ತುಮಕೂರು

ಪೊಲೀಸ್ ಸ್ತಬ್ಧ, ಅಪರಾಧ ಶಬ್ದ: ರಾಜಣ್ಣ

Published On :

ಕನ್ನಡಪ್ರಭ ವಾರ್ತೆ ತುಮಕೂರು ಆ.24
ತುಮಕೂರು ಜಿಲ್ಲೆಯಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ದುಷ್ಕೃತ್ಯಗಳು ನಿರಂತರವಾಗಿ ನಡೆದಿವೆ ಎಂದು ಆಡಳಿತ ಕಾಂಗ್ರೆಸ್ ಪಕ್ಷದ ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕೆ.ಎನ್. ರಾಜಣ್ಣ ಆತಂಕ ವ್ಯಕ್ತಪಡಿಸಿದರು.
ಅವರು ತುಮಕೂರಿನಲ್ಲಿ ಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷವಾಗಿ ತುಮಕೂರು ನಗರ ಹಾಗು ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಪೊಲೀಸರ ನಿಷ್ಕ್ರಿಯತೆಯಿಂದಾಗಿ ಅಪರಾಧಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಎಂದು ನೇರವಾಗಿ ಆರೋಪಿಸಿದರು.
ಮನೆಗಳ್ಳತನ ಮಾಮೂಲಾಗಿದೆ: ಸರಗಳ್ಳತನ, ಮನೆಗಳ್ಳತನ ಮಾಮೂಲಾಗಿ ಹೋಗಿದೆ. ಕೊಲೆಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಕಾನೂನು ಬಾಹಿರವಾಗಿ ಮರಳು ಸಾಗಣೆ ನಡೆಯುತ್ತಿದೆ. ಮರಳು ಮಾಫಿಯಾ ಸಕ್ರಿಯವಾಗಿದೆ. ಪಾವಗಡದಂತಹ ತಾಲೂಕುಗಳಲ್ಲಿ ಮಟ್ಕಾ, ಜೂಜು ನಿರಂತರವಾಗಿ ನಡೆದಿದೆ. ಆದರೆ ಜಿಲ್ಲಾ ಪೊಲೀಸ್ ಮೌನ ವಹಿಸಿದೆ. ಮೊಬೈಲ್ ಪೋನ್‌ಗಳಲ್ಲಿ ಜೂಜು ಸಹ ನಡೆದಿದೆ. ಜನತೆ ಆತಂಕದಲ್ಲಿದ್ದಾರೆ. ಪೊಲೀಸರು ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು.
ವಿರೋಧಪಕ್ಷದ ಪಾತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಕೆ.ಎನ್. ರಾಜಣ್ಣ ನೇರ ನಡೆ-ನುಡಿಗೆ ಹೆಸರಾದವರು. ಜಿಲ್ಲೆಯಲ್ಲಿ ಆಡಳಿತ ವೈಫಲ್ಯ ಕುರಿತಂತೆ ವಿರೋಧ ಪಕ್ಷಗಳು ಮಾಡಬೇಕಾದ ಕೆಲಸವನ್ನು ಆಡಳಿತ ಪಕ್ಷದ ಶಾಸಕರಾಗಿರುವ ಕೆ.ಎನ್. ರಾಜಣ್ಣ ಮಾಡಿರುವುದು ಗಮನಾರ್ಹ. ಇಲ್ಲಿ ವಿರೋಧ ಪಕ್ಷಗಳಾಗಿರುವ ಜೆಡಿಎಸ್ ಹಾಗೂ ಬಿಜೆಪಿ ನಿಷ್ಕ್ರಿಯವಾಗಿರುವುದು ಸಹ ಗಮನಾರ್ಹ ಸಂಗತಿ.
