ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ: ಸಮ ಬಲದ ಹೋರಾಟ
ಕ.ಪ್ರ.ವಾರ್ತೆ ತುರುವೇಕೆರೆ ಆ.29
ಇಲ್ಲಿಯ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಗಾಧಿ ಯಾರಿಗೂ ಸುಲಭವಾಗಿ ಸಿಲುಕದ ನಕ್ಷತ್ರವಾಗಿದೆ. ಕಾರಣ ಇಲ್ಲಿ ಇರುವ 14 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಜೆಡಿಎಸ್ ಪಡೆದಿದ್ದರೆ, 4 ಸ್ಥಾನಗಳು ಕಾಂಗ್ರೆಸ್‌ಗೂ, 3 ಸ್ಥಾನಗಳು ಕೆಜೆಪಿಗೂ ಲಭಿಸಿದೆ. ಚುನಾವಣೆ ನಡೆದಿದ್ದಾಗ ಬಿಜೆಪಿ ಸರ್ಕಾರವೇ ಇದ್ದರೂ ಸಹ ಬಿಜೆಪಿ ಶೂನ್ಯ ಸಂಪಾದನೆ ಮಾಡಿದ್ದು ಇತಿಹಾಸವೇ ಆಗಿದೆ. ಈಗ ಸ್ಥಳೀಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಮತ್ತು ಕೆಜೆಪಿ ಒಂದಾಗುವುದು ನಿಶ್ಚಿತ. 4 ಸದಸ್ಯರ ಬಲದ ಕಾಂಗ್ರೆಸ್, 3 ಸದಸ್ಯರ ಬಲದ ಕೆಜೆಪಿ ಒಟ್ಟಿಗೆ ಸೇರಿದರೂ ಸಹ 7 ಸ್ಥಾನಗಳು ಆಗಲಿವೆ. ಅಂದರೆ ಸಮಬಲದ ಹೋರಾಟ ನಿಶ್ಚಿತ.
ಈ ಮಧ್ಯೆ ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರು ಜೆಡಿಎಸ್ ಪರವಾಗಿ ಮತ ಚಲಾಯಿಸಿದರೆ, ಜಿಲ್ಲಾ ಸಂಸದರು ಕೆಜೆಪಿ - ಕಾಂಗ್ರೆಸ್ ಪರ ಮತ ಚಲಾಯಿಸುತ್ತಾರೆ. ಆದರೂ ಸಹ ಸಮ ಬಲವೇ ಆಗಲಿದೆ. ಜೆಡಿ ಎಸ್‌ನ ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಅವರಿಗೆ ಪಟ್ಟಣ ಪಂಚಾಯ್ತಿ ಪರವಾಗಿ ಮತ ಚಲಾಯಿಸಲು ಹಕ್ಕು ಇದೆ, ಇಲ್ಲ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹುಲಿನಾಯ್ಕರ್ ಅವರ ಹೆಸರು ಸೇರ್ಪಡೆಗೊಂಡರೆ ಮಾಜಿ ಕೈಮಗ್ಗ ಅಭಿವೃಧ್ಧಿ ನಿಗಮದ ಅಧ್ಯಕ್ಷ ಹಾಗೂ ಕೆಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ್ ಸಹ ತಮ್ಮ ಮತವನ್ನು ಚಲಾಯಿಸಲು ಹಕ್ಕು ಮಂಡಿಸಬಹುದು. ಆಗಲೂ ಸಹ ಸಮ ಬಲದ ಹೋರಾಟ ಶತಸ್ಸಿಧ್ಧ. ಈ ಮಧ್ಯೆ ಇದೇ ತಾಲೂಕಿನ ಜಗ್ಗೇಶ್ ಸಹ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರೂ ಸಹ ಮತ ಚಲಾಯಿಸಲು ಹಕ್ಕು ಮಂಡಿಸಬಹುದು. ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿರುವುದರಿಂದ ಜೆಡಿಎಸ್ ಪರವಾಗಿ ಮತ ಚಲಾಯಿಸುವರೋ ಅಥವಾ ತಟಸ್ಥರಾಗಿ ಬಿಡುವರೋ ಎಂಬುದು ಗೊತ್ತಾಗುತ್ತಿಲ್ಲ.
