ಜಿಲ್ಲಾ ಪೊಲೀಸರನ್ನು ಸಮರ್ಥಿಸಿದ ಟಿಬಿಜೆ
ಕ.ಪ್ರ.ವಾರ್ತೆ , ತುಮಕೂರು , ಆ. 26
ಆಡಳಿತ ಪಕ್ಷದ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲಾ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದ ಬೆನ್ನಲ್ಲೇ ಕಾನೂನು ಹಾಗೂ ಸಂಸದೀಯ ವ್ಯವಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಪರಾಧ ಪ್ರಕರಣಗಳ ಅಂಕಿ - ಸಂಖ್ಯೆ ಮುಂದಿಟ್ಟು ಆರೋಪವನ್ನು ಪರೋಕ್ಷವಾಗಿ ಅಲ್ಲಗಳೆದ ಘಟನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜತೆಗೆ ಪೊಲೀಸ್ ಸಿಬ್ಬಂದಿ ಕೊರತೆ ಕೂಡ ಇದೆ ಎಂದು ಹೇಳುವ ಮೂಲಕ, ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕೇವಲ ಪೊಲೀಸರಷ್ಟೇ ಅಲ್ಲ, ಸರ್ಕಾರ ಕೂಡ ನೇರ ಹೊಣೆಗಾರ ಎಂದು ಪರೋಕ್ಷವಾಗಿ ಒಪ್ಪಿಕೊಂಡರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಶತದಿನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಯಚಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಹಿಂದಿನ ಸರ್ಕಾರದ ಕಳೆದೆರಡು ವರ್ಷಗಳ ಅವಧಿಗೆ ಹೋಲಿಸಿದರೆ ಈ ವರ್ಷ ನಡೆದಿರುವ ಅಪರಾಧಗಳ ಸಂಖ್ಯೆ ಕಡಿಮೆಯಿದೆ. ಇದಕ್ಕೆ ಅಂಕಿ - ಅಂಶಗಳೇ ಆಧಾರ ಎಂದರು.
ಕಡಿಮೆ: ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಅಂದರೆ 2011 ರಲ್ಲಿ 98 ಕೊಲೆಗಳು, 2012 ರಲ್ಲಿ 81 ಕೊಲೆ, 2013 ರಲ್ಲಿ 29 ಕೊಲೆಗಳು ನಡೆದಿವೆ. ಅದೇ ರೀತಿ ಸರಗಳ್ಳತನ ಪ್ರಕರಣಗಳು ಕೂಡ ಕಡಿಮೆಯೇ. 2011 ರಲ್ಲಿ 88 ಸರಗಳ್ಳತನ, 2012 ರಲ್ಲಿ 92 ಹಾಗೂ 2013 ರಲ್ಲಿ 68 ಸರಗಳ್ಳತನ ಪ್ರಕರಣಗಳು ನಡೆದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಸರಗಳ್ಳತನ ಈ ಬಾರಿ ಸ್ವಲ್ಪ ಹೆಚ್ಚಾದಂತೆ ಕಂಡು ಬಂದರೂ, ಒಟ್ಟಾರೆ ಅಂಕಿ -ಅಂಶಗಳ ಆಧಾರದಲ್ಲೇ ನೋಡುವುದಾದರೆ 2013 ರಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮಧ್ಯಂತರ ವರದಿ ನೀಡುವ ಮೂಲಕ ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವರು ಶಹಭಾಷ್ಗಿರಿ ನೀಡಿದರು.
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಜೆಟ್, ನಂತರ ಲೋಕಸಭಾ ಉಪಚುನಾವಣೆ ಬೇರೆ ಬಂತು. ಹೀಗಾಗಿ ಪೊಲೀಸರನ್ನು ಆ ಕಡೆ ಕೂಡ ವರ್ಗಾಯಿಸಲಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾಗಿರಬಹುದು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದೂ ಕೂಡ ಗಮನಾರ್ಹ. ಯಾವುದೇ ಮಂತ್ರಿ ಪೊಲೀಸ್ ಸ್ಟೇಷನ್ ಮಾಹಿತಿ ಆಧರಿಸಿ ಮಾತನಾಡಬೇಕು ಎಂದರು.
