ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಭೂ ಪರಿಹಾರ ನೀಡಿ
ಕ.ಪ್ರ.ವಾರ್ತೆ , ತುಮಕೂರು , ಆ.26
ತುಮಕೂರು-ರಾಯದುರ್ಗ ರೇಲ್ವೆ ಹಳಿ ನಿರ್ಮಾಣಕ್ಕೆ ರೈತರಿಂದ ವಶಪಡಿಸಿಕೊಳ್ಳುವ ಭೂಮಿಗೆ ಇಂದಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು ಎಂದು ತುಮಕೂರು-ರಾಯದುರ್ಗ ರೇಲ್ವೆ ಹೋರಾಟ ಸಮಿತಿ ಜಿಲ್ಲಾಡಳಿತ ಹಾಗೂ ಸರಕಾರವನ್ನು ಒತ್ತಾಯಿಸಿದೆ.
ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಸಭೆಸೇರಿದ್ದ ರೇಲ್ವೆ ಹಳಿ ಹಾದು ಹೋಗುವ ಗ್ರಾಮಗಳ ರೈತರು ಸರಕಾರ ಇಂದಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರ ನೀಡಲು ಸಿದ್ದವಿದ್ದರೆ ಮಾತ್ರ ಭೂಮಿಯನ್ನು ನೀಡಲು ಸಿದ್ಧರಿರುವುದಾಗಿ ಒಕ್ಕೊರಲಿನ ತೀರ್ಮಾನ ಕೈಗೊಂಡರಲ್ಲದೆ, ಈ ಸಂಬಂಧ ಸರಕಾರದ ಮೇಲೆ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಒತ್ತಡ ಹಾಕಲು ಸಭೆಯಲ್ಲಿ ನಿರ್ಧಾರ ಕೈಗೊಂಡರು.
ಕರ್ನಾಟಕ ಭೂಸ್ವಾಧೀನ ಕಾಯ್ದೆ 1894 ರ ಅನ್ವಯ ರೈತರಿಗೆ ಪರಿಹಾರ ನೀಡುತ್ತಿದ್ದು, ಸಾಮಾನ್ಯ ಪರಿಹಾರದಡಿಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಲು ಮುಂದಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಆರ್.ಕೆ. ರಾಜು ರೈತರ ಕಷ್ಟಗಳನ್ನು ಆಲಿಸಿ ನಗರಸಭೆಯ ವ್ಯಾಪ್ತಿಗೆ ಒಳಪಡುವ ಭೂಮಿಗೆ ಗುಂಟೆಗೆ 3 ಲಕ್ಷ ರು. ಪರಿಹಾರ ನೀಡಲು ಒಪ್ಪಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಆದರೆ ಸರಕಾರ ಸದರಿ ಕಡತವನ್ನು ವಾಪಸು ಕಳುಹಿಸಿ ಪರಿಹಾರದ ಹಣವನ್ನು ಕಡಿಮೆ ನಿಗದಿ ಪಡಿಸುವಂತೆ ಸೂಚಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕಂಡು ಮಾತನಾಡಲು ಪ್ರಯತ್ನಿಸಿದರೆ ಡಿಸಿಯವರು ನಮಗೆ ಸ್ಪಂದಿಸುತ್ತಿಲ್ಲ. ನಮ್ಮ ಮನವಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ನಾವು ಸರಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಉಪನ್ಯಾಸಕ ಕೆ.ಎ.ಶಿವಬಸಪ್ಪ ತಿಳಿಸಿದರು.