ಸ್ಪಷ್‌ನೆ ಕೋರಿಕೆ: ಈ ಎಲ್ಲಾ ಅಂಶಗಳ ನಡುವೆ ವಿಧಾನ ಪರಿಷತ್‌ಗೆ ನಾಮಿನಿ ಸದಸ್ಯರಾಗಿರುವ ಎಂ.ಡಿ.ಲಕ್ಷ್ಮೀನಾರಾಯಣ್ ಹಾಗೂ ಜಗ್ಗೇಶ್ ಅವರಿಗೆ ಮತ ಚಲಾವಣೆ ಮಾಡುವ ಅಧಿಕಾರ ಇದೆಯೇ ಇಲ್ಲವೇ ಎಂಬುದು ಇನ್ನೂ ಗೊಂದಲವಿದ್ದು ಚುನಾವಣಾ ಆಯುಕ್ತರನ್ನು ಈ ಬಗ್ಗೆ ಸ್ಪಷ್ಟನೆ ಕೋರಲಾಗಿದೆ. ಎಂ.ಡಿ.ಲಕ್ಷ್ಮೀನಾರಾಯಣ್ ತುಮಕೂರು ಜಿಲ್ಲೆಯನ್ನು ನೋಡಲ್ ಜಿಲ್ಲೆಯೆಂದೂ, ತುರುವೇಕೆರೆಯನ್ನು ನೋಡಲ್ ತಾಲ್ಲೂಕೆಂದೂ ಗುರುತಿಸಿಕೊಂಡಿದ್ದಾರೆ. ಆದರೆ ಜಗ್ಗೇಶ್ ಯಾವ ಜಿಲ್ಲೆ, ಯಾವ ತಾಲ್ಲೂಕನ್ನು ನೋಡಲ್ ತಾಲ್ಲೂಕೆಂದು ಗುರುತಿಸಿಕೊಂಡಿದ್ದಾರೆ ಎಂದು ತಿಳಿದುಬಂದಿಲ್ಲ.
ನೇತ್ರಾವತಿ ರಂಗಸ್ವಾಮಿ ಕಣದಲ್ಲಿ?: ಅಧ್ಯಕ್ಷ ಸ್ಥಾನದ ಗಾದಿ ಸಾಮಾನ್ಯ ಮಹಿಳೆಗೆ ಇರುವುದರಿಂದ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಗೆದ್ದಿರುವ ಜೆಡಿ ಎಸ್ 14 ನೇ ವಾರ್ಡಿನ ಸದಸ್ಯೆ ಹೆಚ್.ಆರ್.ನೇತ್ರಾವತಿ ರಂಗಸ್ವಾಮಿ ಸಹಜವಾಗಿ ತಮ್ಮ ಹಕ್ಕನ್ನು ಮಂಡಿಸಿದ್ದಾರೆ. ಇವರೊಂದಿಗೆ ಜೆಡಿಎಸ್ ನವ್ಯ ಪ್ರಕಾಶ್ ಶಾಸಕರ ಕೃಪೆಗಾಗಿ ಕಾದು ಕುಳಿತಿದ್ದಾರೆ. ಆದರೆ ಸಾಮಾನ್ಯ ಮಹಿಳೆಗೇ ಅವಕಾಶ ಬಂದಿರುವುದರಿಂದ ಶಾಸಕರು ನೇತ್ರಾವತಿ ರಂಗಸ್ವಾಮಿಯವರನ್ನೇ ಅಧ್ಯಕ್ಷ ಗಾಧಿಗೆ ಇಳಿಸಲು ಮನಸ್ಸು ಮಾಡಬಹುದು. ಇತ್ತ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್10 ನೇ ವಾರ್ಡ್ ನ ಮನೋಜ್ ಕುಮಾರ್‌ನ್ನು ಅಖಾಡಕ್ಕೆ ಇಳಿಸಬಹುದು. ಕಾಂಗ್ರೆಸ್ ಹಾಗೂ ಕೆಜೆಪಿಯ ಹೊಂದಾಣಿಕೆಯಲ್ಲಿ ಮಹಿಳೆಗೆ ಅಧ್ಯಕ್ಷ ಸ್ಥಾನ 9 ನೇ ವಾರ್ಡ್‌ನ ಸದಸ್ಯೆ ಲೀಲಾ ರಂಗಸ್ವಾಮಿಯವರಿಗೆ ಅನಾಯಾಸವಾಗಿ ಲಭಿಸಲಿದೆ. ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ನ 1 ನೇ ವಾರ್ಡ್‌ನ ಸದಸ್ಯ ಮಹೇಶ್ ಅಥವಾ 13 ನೇ ವಾರ್ಡ್ ಸದಸ್ಯ ಕೆ.ಟಿ.ಶಿವಶಂಕರ್ ಅವರ ಪರ ಆಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

