ತುಮಕೂರು

ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ

Published On :

ಚಿಕ್ಕನಾಯಕನಹಳ್ಳಿ: ಕಿತ್ತೂರು ರಾಣಿ ಚನ್ನಮ್ಮ ಮತ್ತು ಪರಿಶಿಷ್ಟ ಜಾತಿ ಆಶ್ರಮಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಹುಟ್ಟಿದ ಪ್ರತಿ ಮಗುವಿಗು ಸಹ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ವಸತಿಶಾಲೆಯ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ಹಾಗು ಇತರೆ ಲೇಖನ ಸಾಮಗ್ರಿಗಳನ್ನು ಒದಗಿಸಲಾಗಿದ್ದು, ಅವುಗಳನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಪ್ರಾಂಶುಪಾಲ ಲೋಕೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಯಾಸ್ಮಿನ್, ಅಶ್ವಿನಿ, ಪುಷ್ಪ ಹಾಗು ಮಧು ಇದ್ದರು.
ನಾಳೆ ಲಿಂಗಾಯಿತ
ನೌಕರರ ಸಮ್ಮೇಳನ
ತಿಪಟೂರು: ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಬಸವೇಶ್ವರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ವೀರಶೈವ ಲಿಂಗಾಯಿತ ನೌಕರರ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಗರದ ಎಸ್.ವಿ.ಪಿ ಕಾಲೇಜು ಆವರಣದಲ್ಲಿ ಆ.25ರ ಭಾನುವಾರ ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ಪ್ರ.ಕಾರ್ಯದರ್ಶಿ ಹಾಗೂ ಬಾಲ್ಕಿ ಕ್ಷೇತ್ರದ ಶಾಸಕರಾದ ಈಶ್ವರ್ ಭೀಮಣ್ಣ ಖಂಡ್ರೆ ಉದ್ಘಾಟಿಸಲಿದ್ದು, ಶಾಸಕ ಕೆ.ಷಡಕ್ಷರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಳಿಗೆರೆ ಕಾಲೇಜಿನ ಉಪನ್ಯಾಸ ತಗಡೂರು ವೀರಭದ್ರಪ್ಪ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಮಾಜಿ ಶಾಸಕ ಟಿ.ಜಿ.ತಿಮ್ಮೇಗೌಡರು,ಎಸ್.ಪಿ. ಗಂಗಾಧರಪ್ಪ, ಬಿ.ನಂಜಾಮರಿ,ಕೆಜೆಪಿ ಮುಖಂಡ ಲೋಕೇಶ್ವರ, ಕೆ.ವಿ.ಎಸ್.ಅಧ್ಯಕ್ಷ ಎನ್.ಬಸವಯ್ಯ,ಎಸ್.ವಿ.ವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಕೆ.ರಾಜಶೇಖರ್ ಸೇರಿದಂತೆ ಸಂಘಗಳ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಸಂಸ್ಕೃತದಿಂದ ಮಾತ್ರ ಮಾನವನ ಸಂಸ್ಕಾರ: ಸ್ವಾಮೀಜಿ
ಚಿಕ್ಕನಾಯಕನಹಳ್ಳಿ: ಸಂಸ್ಕೃತ ಭಾಷೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾನವ ಸಂಸ್ಕಾರವಂತನಾಗಿ ಬಾಳುವುದನ್ನು ಕಲಿಯುತ್ತಾನೆ ಎಂದು ಕೆರೆಗೋಡಿರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ನುಡಿದರು. ಅವರು ಭೂಸುಕ್ಷೇತ್ರ ಗೋಡೇಕೆರೆ ಶ್ರೀಮದ್‌ರಂಭಾಪುರಿ ಸ್ಥಿರಪಟ್ಟಾಧ್ಯಕ್ಷ ಕೆ.ಬಿ.ಕ್ರಾಸ್  ಮಠದ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಂಸ್ಕೃತೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು. ಹೆಚ್ಚುತ್ತಿರುವ ನಗರೀಕರಣ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ, ಆಧುನಿಕ ಜೀವನಶೈಲಿಯ ಆಕರ್ಷಣೆಯಿಂದ ಮಾನವ ಧಾರ್ಮಿಕ ದಿವಾಳಿತನವನ್ನು ತಲುಪಿದ್ದಾನೆ. ಬದುಕಿಗೆ ಒಂದು ಗುರಿಯಿಲ್ಲದೆ ದಿಕ್ಕುತಪ್ಪಿ ಅತಂತ್ರವಾಗಿರುವ ವ್ಯಕ್ತಿಗೆ ಸಂಸ್ಕೃತ ಶಿಕ್ಷಣ ಮಾರ್ಗದರ್ಶನವಾಗಲಿದೆ ಎಂದರು. ಗೋಡೇಕೆರೆ ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಷಡಕ್ಷರಿ ಮಠದ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಎಂ.ಎಂ.ಜಗದೀಶ್  ಇದ್ದರು.ಗಿರೀಶ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಹಳೇಮನೆ ಶಿವನಂಜಪ್ಪ,ಡಿ.ಎಸ್.ಚಂದ್ರಶೇಖರಯ್ಯ,ಡಿ.ಎಸ್ ಪರಮೇಶ್ವರಯ್ಯ, ಎಂ.ಸಿ.ಭೋಜಯ್ಯ, ಬಿ.ಆರ್.ರಂಗನಾಥ್, ಸಿ.ವೈ.ಶಂಕರೇಶ್ವಯ್ಯ, ಸಿ.ಎಂ.ನವೀನ್ ಮುಂತಾದವರಿದ್ದರು.