ಕೃಷ್ಣ ಜನ್ಮಾಷ್ಟಮಿಗೆ ರಜೆ ನೀಡಿ: ಕನಕದಾಸ, ವಾಲ್ಮೀಕಿ ಜಯಂತಿಗಳಿಗೆ ಸರ್ಕಾರ ಈಗಾಗಲೇ ಸಾರ್ವತ್ರಿಕ ರಜೆ ಘೋಷಿಸಿದೆ. ಹಾಗೆಯೇ ಕೃಷ್ಣ ಜನ್ಮಾಷ್ಟಮಿಗೂ ಸಾರ್ವತ್ರಿಕ ರಜೆ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿಯೂ, ಪತ್ರ ಬರೆಯುವುದಾಗಿಯೂ ರಾಜಣ್ಣ ತಿಳಿಸಿದರು.
ರಾಜ್ಯದಲ್ಲಿ ವಾಲ್ಮೀಕಿ ಜನಾಂಗಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಅಂದಾಜು 80 ಲಕ್ಷಕ್ಕಿಂತ ಹೆಚ್ಚಿರುವ ಗೊಲ್ಲ ಜನಾಂಗದಿಂದ ಯಾವುದೇ ಸಂಸದರು, ಶಾಸಕರು ರಾಜ್ಯದಿಂದ ಆಯ್ಕೆಯಾಗಿಲ್ಲ. ಶ್ರೀಕೃಷ್ಣ ಗೊಲ್ಲ ಜನಾಂಗಕ್ಕೆ ಸೇರಿದ ವ್ಯಕ್ತಿ ಎಂಬುದು ಈಗಾಗಲೇ ಜನಜನಿತ. ಹೀಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವತ್ರಿಕ ರಜೆ ಘೋಷಿಸುವ ಮೂಲಕ ಗೊಲ್ಲರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿ ಎಂಬ ಆಶಯ ತಮ್ಮದು ಎಂದು ಕೆಎನ್‌ಆರ್ ತಿಳಿಸಿದರು.
ಬಡ ವಿದ್ಯಾರ್ಥಿಗಳಿಗೆ ಚಪ್ಪಲಿ: ಜಿಲ್ಲೆಯಲ್ಲಿ ಪ್ರೌಢಶಾಲೆಯವರೆಗಿನ ಸರ್ಕಾರಿ ಶಾಲೆಯ ಬಡವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಚಪ್ಪಲಿಗಳನ್ನು ನೀಡುವ ಯೋಜನೆ ಜಾರಿಗೆ ಚಿಂತನೆ ನಡೆದಿದೆ. ಡಿಸಿಸಿ ಬ್ಯಾಂಕ್ ವತಿಯಿಂದ ಯೋಜನೆ ಜಾರಿಗೊಳಿಸುವ ಇರಾದೆಯಿದೆ ಎಂದು ಶಾಸಕ ಕೆ.ಎನ್. ರಾಜಣ್ಣ ಇದೇ ಸಂದರ್ಭದಲ್ಲಿ ತಿಳಿಸಿದರು.