ಊಹಿಸಲಾಗದು: ಯಾರಿಗೇ ಆದರೂ ಅಪರಾಧಗಳಾಗುವುದನ್ನು ಊಹಿಸುವುದು ಕಷ್ಟ. ಸರಗಳ್ಳತನಗಳು ಪದೇ - ಪದೇ ನಡೆದಿರಬಹುದು. ಲೋಕಸಭಾ ಉಪಚುನಾವಣಾ ಬೇರೆ ಇತ್ತು ಎಂದು ಜಯಚಂದ್ರ ಸಮರ್ಥಿಸಿಕೊಂಡರು.
ದೊಡ್ಡ ಜಿಲ್ಲೆ: ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು 10 ತಾಲೂಕುಗಳನ್ನು ಒಳಗೊಂಡ ದೊಡ್ಡ ಜಿಲ್ಲೆ. ಸುಮಾರು 26 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಎಂಬುದನ್ನು ಮರೆಯಬಾರದು. ಸಹಜವಾಗೇ ಪೊಲೀಸರ ಮೇಲೆ ಒತ್ತಡವಿರುತ್ತದೆ ಎಂದು ಪೊಲೀಸರನ್ನು ಜಯಚಂದ್ರ ಸಮರ್ಥಿಸಿದರು.
ಎಸ್ಪಿಗೆ ಆಡಳಿತದ ಜವಾಬ್ದಾರಿಯಿದೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲೆಯ ಕಾನೂನು, ಸುವ್ಯವಸ್ಥೆ ಸೇರಿದಂತೆ ಆಡಳಿತದ ಜವಾಬ್ದಾರಿಯಿರುತ್ತದೆ. ಎಲ್ಲಕ್ಕೂ ಎಸ್ಪಿಯವರನ್ನು ದೂಷಿಸಲಾಗದು ಎಂದು ಹೇಳುವ ಮೂಲಕ ಎಸ್ಪಿ ರಮಣಗುಪ್ತ ಅವರನ್ನು ಪರೋಕ್ಷವಾಗಿ ಸಮರ್ಥಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಹಾಗೂ ಹೆಚ್ಚುವರಿ ಎಸ್ಪಿ ಹನುಮಂತರಾಯ ಅವರ ನಡುವೆ ಹೊಂದಾಣಿಕೆಯಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಇವೆಲ್ಲಾ ಸುಳ್ಳು ಸೃಷ್ಟಿಗಳು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪೊಲೀಸ್ ಸಿಬ್ದಂದಿ ಕೊರತೆ ನೀಗಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಪಂ ಸಿಇಓ ಗೋವಿಂದರಾಜು, ತಾಲೂಕುವಾರು ಎಸಿ, ತಹಸೀಲ್ದಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಅದಕ್ಷರಿಗೆ ಶಿಕ್ಷೆಯಿಲ್ಲ, ವರ್ಗಾವಣೆಯಷ್ಟೇ
ತುಮಕೂರು: ಅದಕ್ಷ ಪೊಲೀಸ್ ಅಧಿಕಾರಿಗಳಿಗೆ ಆ.31 ರೊಳಗೆ ವರ್ಗಾವಣೆ ಮಾಡಲಾಗುವುದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ಲೋಕಸಭಾ ಉಪಚುನಾವಣೆ, ಬಜೆಟ್ ಅಧಿವೇಶನ ಇದ್ದುದರಿಂದ ಆಡಳಿತದ ಕಡೆ ಒತ್ತು ನೀಡಲು ಆಗಿರಲಿಲ್ಲ ಎಂದ ಸಚಿವರು, ಅದಕ್ಷ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಕುರಿತಂತೆ ಯಾವುದೇ ಚಕಾರ ಎತ್ತದೆ, ಕೇವಲ ವರ್ಗಾವಣೆಯೇ ಶಿಕ್ಷೆ ಎಂಬಂತೆ ಮಾತನಾಡಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