ಪಾರ್ಥೇನಿಯಂ
ಜಾಗೃತಿ ಸಪ್ತಾಹ
ತುಮಕೂರು: ಪಾರ್ಥೇನಿಯಂ ನಿಯಂತ್ರಣ ಕುರಿತ ಜಾಗೃತಿ ಸಪ್ತಾಹ  ಕಾರ್ಯಕ್ರಮ ತಿಪಟೂರಿನ ಬಿದರೆಗುಡಿ ಕಾವಲ್‌ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಜರುಗಿತು. ಕೃಷಿ ವಿಜ್ಞಾನ ಕೇಂದ್ರ, ಬಿದರೆಗುಡಿ ಕಾವಲ್ ಮತ್ತು ಕಳೆ ನಿರ್ವಹಣಾ  ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ  ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಯೋಜಕ  ಡಾ. ಜಿ.ಎಂ. ಸುಜೀತ್‌ರವರು ಪಾರ್ಥೇನಿಯಂ ಜಾಗೃತಿ ಸಪ್ತಾಹದ ಪ್ರಾಮುಖ್ಯತೆ ಹಾಗೂ ಕಳೆಯ ನಿಯಂತ್ರಣ ಕುರಿತು ವಿವರಿಸಿದರು.
ಕಳೆ ನಿರ್ವಹಣಾ ವಿಭಾಗ: ಡಾ. ದೇವೆಂದ್ರ  ಮತ್ತು ಡಾ. ಸುಜಯ್ ಅವರು ಪಾರ್ಥೆನಿಯಂ ಕಳೆಯ ನಿಯಂತ್ರಣ ಕುರಿತು ವಿವರಿಸುತ್ತಾ, ಇಂತಹ ಮಾರಕ ಕಳೆಯನ್ನು ಹತೋಟಿ ಮಾಡುವುದು ಬಹಳ ಮುಖ್ಯ ಹಾಗೂ ಭೌತಿಕವಾಗಿ, ಜೈವಿಕವಾಗಿ ಹಾಗೂ ರಾಸಾಯನಿಕವಾಗಿ ಈ ಕಳೆಯನ್ನು ನಿಯಂತ್ರಣ ಮಾಡುವುದನ್ನು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿದರು. ಕೇಂದ್ರದ  ವಿಜ್ಞಾನಿಗಳಾದ ಡಾ. ಹೆಚ್.ಎಸ್.ಮಮತ, ಡಾ. ಶ್ರೀನಿವಾಸರೆಡ್ಡಿ, ಡಾ.ನಾಗಪ್ಪ ದೇಸಾಯಿ ಹಾಗೂ ಡಾ. ಬಿ.ಮಮತ ಸೇರಿದಂತೆ ಸುಮಾರು 60 ಮಂದಿ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
ಎಫ್.ಎಮ್‌ನಲ್ಲಿಂದು ಗಮಕ ವಾಚನ
ತುಮಕೂರು: ರೇಡಿಯೋ ಸಿದ್ಧಾರ್ಥ 90.8 ಎಫ್.ಎಮ್ ಸಮುದಾಯ ಬಾನುಲಿ ಕೇಂದ್ರದ ಪ್ರಸಾರದಲ್ಲಿ ಇದೇ ತಿಂಗಳ 24 ರಂದು ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಸುಧನ್ವನ ಭಕ್ತಿ ಕಥಾ ಪ್ರಸಂಗದ ಗಮಕ ವಾಚನ ಮತ್ತು ಸಂಜೆ 7.30 ರಿಂದ 9 ಗಂಟೆಯವರೆಗೆ ಚಂಡಿ ಉದ್ಧಾಲಕ ಪ್ರಸಂಗದ ಗಮಕ ವಾಚನವನ್ನು ಆಲಿಸಬಹುದಾಗಿದೆ.
ಹಾಲು ಉತ್ಪಾದಕರ
ಸಂಘದ ಚುನಾವಣೆ
ತಿಪಟೂರು: ತಾಲೂಕಿನ ಬೊಮ್ಮಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ 2013-18ನೇ ಸಾಲಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಲಿ ನಿರ್ದೇಶಕರ ಆಯ್ಕೆಗಾಗಿ ಆ.25ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಸಂಘದ ಆವರಣದಲ್ಲಿ ಚುನಾವಣೆ ನಡೆಯಲಿದೆ ಎಂದು ಕಾರ್ಯದರ್ಶಿ ಬಿ.ಎನ್.ಮೋಹನ್‌ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆ
ತಿಪಟೂರು: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಶ್ರೀ ಗುರುಕುಲ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿಜೇತ ತಂಡಕ್ಕೆ ಮುಖ್ಯಶಿಕ್ಷಕಿ ಪದ್ಮಾವತಿ ಜಯಂತ್, ಶ್ರೀ ಮಠದ ವಿದ್ಯಾಸಂಸ್ಥೆಯ ವೇ.ಮರಿಸಿದ್ದಯ್ಯ, ದೈಹಿಕ ಶಿಕ್ಷಕ ತೀರ್ಥಪ್ರಸಾದ್ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.