ಗೆಲುವು ನಿರೀಕ್ಷಿತ: ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿತ್ತು. ವಿನಾ ಕಾರಣ ಅನುಮಾನಗಳು ಮಾದ್ಯಮಗಳಲ್ಲಿ ವ್ಯಕ್ತವಾಗುತ್ತಿದ್ದವು. ಅದೃಶ್ಯ ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾರ್ಯಕ್ರಮ, ಆಡಳಿತದಿಂದ ಜನತೆ ಈ ಲೋಕಸಭಾ ಉಪ ಚುನಾವಣೆಯಲ್ಲಿ ಕೈ ಹಿಡಿದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರಮೇಶ್ವರ್‌ಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ದ: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೇಳಿದಲ್ಲಿ ಕೂಡಲೇ ರಾಜಿನಾಮೆ ನೀಡಿ ಮಧುಗಿರಿ ಕ್ಷೇತ್ರ ಬಿಟ್ಟುಕೊಡಲು ಸಿದ್ದವಿರುವುದಾಗಿ  ಈ ಹಿಂದೆ ಹೇಳಿದ್ದೆ. ಕ್ಷೇತ್ರ ಬಿಟ್ಟು ಕೊಡಲು ಈಗಲೂ ಸಿದ್ದ ಹಿಂದಿನಂತೆ ಈಗಲೂ ಮಾತಿಗೆ ಬದ್ಧನಾಗಿದ್ದೇನೆ ಎಂದು ಕೆಎನ್‌ಆರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2005 ರ ಆರ್ಥಿಕ ಕಾಯ್ದೆ ಮೂಲೆಗುಂಪು
ತುಮಕೂರು: ಎಸ್‌ಸಿ, ಎಸ್‌ಟಿ, ಓಬಿಸಿ, ಅಲ್ಪಸಂಖ್ಯಾತರಿಗೆ ಸರ್ಕಾರಿ ಸ್ವಾಮ್ಯದ ಆರ್ಥಿಕ ಚಟುವಟಿಕೆಗಳಲ್ಲಿ ಇತರರಂತೆ ಸಮಾನವಾಗಿ ಪಾಲ್ಗೊಳ್ಳಲು ಆದ್ಯತೆ ನೀಡುವುದು ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ 2005 ರಲ್ಲೇ ಕಾಯ್ದೆ ಕೂಡ ಬಂದಿದೆ. ಆದರೆ ಈ ವರೆವಿಗೆ ಇದು ಸಮರ್ಪಕವಾಗಿ ಜಾರಿಯಾಗದಿರುವುದು ವಿಷಾದನೀಯ ಎಂದು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು. ಹಿಂದುಳಿದವರಿಗೆ ಆದ್ಯತೆ ನೀಡದಿರುವುದು ಸ್ಪಷ್ಟ ಕಾನೂನು ಉಲ್ಲಂಘನೆ. ಕಂಟ್ರಾಕ್ಟ್, ಪರ್ಮಿಟ್, ಲೈಸೆನ್ಸ್ ಸೇರಿದಂತೆ ಇತರೆ ಆರ್ಥಿಕ ಚಟುವಟಿಕೆಗಳಲ್ಲಿ ಇತರರಂತೆ ಸಮಾನವಾಗಿ ಪಾಲ್ಗೊಳ್ಳಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಕುರಿತು ಈವರೆಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಕಾಯ್ದೆಯನ್ನು ಕೂಡಲೇ ಸಮರ್ಪಕವಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ರಾಜಣ್ಣ ಆಗ್ರಹಿಸಿದರು.

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ
ತುಮಕೂರು: ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ತಾಲೂಕುಗಳಲ್ಲಿ ಈ ಬಾರಿ ಅಲ್ಲಲ್ಲಿ ಮಳೆ ಬಿದ್ದಿರುವುದು ಬಿಟ್ಟರೆ, ಬಹುತೇಕ ಕಡೆ ಬರ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಗೋಶಾಲೆ, ಗಂಜಿ ಕೇಂದ್ರ ತೆರೆಯಬೇಕು. ಕುಡಿಯುವ ನೀರು ಹಾಗೂ ರೈತರಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ರಾಜಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಂಟಿ ಭಾದ್ಯತಾ ಗುಂಪು ಮೂಲಕ ಕೃಷಿಯೇತರ ಸಾಲ
ತುಮಕೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಂಟಿ ಭಾಧ್ಯತಾ ಗುಂಪುಗಳನ್ನು ರಚಿಸುವ ಮೂಲಕ ಕೃಷಿಯೇತರ ಚಟುವಟಿಕೆಗಳಿಗೂ ಸಾಲ ನೀಡುವ ಹೊಸದಾದ ಯೋಜನೆಯನ್ನು ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ಅನುಷ್ಠಾನಕ್ಕೆ ತಂದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಯೋಜನೆಯಡಿಯಲ್ಲಿ 2103  ರಲ್ಲಿ 338  ಗುಂಪುಗಳು ರಚನೆಯಾಗಿದ್ದು ,ಈ ಪೈಕಿ 67 ಗುಂಪುಗಳಿಗೆ ರು. 57.35 ಲಕ್ಷ ಸಾಲ ನೀಡಲಾಗಿದೆ. ಜಂಟಿ ಭಾದ್ಯತಾ ಗುಂಪುಗಳ ರಚನೆಯಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ರಚಿಸುವ ಮೂಲಕ ಸಾಲ ಜೋಡನೆ ಮಾಡುವ ಸಲುವಾಗಿ ಕ್ರಿಯಾ ಯೋಜನೆ ರೂಪಿಸಿರುವುದಾಗಿ ನುಡಿದರು.