ಒಪ್ಪಲು ಸಾಧ್ಯವಿಲ್ಲ: ಬರಡು ನೆಲವಾಗಿದ್ದ ವಸಂತನರಸಾಪುರ ಮತ್ತು ಸುತ್ತಮುತ್ತಲ ಭೂಮಿಗೆ ಎಕರೆಗೆ 8 ರಿಂದ 16 ಲಕ್ಷದ ವರೆಗೆ ಪರಿಹಾರ ನೀಡಲಾಗಿದೆ. ಆದರೆ ನಗರಸಭೆಯ ವ್ಯಾಪ್ತಿಗೆ ಒಳಪಡುವ ಚಿನ್ನದ ಬೆಲೆ ಇರುವ ಭೂಮಿಗೆ ಕಡಿಮೆ ಹಣ ನೀಡಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಾನೂನು ಹೋರಾಟ ಮಾಡುವುದರಿಂದ ಪರಿಹಾರ ದೊರೆಯುವುದು ಸಾಕಷ್ಟು ವಿಳಂಬವಾಗುವುದರಿಂದ ಜಿಲ್ಲಾಡಳಿತದೊಂದಿಗೆ ರಾಜೀ ಸಂಧಾನದ ಮೂಲಕ ಸೂಕ್ತ ಪರಿಹಾರ ಪಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ರೈತರು ಭಿಕ್ಷುಕರಲ್ಲ: ಕರ್ನಾಟಕ ರೈತಸಂಘದ ಸಂಚಾಲಕ ಬಿ.ಉಮೇಶ್ ಮಾತನಾಡಿ,ರೈತರು ಭಿಕ್ಷುಕರಲ್ಲ. ಅನ್ನದಾತ, ದೇಶದ ಬೆನ್ನೆಲುಬು ಎಂದು ಹೇಳುವ ಸರಕಾರ ಬ್ರಿಟಿಷರ ಕಾಲದ ನಿಯಮಗಳ ಮೂಲಕ ಪರಿಹಾರ ನೀಡಿ ರೈತರನ್ನು ಶೋಷಣೆ ಮಾಡುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ನಾಲ್ಕು ಪ್ರಮುಖ ಭೂಸ್ವಾಧೀನ ಪ್ರಕ್ರಿಯೆಗಳನ್ನು ಜಿಲ್ಲೆ ಕಂಡಿದೆ. ಹೇಮಾವತಿ ನಾಲೆ, ರಾಷ್ಟ್ರೀಯ ಹೆದ್ದಾರಿ, ಕೈಗಾರಿಕಾ ವಸಾಹತು ಹಾಗೂ ಗೇಲ್ ಇಂಡಿಯಾ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರು ಒಗ್ಗೂಡಿ ಹೋರಾಟ ಮಾಡಿದ ಪರಿಣಾಮ ಹೆಚ್ಚು ಪರಿಹಾರ ಪಡೆಯಲು ಸಾಧ್ಯವಾಗಿದೆ.ಆದ್ದರಿಂದ ಈ ವಿಚಾರದಲ್ಲಿಯೂ ರೈತರೆಲ್ಲಾ ಒಗ್ಗೂಡಿ ಪಕ್ಷಭೇದ ಮರೆತು ಹೋರಾಟಕ್ಕೆ ಮುಂದಾಗುವುದರ ಜೊತೆಗೆ ಗ್ರಾಮ ಸಮಿತಿಗಳನ್ನು ರಚಿಸಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ. ಸರಕಾರದ ಮೇಲೆ ಒತ್ತಡ ತಂದು ರೇಲ್ವೆ ಭೂಸ್ವಾಧೀನಕ್ಕೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸುವಂತೆ ಮಾಡಬೇಕು ಎಂದರು.
31ರಂದು ಮತ್ತೊಂದು ಸಮಾವೇಶ: ರೈತರು ಮತ್ತು ರೈತ ಮುಖಂಡರ ಅಭಿಪ್ರಾಯಗಳನ್ನು ಆಲಿಸಿದ ನಂತರ ಆ. 31 ಕ್ಕೆ ಮತ್ತೊಂದು ಸಮಾವೇಶ ನಡೆಸುವುದು ಹಾಗೂ ಇಂದಿನ ಮಾರುಕಟ್ಟೆ ದರದಂತೆ ಪರಿಹಾರ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಅಲ್ಲದೆ ಶಾಸಕರಾಗಿರುವ ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಭೇಟಿ ಮಾಡಿ ಸದನದಲ್ಲಿ ಚರ್ಚಿಸಿ ರೈತರ ಭೂಮಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತಮುಖಂಡರಾದ ವಿಜಯಕುಮಾರ್, ಮಹದೇವಯ್ಯ, ಡಿ.ಶಿವಕುಮಾರ್ ಸೇರಿದಂತೆ ಊರುಕೆರೆ, ಕುಚ್ಚಂಗಿ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

