಬಡ ವರ್ಗದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಆಗಿದ್ದಾರೆ.
ಒಂದೆಡೆ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಬೋಧಕರ ಕೊರತೆ, ಪಠ್ಯಪುಸ್ತಕ, ಪ್ರಯೋಗಶಾಲೆಗಳ ಕೊರತೆ ಹಾಗೂ ಭಾಷಾ ಸಮಸ್ಯೆಗಳ ನಡುವೆ ಅಧ್ಯಯನ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಲ್ಲಿ ಗೊಂದಲ: ಇಂತಹ ಎಲ್ಲಾ ಸಮಸ್ಯೆಗಳ ನಡುವೆ ಕಳೆದ ಸಾಲಿನ ಪರೀಕ್ಷೆಯ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆ ಇದ್ದುದರಿಂದ ಚುನಾವಣೆ ನಂತರ ನಡೆಯಬೇಕಿದ್ದ ಪರೀಕ್ಷೆಗಳನ್ನು ಅವಧಿಗೂ ಮುನ್ನವೆ ನಡೆಸಿದ್ದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು.
ತೇರ್ಗಡೆ ಸಾಧ್ಯವಾಗದೆ ಸಂಕಷ್ಟ: ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ವಿಷಯಗಳು ಹಾಗೂ ಹಿಂದಿನ ತರಗತಿಯಲ್ಲಿ ಅನುತ್ತೀರ್ಣವಾದ ವಿಷಯಗಳ ಪರೀಕ್ಷೆಗಳನ್ನು ತಾಂತ್ರಿಕ ಶಿಕ್ಷಣ ಮಂಡಳಿಯ ಅವೈಜ್ಞಾನಿಕ ಪರೀಕ್ಷಾ ವೇಳಾಪಟ್ಟಿಯಿಂದ ಒಂದೇ ದಿನದಲ್ಲಿ ಎರಡೆರಡು ಪರೀಕ್ಷೆಗಳನ್ನು ಬರೆಯಬೇಕಾಗಿ ಬಂದಿದ್ದರಿಂದ ಹಾಗೂ ಕ್ಯಾರಿ ಓವರ್ ದೊರೆತ ವಿದ್ಯಾರ್ಥಿಗಳು ಸುಮಾರು ಒಂದೂವರೆ ತಿಂಗಳು ತಡವಾಗಿ ತರಗತಿಗಳಿಗೆ ಪ್ರವೇಶ ಪಡೆದುದ್ದರಿಂದ ಉತ್ತಮ ಅಂಕ ಗಳಿಸುವಲ್ಲಿ ಅಥವಾ ತೇರ್ಗಡೆಯಾಗುವುದರಲ್ಲಿ ವಿಫಲರಾಗಿರುತ್ತಾರೆ. ಇದರ ಜೊತೆಗೆ ಬಿಡುವು ನೀಡದೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದರಿಂದ ಅಲ್ಪಾವಧಿಯ ಸಿದ್ದತೆಯಲ್ಲಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದಿದ್ದಾರೆ.
ಹಳೆ ಪದ್ಧತಿಯೇ ಇರಲಿ: ರಾಜ್ಯ ಸರ್ಕಾರ ಹಾಗೂ ತಾಂತ್ರಿಕ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳ ಪರ ಅಂದರೆ ಕ್ಯಾರಿ ಓವರ್ ಪದ್ಧತಿಯು ಈ ಹಿಂದೆ ಹೇಗಿತ್ತೋ ಅದರಂತೆಯು ಮುಂದುವರೆಯಲು ಆದೇಶಿಸುವುದು, ಸಾಧ್ಯವಾಗದಿದ್ದಲ್ಲಿ ಪದವಿ ಶಿಕ್ಷಣದಲ್ಲಿ ಯಾವ ರೀತಿ ಪದವಿ ಶಿಕ್ಷಣ ಮಂಡಳಿಯು ಎಷ್ಟೇ ವಿಷಯಗಳಲ್ಲಿ ಅನುತ್ತೀರ್ಣ ಹೊಂದಿದ್ದರೂ ಕೂಡ ಯಾವುದೇ ನಿರ್ಬಂಧವಿಲ್ಲದೆ ಅಂತಿಮ ವರ್ಷದವರೆಗಯೂ ವ್ಯಾಸಂಗ ಮಾಡುವ ಹಾಗೂ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಬೇಕು ಎಂದಿದ್ದಾರೆ.
ಕೂಡಲೇ ನಿಲವು ಪ್ರಕಟಿಸಿ: ಸರಿಯಾದ ಹಾಗೂ ಶಾಶ್ವತ ನಿಲುವನ್ನು ಹೆಚ್ಚು ವಿಳಂಬ ಮಾಡದೆ ಈ ಕೂಡಲೇ ಪ್ರಕಟಿಸಬೇಕು ಇದರಿಂದ ಹಾಲಿ ಕ್ಯಾರಿ ಓವರ್ ಸಿಗದೆ ಗೊಂದಲಕ್ಕೀಡಾಗಿರುವ ವಿದ್ಯಾರ್ಥಿಗಳಲ್ಲದೆ ಪ್ರಸಕ್ತ ಸಾಲಿನ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮುಂದೆ ಈ ತರಹದ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ. ಆದುದರಿಂದ ಈಗಾಗಲೇ ತರಗತಿಗಳು ಪ್ರಾರಂಭವಾಗಿ ಒಂದು ತಿಂಗಳು ಕಳೆದಿರುವುದರಿಂದ ಈ ಕೂಡಲೇ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಪರಿಹರಿಸಬೇಕೆಂದು ಕೋರಿದ್ದಾರೆ.
ಡಿಸಿಗೆ ಮನವಿ ಪತ್ರ: ವಿಚಾರವಾಗಿ ಜರೂರಾಗಿ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೂ ಹಾಗೂ ಶಿಕ್ಷಣ ಸಚಿವರಿಗೂ ಒತ್ತಾಯಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಮೂರ್ತಿ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಕ್ಷಯ್ ಚೌಧರಿ, ಜಿಲ್ಲಾ ಉಪಾಧ್ಯಕ್ಷ ದೀಪಕ್ ಟಿ.ಎಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ್ ಕುಮಾರ್ ಜಿ.ಆರ್., ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಕೆ. ರವಿರವರು, ಗ್ರಾಮಾಂತರ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಜೇಶ್ ಜಿ.ಎಲ್., ಹಾಗೂ ಹೆಬ್ಬೂರು ಹೋಬಳಿ ಕರವೇ ಅಧ್ಯಕ್ಷ ರಾಜೇಶ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