ಅಲೆಮಾರಿಗಳಿಗೆ ನೆರವು:  ಬ್ಯಾಂಕಿನ ಸೌಲಭ್ಯ ದೊರೆಯುವುದೂ ಕಷ್ಟವಾಗಿದ್ದ ಅಲೆಮಾರಿಗಳಿಗೂ ಬ್ಯಾಂಕ್ ಆರ್ಥಿಕ ನೆರವು ನೀಡಿದ್ದು, ಚಿ.ನಾ.ಹಳ್ಳಿ-ಗುಬ್ಬಿ ತಾಲೂಕುಗಳಲ್ಲಿ ಅಲೆಮಾರಿ ಜನಾಂಗದ ಸ್ವಸಹಾಯ ಗುಂಪುಗಳನ್ನು ರಚಿಸಿ ಆವುಗಳ ಮೂಲಕ ರು.1 ಕೋಟಿ ಸಾಲ ನೀಡಿರುವುದಾಗಿ ಕೆ.ಎನ್.ರಾಜಣ್ಣ ನುಡಿದರು.
ಕೋರ್ ಬ್ಯಾಂಕಿಂಗ್: ರಾಜ್ಯದಲ್ಲಿಯೇ ಕೋರ್ ಬ್ಯಾಂಕಿಂಗ್ ಸಲ್ಯೂಷನ್ಸ್ ಅಳವಡಿಸಿರುವ ಏಕೈಕ ಬ್ಯಾಂಕ್ ತುಮಕೂರು ಡಿಸಿಸಿ ಬ್ಯಾಂಕಾಗಿದ್ದು, ಎಲ್ಲಾ 24 ಶಾಖೆಗಳಲ್ಲೂ ಈ ಸೌಲಭ್ಯ ಕಲ್ಪಿಸಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 10,972  ಸ್ವಸಹಾಯ ಸಂಘಗಳನ್ನು ರಚಿಸಿ 22,268 ಗುಂಪುಗಳಿಗೆ ಹೊಸ ಹಾಗೂ ರಿಪೀಟೆಡ್ ಸಾಲದ ರೂಪದಲ್ಲಿ  ರು.29096.75 ಲಕ್ಷ ಸಾಲ ನೀಡಲಾಗಿದೆ ಎಂದರು. 2012-13 ರಲ್ಲಿ 769 ಗುಂಪುಗಳನ್ನು ರಚಿಸಿ, ಒಟ್ಟು 3262 ಗುಂಪುಗಳಿಗೆ 8198.12 ಲಕ್ಷ ರೂಗಳ ಸಾಲ ನೀಡಲಾಗಿದೆ ಎಂದರು.
ಪ್ರತಿಭಾ ಪುರಸ್ಕಾರ: ಕಳೆದ ವರ್ಷ ಕೃಷಿ ಪತ್ತಿನ ಸಹಕಾರ ಸಂಘಗಳ ರೈತರ 90 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗಿತ್ತು. ಈ ಬಾರಿಯೂ ಭಾನುವಾರ ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಗುವುದು ಎಂದರು.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನರಸಿಂಹಮೂರ್ತಿ, ನಿರ್ದೇಶಕರಾದ ನಾರಾಯಣಗೌಡ, ಸಿಂಗದಹಳ್ಳಿ ರಾಜಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.